ಅಷ್ಟಕ್ಕೂ ನಾವು ಮದುವೆ ಆಗಿದ್ದೇ ಬರೋಬ್ಬರಿ ಚುನಾವಣೆಯ ಕಾಲಗತಿಯಲ್ಲಿ. ನಾವು ಅಂದರೆ ಮತ್ಯಾರೂ ಅಲ್ಲ, ನಾನು ಮತ್ತು ಸುಮಾ. ಇಬ್ಬರೂ ಮಾಧ್ಯಮದಲ್ಲಿ, ಹೇಳಿಕೇಳಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದು ಮತದಾನ ಮುಗಿದರೂ ನಾಕು ದಿನ ರಜೆ ಹಾಕಲು ಅನುವು ಮಾಡಿರಲಿಲ್ಲ. ಚುನಾವಣೆ ಮುಗಿದು, ಸರ್ಕಾರ- ಮಂತ್ರಿ ಮಂಡಲ ರಚನೆಯೂ ಆಗಿಹೋದ ಮೇಲಾದರೂ ಒಂದು ಕೈ ನೋಡೇಬಿಡೋಣ ಎಂದು ಹೊರಟೆವು. ನಮಗೆ ಬೇಕಿದ್ದು, ಅದಾಗೇ ಕೂಡಿಬಂದದ್ದು ಎಲ್ಲವೂ ಸೇರಿ ಒಂದು ರಾತ್ರಿ ಕಳೆದು ಬೆಳಗು ಕೂಗುವದರಲ್ಲಿ ಒಂದು ಮುತ್ತಿನ ನಗರಿ!
ನಮ್ಮ ಸಮಯಕ್ಕೆ ರೈಲು, ರೈಲಿನ ಸಮಯಕ್ಕೆ ನಾವು ಸೆಟ್ ಆಗುವುದಿಲ್ಲ ಎಂದು ಅಳೆದು ತೂಗಿ ಕೊನೆಕ್ಷಣದಲ್ಲಿ ಬಸ್ ಮೆಟ್ಟಿಲು ಹತ್ತುವ ನಿರ್ಧಾರ ಮಾಡಿದ್ದಾಯಿತು. ಮೊದಲು ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ಟಿಎಸ್ಆರ್‌ಟಿಸಿ ಬಸ್ ಪರಿಶೀಲಿಸಲಾಗಿ ಬಸ್‌ಗಳ ಚಿತ್ರಗಳೇ ನಮ್ಮನ್ನು ಭ್ರಮನಿರಸನ ಮಾಡಿದ್ದು ಸುಳ್ಳಲ್ಲ. ತೆಲಂಗಾಣದ ಲಹರಿ ಹೆಸರಿನ ಬಸ್‌ಗಳು ನಮ್ಮ ರಾಜಹಂಸ ಇದ್ದಹಾಗೆ, ಆದರೆ ನಮ್ಮ ಯಲ್ಲಾಪುರದಿಂದ ಕಾರವಾರಕ್ಕೋ, ಹುಬ್ಬಳ್ಳಿಗೋ ಬುರುಬುರುನೇ ತಿರುಗುವ, ಕೊನೆಗೆ ಕೊರೋನಾಕ್ಕಿಂತ ಮೊದಲು ಕಮ್ಮಾಣಿಯೋ ಕೆಳಾಸೆಗಳೆಂಬೋ ಮೂಲೆ ಮೂಲೆಯ ಊರುಗಳಿಗೆ ಓಡುವ ಬಸ್‌ಗಳೇ ಇವಕ್ಕಿಂತ ಚೆನ್ನ. ಆ ಲೆಕ್ಕದಲ್ಲಿ ನಮ್ಮ ಕೆಎಸ್ಆರ್‌ಟಿಸಿ ಎಷ್ಟೋ ಬೆಸ್ಟ್. ನಮ್ಮನ್ನು ಸುರಕ್ಷಿತವಾಗಿ ತಲುಪಿಸುವ ಹೊಣೆ ಕೆಎಸ್ಆರ್‌ಟಿಸಿಯ ಐರಾವತ ಸೀಟಿನ ಮೇಲೇ ಬಿತ್ತು ಬಿಡಿ.
ಅವಿಭಜಿತ ಆಂಧ್ರಪ್ರದೇಶವು ತೆಲಂಗಾಣವಾಗಿ ಬೇರ್ಪಟ್ಟ ಮೇಲೆ ನಾನು ತೆಲುಗಿನ ನೆಲ ಮೆಟ್ಟುತ್ತಿರುವುದು ಎರಡನೇ ಸಲ. ಕಾರಣ ಅಕ್ಕ, ಭಾವ ಮತ್ತು ಮುದ್ದು ಅಮೋಘವರ್ಷ. ಹಿಂದಿನ ಬಾರಿಯದ್ದು ಕೆವಿ ತಿರುಮಲೇಶರೇ ಅಕ್ಷಯ ಕಾವ್ಯವಾಗಿ ಹರಿಯುತ್ತಿದ್ದ ಕ್ಷಣಗಳ ದಿನಗಳು. ನಂತರ ಬರೆದದ್ದು ಭಾಳ ಕಡಿಮೆ. ಆಗ ಹೈದರಾಬಾದು ತೆಲಂಗಾಣಕ್ಕೂ ಆಂಧ್ರಕ್ಕೂ ಸಮಿಶ್ರ ರಾಜಧಾನಿಯಾಗಿದ್ದರೆ ಈ ಬಾರಿಯ ಹೈದರಾಬಾದಲ್ಲಿ ಆಂಧ್ರಕ್ಕೆ ಜಾಗ ಇರಲಿಲ್ಲ, ಇದಷ್ಟೇ ಹೊಸ ಬದಲಾವಣೆ. ತಿರುಮಲೇಶರಂತೂ ಮುದ್ದಾಂ ನನ್ನಲ್ಲಿ ಎಲ್ಲಿದ್ದರೋ ಅಲ್ಲೇ ಇದ್ದಾರೆ.
ಮುಂಜಾನೆಯ ಬೆಳಕು ಬಸ್ ಕಿಟಕಿ ಸರಿಸಿಕೊಂಡು ಮೆಲ್ಲಮೆಲ್ಲನೆ ಕಣ್ಣುರೆಪ್ಪೆ ಸೀಳಿ ಓ..ಹೈದರಾಬಾದು ಬಂದೇ ಬಿಡ್ತಾ ಎಂಬ ಪ್ರಶ್ನೆಗೆ ಉತ್ತರ ಹೊತ್ತು ಬಂದಿದ್ದು ತೆಲುಗಿನ ಅನೇಕಾನೇಕ ಬೋರ್ಡುಗಳು. ನಾವು ಎಂಜಿಬಿಎಸ್‌ನಲ್ಲಿ ಬಸ್ ಇಳಿದಂತೆ ಬಂದಿದ್ದ ಬಾವ, ಊರಿಂದ ಕೆಂಪು ಬಸ್ ಹತ್ತಿ ಬಂದಿದ್ದ ಅಪ್ಪ ಬಂದುಮುಟ್ಟಿದ್ದೇ ತಡ, ಹೊರಟಿತು ಸವಾರಿ.
ನೀವು ಬೇಡ ಬೇಡ ಅಂದರೂ ಹೈದರಾಬಾದಿನ ಜೊತೆ ಮನಸ್ಸು ಬೆಂಗಳೂರಿನ ಹೋಲಿಕೆ ಮಾಡಲು ಶುರುಮಾಡುತ್ತದೆ. ಅತ್ತ ಹಳೆ ಹೈದರಾಬಾದಿನಿಂದ ಇತ್ತ ಸಿಕಂದರಾಬಾದಿನವರೆಗೆ ಓಡಾಡುವಾಗ ಸಿಕ್ಕ ಸಿಕ್ಕ ರಸ್ತೆ ಸರ್ಕಲ್ಲುಗಳಲ್ಲಿ ಇಲ್ಲಿ ನಾನಿದ್ದೇನೆ, ಇಲ್ಲಿಯೂ ನಾನಿದ್ದೇನೆ, ಇಲ್ಲಂತೂ ನಾನೇ ಇದ್ದೇನೆ ಎನ್ನುವ ಪ್ರತಿಮೆಗಳು ನಿಮ್ಮನ್ನೇ ಹಿಂಬಾಲಿಸಿ ಹಿಂಬಾಲಿಸಿ ಬರುತ್ತವೆ. ಪ್ರತಿಮಾ ರಾಜಕೀಯಕ್ಕೆ ಸಿಲುಕಿದ ತೆಲುಗು ರಾಜ್ಯದ ಸರ್ಕಲ್ಲುಗಳು ಚಂದ ಅನಿಸುತ್ತ ನಿಧನಿಧಾನವಾಗಿ ಯಾಕಿಷ್ಟೆಲ್ಲ ಪ್ರತಿಮೆಗಳೆಂಬ ಊಹೆ ಹುಟ್ಟಿಸುತ್ತವೆ. ಎನ್‌ಟಿಆರ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಳಕೆಗೆ ಬಂದ ಪ್ರತಿಮೆ ಪ್ರತಿಷ್ಠಾಪನೆಯ ಹುಕಿಯಿಂದ ಹಿಂದಿನ ವರ್ಷ ಚುನಾವಣೆಯ ನಿಮಿತ್ತ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ಗೆ ಒಂದೇ ಒಂದು ಹೈದರಾಬಾದ್ ಪೇಟೆಯಲ್ಲಿ 22,376 ಪ್ರತಿಮೆಗಳ ತಲೆಬೊಂಡಗಳನ್ನು ಮುಸುಕುಧಾರಿಗಳನ್ನಾಗಿ ಮಾಡುವ ಕಷ್ಟ ಕೊಟ್ಟಿತ್ತು ಎಂಬಲ್ಲಿಗೆ ಬಂದುಮುಟ್ಟಿದೆ.
ಮುಂದಿನ ಭಾಗದಲ್ಲಿ; ತೆಲಂಗಾಣದಲ್ಲಿ ನೆನಪಾಗಿದ್ದು ಕರ್ನಾಟಕದ ವಿಧಾನಸೌಧ!
ಗುರುಗಣೇಶ ಡಬ್ಗುಳಿ
ಚಿತ್ರಗಳೂ ಅವರದ್ದೇ
vaividhya7@gmail.com
Comments
Post a Comment