Skip to main content

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ...



ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು.

ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯಾರಾದರೂ "ಕೂಸೆ, ನಿಂಗೆಲ್ಲಾತು?" ಎಂದು ಪ್ರಶ್ನೆ ಮಾಡಿದರೆ ನಾನಿನ್ನೂ ನಮ್ಮ ಮನೆ ಕಂಚೀಪಾಲ್ ಎಂದೇ ಉತ್ತರ ಕೊಡುತ್ತೇನೆ, ಅಷ್ಟು ಹೊಸ ಹಬ್ಬ. ಕಂಚೀಪಾಲ್ ಅದು ಗೊತ್ತು.. ನಿನ್ನ ಕೊಟ್ಟದ್ದು ಎಲ್ಲಿಗೆ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಡಬ್ಗುಳಿ ಎಂದು ಉತ್ತರಿಸುತ್ತೇನೆ. ಇನ್ನು ಈ ಕೊಟ್ಟದ್ದು ಎಂಬ ಪದದ ಬಗ್ಗೆ ನನಗೆ ಹಾಗೂ ನನ್ನ ಯಜಮಾನರಿಗೆ ಇಬ್ಬರಿಗೂ ಯಾವಾಗಲೂ ತಕರಾರಿದೆ. ಅದನ್ನು ಇನ್ನೊಮ್ಮೆ ವಿವರಿಸುತ್ತೇನೆ. ನಾಳೆ ಏನೇನಿದೆಯೋ? ನಾವು ಸರಿಯಾದ ಸಮಯಕ್ಕೆ ಮುಟ್ಟುತ್ತೇವೆಯೋ, ಇಲ್ಲವೋ? ಅಂದುಕೊಂಡಷ್ಟು ಜನ ಬರುತ್ತಾರಾ? ಎಂಬೆಲ್ಲ ಪ್ರಶ್ನೆಗಳನ್ನು ಮನದಲ್ಲಿಟ್ಟುಕೊಂಡು ನಾನು ಜೊತೆಗೆ ನಮ್ಮನೆಯವರು ಬೆಂಗಳೂರಿನಿಂದ ಬಸ್ ಹತ್ತಿದೆವು. ಆಗ ಸಮಯ ಒಂಭತ್ತು ಚಿಲ್ಲರೆ. ನಾನು ದಾರಿಯುದ್ದಕ್ಕೂ ಅವರಿವರಿಗೆ ಕಾಲ್ ಮಾಡಿ "ನಾಳೆ ಬನ್ನಿ ಹಬ್ಬಕ್ ಕರೀಲೆ" ಎಂದು ಆಹ್ವಾನ ನೀಡಿದೆ. ಎಲ್ಲರೂ ಬರುವ ಭರವಸೆ ನೀಡಿದರು.


ಹಾಗೇ ಬೆಳಿಗ್ಗೆ ಮನೆ ತಲುಪಿದ್ದಾಯ್ತು. ಬೈಕ್ ಮನೆಯಲ್ಲೇ ಇದ್ದ ಕಾರಣ ಬಸ್ಸಿಂದ ಇಳಿದು ಅರಬೈಲಿನಿಂದ ಆಟೋ ಮಾಡಿಕೊಂಡು ಡಬ್ಗುಳಿ ತಲುಪಿದೆವು. ದೋಸೆ ರೆಡಿ ಇತ್ತು. ಬೇಗ ಬೇಗ ಸ್ನಾನ ಮಾಡಿ ದೋಸೆ ತಿಂದು ನಾನು ವರ್ಕ್‌ ಪ್ರಂ ಹೋಮ್ ಎನ್ನುತ್ತ ಲ್ಯಾಪ್‌ಟಾಪ್ ಹಿಡಿದೆ. ಬಂದ ಒಂದಿನವೂ ಇವಳು ಕೈಗೆ ಸಿಗೋದಿಲ್ಲ ಎಂದು ಅನಿಸಿದರೂ ಅನಿಸಿರಬಹುದು. ಅಷ್ಟೊತ್ತಿಗೆ ಅಮ್ಮ ಬಂದರು. ಕಡು ಮಾಡುವ ತಯಾರಿ ಜೋರಿತ್ತು, ಹಿಂದಿನ ದಿನವೇ ಅಡುಗೆ ಅತ್ತೆ ಬಂದಿದ್ದರು. ಅವರು ಎಲ್ಲ ತಯಾರಿ ಮಾಡಿಕೊಂಡರೂ ಒಬ್ಬರ ಕೈಲಾಗದ ಕೆಲಸ ಅದಾಗಿತ್ತು. ಅತ್ತೆ, ಅಮ್ಮ, ಅಡುಗೆಯವರು ಎಲ್ಲ ಸೇರಿ ಕಡು ಕಟ್ಟಿದರೆ, ನಾನು ಒಂದು ಬ್ರೇಕ್ ತೆಗೆದುಕೊಂಡು ಕೋಸಂಬರಿಗೆ ಕ್ಯಾರೆಟ್ ತುರಿದೆ. 

ನಂತರ ಅಜ್ಜನಮನೆಯವರ ಜೀಪ್ ಬಂತು. ದತ್ತಜ್ಜನ ಉಸ್ತುವಾರಿಯಲ್ಲಿ ಸಾಕಷ್ಟು ಜನ ನಮ್ಮ ಮನೆಗೆ ಬಂದರು. ಆಗ ನನ್ನೆಜಮಾನರ ಖುಷಿ ಆರಂಭವಾಯ್ತು. ನನ್ನ ಖುಷಿಗಂತೂ ಪಾರವೇ ಇಲ್ಲ ಬಿಡಿ.. ಅವರಿಗೆ ಆಸ್ರಿಂಗೆ ಕೊಡುವಷ್ಟರಲ್ಲಿ.. ನಮ್ಮೂರಿಂದ ಅಪ್ಪ ಗಾಡಿ ಮಾಡಿಸಿಕೊಂಡು ಒಂದಷ್ಟು ಜನರನ್ನು ಕರೆತಂದಿದ್ದ. ಎಲ್ಲರ ಮುಖ ನೋಡುತ್ತಿದ್ದಂತೆ, ಲ್ಯಾಪ್‌ಟಾಪ್ ಬದಿಗೊತ್ತಿ ಒಳಗೊಳಗೇ ಕುಣಿಯತೊಡಗಿದೆ. ಬೆಂಗಳೂರಿನಲ್ಲಿ ಯಾರ ಮುಖವೂ ಕಾಣದ ಕಾರಣವೇ ಆ ಖುಷಿಗೆ ಇನ್ನಷ್ಟು ಪುಷ್ಟಿ ನೀಡಿತ್ತು. ಇಷ್ಟೊಂದು ಜನ ಬರಬಹುದು ಎಂಬ ಅಂದಾಜಿಲ್ಲದ ನನ್ನವರು ಕೋಣೆಗೆ ಬಂದು "ಅಬ ಅಂದಾಜೆ ಇಲ್ಯಲೆ.. ಬರ್ತಿ ಜನ ಬತ್ತಿದ್ದೊ ಕಣೆ. ಹೊಸ ಅಂಗಿಯಾರು ಹಾಯ್ಕಳಕಾತು" ಎನ್ನುತ್ತ ನಗುಮೊಗದಲ್ಲಿ ಹೇಳಿದ. ನಮ್ಮವರು ಬಂದಿರುವ ಗರ್ವದಲ್ಲೇ ನಾನೊಂದು ನಗೆ ಬೀರಿದೆ. ಅದು ಹೇಗಿತ್ತೆಂದರೆ " ನೋಡು ನನ್ನ ಪವರ್...ನನಗೆ ಎಷ್ಟೆಲ್ಲ ಜನರಿದ್ದಾರೆ" ಎಂಬಂತಿತ್ತು.

ನನ್ನ, ಅತ್ತೇರು.. ಮಾವ್ನೋರು ಕೂಡ ಈ ವಿಷಯದಲ್ಲಿ ತುಂಬಾ ಖುಷಿ ಪಡುವ ಜನ. ಮನೆಗೆಷ್ಟು ಜನ ಬಂದರೂ ಸಾಲದು.. ಅಂತದ್ರಲ್ಲಿ ಇಷ್ಟೊಂದು ಜನ ಬಂದಿರುವುದನ್ನು ಕಂಡು ಇಬ್ಬರಿಗು ಖುಷಿಯಾಗಿತ್ತು.  ಐವತ್ತು ಜನರ ಮೇಲೆ ಅಂದು ಊಟಕ್ಕೆ ಬಡಿಸಿದೆವು. ನಾನು ಮೀಟಿಂಗ್‌ನಲ್ಲಿ ಬ್ರೇಕ್ ಕೇಳಿ ಕೆಲಸ ಬಂದ್ ಮಾಡಿದ್ದೆ. ಜತೆಗೆ ಬೆಂಗಳೂರಿಂದ ಅಣ್ಣನೂ ಬಂದಿದ್ದ. ಅವನನ್ನು ಕಂಡು "ಅಣ್ಣ ಬಂದಾನ‌ ಕರಿಯಾಕ" ಎಂಬ ಸಾಲು ನೆನಪಾಯ್ತು. ಬಾಯಿಗೆ ಬಿಡುವಿಲ್ಲದಂತೆ ಎಲ್ಲರೊಡನೆ ಮಾತಾಡಿದೆ. ಕೇರಿಯ ಚಿಕ್ಕಮ್ಮಂದಿರಂತೂ ಮುದ್ದಿಸಿದರು. ಅದು ಇದು ಮಾತಾಡಿ ಮದುವೆಯ ಸುಖ, ದುಃಖ ಆಲಿಸಿದರು. ಒಳಗೊಳಗೇ ರೇಗಿಸಿದರು. ಅಪ್ಪ ಮಾತ್ರ ಮಂದ ನಗೆ ಬೀರುತ್ತಿದ್ದ. ಅವನಿಗಿನ್ನೂ ನಾನು ಮನೆಯ ಕೂಸೆ ಆಗಿರಬೇಕೆಂಬ ಬಯಕೆ. ಅಮ್ಮನಿಗೂ ಹಾಗೇ ಆದರೆ ಅವಳು ತೋರಿಸಿಕೊಳ್ಳುವುದಿಲ್ಲ.

ಆಕಳ ಕರುವೊಂದನ್ನು ಬೇರೆ ಮನೆಗೆ ಕೊಡುವುದಾದರೇ ಅಂದು ಇಡೀ ದಿನ ಮೌನಾಚರಣೆ ಮಾಡುತ್ತಿದ್ದ ನಮಗೆ, ಇದೆಲ್ಲವೂ ನಿಧಾನವಾಗಿ ಅಭ್ಯಾಸವಾಗುತ್ತಿದೆ. ಕಷ್ಟವೇ ಆದರೂ..ಅನಿವಾರ್ಯವೂ ಹೌದು. ಅಂದು ಅವರೆಲ್ಲ ಮನೆಗೆ ಹೋಗುವಾಗ ಅವರೊಡನೆ ನಾನೂ ಹೋಗಿಬಿಡಬೇಕು ಎಂದೆನಿಸಿದರೂ ಹೋಗಲು ಆಗದಾಗ ಕಣ್ಣಲ್ಲಿ ಎರಡು ಹನಿ ನೀರು ಬಂತು..ಆದರೆ, ತೋರಿಸಿಕೊಳ್ಳಲಿಲ್ಲ..ಅವರೆಲ್ಲ ಖುಷಿಯಿಂದ ದೀಪಾವಳಿ ಹಬ್ಬಕ್ಕೆ ಕರಿಯಲು ಬಂದವರನ್ನು ನಾನೂ ಅಷ್ಟೇ ಖುಷಿಯಿಂದ ಕಳಿಸಬೇಕೆಂದುಕೊಂಡೆ. ಅಷ್ಟರಲ್ಲಿ ಅಮಟೆ ಕಾಯಿ ಕೊಯ್ಯುವ ಮನಸಾದ ನನ್ನ ಅತ್ತೆ ಕೊಕ್ಕೆ ತಂದರು. ಕೇರಿಯ ಹೆಂಗಸರೆಲ್ಲರಿಗಾಗುವಷ್ಟು ಅಮಟೆಕಾಯಿ ಉದುರಿಸಿದರು. 


ನಾವೆಲ್ಲ ಮೋಜು ಮಾಡುತ್ತ ಹೆಕ್ಕಿದೆವು. "ಸುಮಾನ್ ಮನೆ ಅಮಟೆಕಾಯಿನೂ ತಕಂಡೋದಂಗಾತು ನೋಡು ಕೂಸೆ. ಅರಾಮಿರು. ಹಬ್ಬಕ್ ಬಾ ಇದ್ರದ್ದೆ ಮೆಲ್ಲಾರ ಮಾಡ್ವಾ" ಎಂದು ಮನಸಿಂದ ಕರೆದರು."ಆಗ ನನ್ನ ನಗು ಕುಂದುತ್ತ ಬಂದಿತ್ತು. ಆದರೂ ಹೂ.. ಎಂದೆ. ತಡಿರಿ ಕೊಟ್ಟೆ ತತ್ತೆ ಎನ್ನುತ್ತಾ ಕೆಳಗಡೆ ಓಡಿ ಹೋಗುವಾಗಲೆ ಒಂದೆರಡು ಹನಿ ಕಣ್ಣಿಂದ ಉದುರಿತು. ಮತ್ತೆ ಬಂದೆ. ಎಲ್ಲರೂ ಹೊರಟರೂ ನಾನು ಭಾರವಾದ ಮನಸಿಂದ ಮನೆಗೆ ಬಂದು ಕೆಲಸಕ್ಕೆ ಕೂತೆ. ಎಲ್ಲ ಮರೆತು ಹೋಯಿತು.



ರಾತ್ರಿ ಮಧ್ಯಾಹ್ನದ ಊಟಕ್ಕೆ ಮಾಡಿದ್ದ ನಾನಾ ರೀತಿಯ ಅಡುಗೆ, ಕಡು ಎಲ್ಲವೂ ಇತ್ತು. ತಿಂದುಂಡು ಮಲಗಿದೆವು. ನನಗೆ ನಿದ್ರೆ ಬಂದಿರಲಿಲ್ಲ. ಇವನು ನಿಧಾನಕ್ಕೆ ನಿದ್ರೆಗೆ ಜಾರಿ ಜೋರಾಗಿ ಉಸಿರು ಬಿಡಲು ಆರಂಭಿಸಿದ್ದ. ಎಷ್ಟೊತ್ತಾದರೂ ನಿದ್ರೆ ಬರದ ನನಗೆ ನಾನು ಎಲ್ಲೋ.. ಅತಿ ದೂರ ಇದ್ದೇನೆ ಎಂಬಂತೆಲ್ಲ ಭಾಸವಾಯ್ತು. ಅಳು ಸ್ವಲ್ಪ ಜೋರೇ ಆಯ್ತು. ಇವನಿಗೆ ಎಚ್ಚರವಾಯ್ತು. "ಏನಾತೆ" ಎಂದು ಮೆಲು ಧ್ವನಿಯಲ್ಲಿ ಕೇಳಿದ. ಚಿಕ್ಕ ಮಕ್ಕಳಂತೆ "ಅಪ್ಪ, ಅಮ್ಮ ಬೇಕು" ಎಂದು ಅವನಪ್ಪಿ ಇನ್ನಷ್ಟು ಅತ್ತೆ.. ಅವಿನಿಗೋ..ಪಾಪ ಅಳಬೇಕೋ, ನಗಬೇಕೋ ಗೊತ್ತಾಗಲಿಲ್ಲ. ಮರುದಿನವೇ ತವರಿಗೂ ಹೋದದ್ದಾಯ್ತು. ತಮ್ಮನೊಂದಿಗೆ ನಿನ್ನಲ ಬಿಟ್ಟಿರ್ತೆ ಎಂದು ಜಂಭದ ಮಾತಾಡುವವಳಿಗೆ ತವರು ಎನ್ನುವುದು ಎಂಥಾ ಸೆಳೆತ ಎಂಬುದು ಆ ರಾತ್ರಿ ಅರ್ಥವಾಗಿತ್ತು.


ದೀಪಾವಳಿಗೆ ಬೈಕ್ ಏರಿ ತವರಿಗೆ ಹೋಗಿ ಹಬ್ಬಕ್ಕೆ ಕರಿಯಲು ಬಂದವರೆಲ್ಲರ ಮನೆಗೋಗಿ ಅವರ ಮುಖದಲ್ಲರಳಿದ ನಗು ನೋಡಿ ಹಿಗ್ಗಿ.. ಅಪ್ಪನ ಮನೆಯಲ್ಲಿ ಕೊಟ್ಟ ಭರ್ಜರಿ ಉಡುಗೊರೆ ಪಡೆದು ಹಬ್ಬ ಮಾಡಿದ್ದಾಯ್ತು...ಬ್ಲಾಗ್ ಬರೆಯುವಷ್ಟರಲ್ಲಿ ದಿನ ಉರುಳಿತು..

ಸುಮಾ ಕಂಚೀಪಾಲ್

ಬ್ಲಾಗ್ ಹೇಗನಿಸಿತು ಎಂದು ಒಂದು ಮಾತು ತಿಳಿಸಿ.. ನೀವು ಓದಿದ್ದೀರಿ ಎಂದು ಭಾವಿಸುತ್ತೇನೆ
sumagaonkar22@gmail.com
 

Comments

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...