ದೀಪಾವಳಿಯಲ್ಲಿ 'ಬೂದೆ ಕಳು' ಎಂಬ ಹಬ್ಬ ಬರುತ್ತದೆ. ಈ ಹಬ್ಬ ಇತ್ತೀಚಿನ ದಿನಗಳಲ್ಲಿ ಆಚರಣೆಯಲ್ಲಿ ಇಲ್ಲವಾದರೂ ಹಿಂದೆಲ್ಲ ಈ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸುತ್ತಿದ್ದರು ಎನ್ನುವುದಕ್ಕೆ ನಾನೇ ಸಾಕ್ಷಿ. ನಾನು ತುಂಬಾ ಚಿಕ್ಕವಳಿದ್ದಾಗ ನನ್ನ ಅಜ್ಜಿ ಮನೆಯಲ್ಲಿ ನಾನು ಈ ಹಬ್ಬದ ಆಚರಣೆಯ ಬಗ್ಗೆ ತಿಳಿದುಕೊಂಡೆ. ಇನ್ನು ನಮ್ಮ ಮನೆಯಲ್ಲಿ ಈ ರೀತಿ ಹಬ್ಬದ ಆಚರಣೆಯ ಬಗ್ಗೆ ನಾನು ವಿವರಣೆಯನ್ನು ಮಾತ್ರ ಕೇಳಿದ್ದೆ. ಆದರೆ ಇದನ್ನು ಕಣ್ಣಾರೆ ಕಂಡು ಭಾಗಿಯಾಗಿದ್ದು ಮಾತ್ರ ಅಜ್ಜನ ಮನೆಯಲ್ಲಿ. ಅಜ್ಜನ ಮನೆಯೆಂದರೆ ಅದೊಂದು ದ್ವೀಪ. ಸುತ್ತಲೂ ನೀರು, ನಡುವೆ ನನ್ನ ಅಜ್ಜನ ಮನೆ. 'ಅಮ್ಮ' ಎಂಬ ಬಳ್ಳಿಯ ಬೇರು ಊರಿಕೊಂಡಿದ್ದ ಜಾಗ ಅದು. ಅಲ್ಲಿ ಹೋದಾಗಲೆಲ್ಲ ತುಂಬಿ ಗಲಗುಡುವ ಮನೆ. ಹತ್ತಾರು ಜನರು ಒಟ್ಟಿಗೆ ಕೂಡಿ ಬಾಳುತ್ತಿದ್ದ ಮನೆ ದಬ್ಬೇಸಾಲು. ಮರುದಿನವಾದರೆ ಲಕ್ಷ್ಮೀ ಪೂಜೆ. ಹಿಂದಿನ ದಿನವೇ ಈ ಬೂದೆ ಕಳು ಹಬ್ಬ. ಯಾರಿಗೂ ನಷ್ಟವಾಗದಂತೆ ಚಿಕ್ಕ ಪುಟ್ಟ ವಸ್ತುಗಳನ್ನು ಮಾತ್ರ ಕದಿಯುವ ಹಬ್ಬ. ಈ ಕಳು ಮಾಡುವ ಹಬ್ಬ ಯಾಕೆ ಆಚರಣೆಯಲ್ಲಿ ಬಂತು? ಅದರ ಹಿಂದಿನ ಇತಿಹಾಸ ಮತ್ತು ಆಚರಣೆಗೆ ಕಾರಣ ಏನು ಎಂಬುದು ನನಗೆ ತಿಳಿದಿಲ್ಲ. ನಿಮಗೇನಾದರೂ ತಿಳಿದಿದ್ದರೆ ನೀವು ವಿವರಿಸಬಹುದು. ದಬ್ಬೇಸಾಲು ಊರಿನಲ್ಲಿ ಹಳ್ಳಗಳನ್ನು ದಾಟುತ್ತಲೇ ಒಂದೊಂದು ಮನೆ ತಲುಪಬೇಕು. ಹೀಗಿರುವಾಗ ನಾನು ತುಂಬಾ ಚಿಕ್ಕವಳು, ಒಂದೆರಡನೇ ತರಗತಿ ...