Skip to main content

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ. 



9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ಒಂದು ಕೈ ಹೆಚ್ಚೇ ಚಿಂತೆಯಾಗುತ್ತಿತ್ತು.

ತಕ್ಷಣ ಶಿಫ್ಟ್ ಚಾರ್ಟ್ ತೆಗೆದು ನೋಡಿದೆ.. "ಅಯ್ಯೋ! ನಾಳೆ ಪಾಳಿಯಲ್ಲಿ ನನ್ನ ವಿಭಾಗದಲ್ಲಿ ಕೆಲಸ ಮಾಡುವ ಇನ್ನಿಬ್ಬರೂ, ರಜೆಯಲ್ಲಿದ್ದಾರೆ" ನಿಧಾನಕ್ಕೆ ಬಸ್ಸಿನವರ ಮೇಲಿದ್ದ ಕೋಪವನ್ನು "ನಾ ಲ್ಯಾಪ್‌ಟಾಪ್ ತಕತ್ತೆ ಯಾವ್ದಕ್ಕೂ ಇರ್ಲಿ" ಎಂದಾಗ "ಬೇಡ ಅದಲವ ಆರಾಮ್ ಹೋಯ್ಬಪ್ಪ" ಎಂದವನ‌ ಮೇಲೆ ತಿರುಗಿತು. ಅವನಿಗೂ ಗತಿ ಇಲ್ಲ ನನ್ನ ಮಾತು ಕೇಳಲೇಬೇಕು. ಆದರೆ, ರಾತ್ರಿ ಬೇಗನೇ ನಿದ್ರಾದೇವಿ ಆವರಿಸುವ ಅವನಿಗೂ ನಿದ್ದೆ ತಪ್ಪಿ ಕಿರಿಕಿರಿಯಾಗಿ ಚೂರು ಜೋರಾದ‌. ನಾನು ತಣ್ಣಗಾದೆ. 

ಅಷ್ಟರಲ್ಲೇ ಆಟೋ ಚಾಲಕನೊಬ್ಬ ಈ ಸಮಯ ಬಳಸಿ ತಾನು ಹಣ ಮಾಡಿಕೊಳ್ಳಲು ನೋಡುತ್ತಿದ್ದ. "ನನಗೆ ಬಸ್ ರಿಪೇರಿ ಮಾಡುವವನ ಗುರುತಿದೆ ಬಸ್ ರಿಪೇರಿ ಆಗಲಾರದು" ಎಂದು ದೊಡ್ಡದಾಗಿ ಹೇಳಿದ. ಆ ಮಾತನ್ನು ಕೇಳಿದ ಹಲವರಿಗೆ ಗಾಬರಿ ಆಯಿತು. ನಾನು ದೇವಸ್ಥಾನದ ವಸತಿ ಗ್ರಹಕ್ಕೆ ಡ್ರಾಪ್ ಮಾಡ್ತೀನಿ ಎಂದ. ಆಗ ಇನ್ನೂ ಕೆಲವರಿಗೆ ಹೋಗಿಬಿಡೋಣ ಎನಿಸಿತು. ಆದರೆ, ನಾಳೆ ರವಿವಾರ ಮೊದಲೆ ಎಲ್ಲ ಬಸ್‌ಗಳು ಬುಕ್ ಆಗಿರುತ್ತದೆ ಎಂದು ನೆನಪಾಗಿ ಎಷ್ಟು ಸಮಯವಾದರೂ ಸರಿ ಕಾಯೋಣ ಎನಿಸಿ ಸ್ವಲ್ಪ ಜನ ಕೂತರು. ನಾವಿಬ್ಬರೇ ಆದರೆ ಇಲ್ಲಿ ಕೂರೋದು ಕಷ್ಟ ಎಂದೇನಿಸಲು ಆರಂಭವಾಗಿತ್ತು. ಮಲಗಲು ಜಾಗವೂ ಇರಲಿಲ್ಲ. 


ಇಲ್ಲಿದ್ದ ನಾಯಿಗಳು, ಹಸುಗಳು ಎಲ್ಲ ಮಲಗಿ ಹಾಯಾಗಿ ಕನಸು ಕಾಣುತ್ತಿದ್ದಂತೆ ಭಾಸವಾಗತೊಡಗಿತು. ಅವರ ನೆಮ್ಮದಿ ನಮ್ಮ ನಿದ್ದೆಗಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಅಷ್ಟರಲ್ಲಿ ಪೊಲೀಸರು ಬೀಟಿಗೆ ಬಂದರು. ಬಂದರು, ಹೋದರು ಅಷ್ಟೇ.. ಅವರಿವರು ಪೋನ್ ಮಾಡಿ ಡ್ರೈವರ್ಗೂ ತಲೆ ಕೆಟ್ಟಿತ್ತು. ಇಲ್ಲಿನ ಎಲ್ಲರ ತಲೆಯೂ ಬಿಸಿಯಾಗಿತ್ತು, ಹೊರಗಡೆ ಚೂರು ಚಳಿ ಇತ್ತು. 

ಅಷ್ಟರಲ್ಲೇ ಹತ್ತತ್ತಿರ ಒಂದು ಗಂಟೆ ಸುಮಾರಿಗೆ ಮಹಿಳೆಯರ ವಿಶ್ರಾಂತಿ ಕೊಠಡಿ ಒಳಗಿನಿಂದ ಒಬ್ಬ ಎದ್ದು ಬಂದು ಉಚ್ಚೆ ಹೊಯ್ದು ಮತ್ತೆ ವಾಪಸ್ ಹೋಗಿ, ಇಲ್ಲೇನು ನಡೆದೇ ಇಲ್ಲ ಎನ್ನುವ ರೀತಿಯಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿಯ ಬಾಗಿಲು ಭದ್ರಪಡಿಸಿ ಮತ್ತೆ ಮಲಗಿದ. ಅವನನ್ನು ನೋಡಿ ತಲೆಬಿಸಿಯಲ್ಲಿ ಬಿಸಿ,ಬಿಸಿ ಚರ್ಚೆ ಮಾಡುತ್ತಿದ್ದವರಿಗೆಲ್ಲ ನಗುಬಂತು.


ಎಷ್ಟೊತ್ತಾದರೂ ಪೋನ್ ಎತ್ತದ ಕಂಡಕ್ಟರ್ ಕಾಲ್ ಪಿಕ್ ಮಾಡಿದ್ದ. ಬಸ್ ಹೊರಟಿದೆ ಎಂದ. ಇದೇ ಮಾತನ್ನು ಈಗಾಗಲೆ ಹಲವು ಬಾರಿ ಆಡಿದ ಕಾರಣ ಎಲ್ಲರೊ ಬೈಯ್ಯುತ್ತಿದ್ದರು. ಇವರ ಬೈಗುಳ ಕೇಳಿ ಪಾಪ ಎನಿಸಿದರೂ ಅವ ಮಾಡಿದ್ದಂತೂ ತಪ್ಪೇ ಆಗಿತ್ತು. ನಾನು "ಲೈವ್ ಲೊಕೇಶನ್ ಕಳಿಸಿ ನಂಬುತ್ತೇವೆ ಇಲ್ಲ ಎಂದರೆ ಹಣ ಹಿಂದುರುಗಿಸಿ" ಎಂದೆ. ಅದರಲ್ಲಿ ಲೈವ್ ಲೊಕೇಶನ್ ಕಳಿಸುವ ಉಪಾಯ ಫಲಸಿತು. ಎಲ್ಲರಿಗೂ ಸಮಾಧಾನವಾಯಿತು. ಯಾಕೆಂದರೆ ಬಸ್ ಚಲಿಸತೊಡಗಿತ್ತು.‌ ಮೊಬೈಲ್ ಹಿಡಿದುಕೊಂಡು ಬಸ್ ಬರುವ ಮ್ಯಾಪನ್ನೇ ನೋಡುತ್ತಿದ್ದವರಿಗೆ ಜೈಪುರ ಎಂಬ ಗ್ರಾಮವೋ, ಪಟ್ಟಣವೋ ಯಾವುದೋ ಒಂದು. ಆ ಪ್ರದೇಶ ಬಂದ ತಕ್ಷಣ ಒಂದು ಶಾಕ್ ಕಾದಿತ್ತು. ಅಲ್ಲಿ ನಿಂತ ಬಸ್ ಅಲುಗಾಡುತ್ತಲೇ ಇರಲಿಲ್ಲ. ಮತ್ತೆ ತಲೆಕೆಟ್ಟು ಕಾಲ್ ಮಾಡಿದರು. "ಪಾಪ ಅವನು ಉಚ್ಚೆಹೊಯ್ಯಲು ಇಳಿದಿದ್ದನೇನೋ" ಸ್ವಲ್ಪ ಸಮಯದ ನಂತರ ಮತ್ತೆ ಚಲಿಸತೊಡಗಿತು. 


ನಾಳಿನ ಚಿಂತೆಯಲ್ಲಿ ನಾನು ಈ ಬ್ಲಾಗ್ ಮುಗಿಸುತ್ತಿದ್ದೇನೆ. ನಾಳಿನ ಕೆಲಸ ಸಾಂಗವಾದರೆ ಸಾಕಾಗಿದೆ. 
ಅಷ್ಟೇ...
ನಿಮಗೆಲ್ಲ ಶುಭರಾತ್ರಿ.. ನನಗೆ... ಇದು ರಾತ್ರಿ..

ಸುಮಾ ಕಂಚೀಪಾಲ್

Comments

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...