ಚಿತ್ರ: ಶ್ರೀನಿಧಿ ಮಳೆಗಾಲಕ್ಕೂ ಬೇಯಿಸಿದ ಜೋಳದ ತೆನೆಗೂ ಒಂದೊಳ್ಳೆ ಸಂಭಂದವಿದೆ. ಅದರಲ್ಲೂ ಆ ಜೋಳದ ತೆನೆಯೊಟ್ಟಿಗೆ ಗೆಳೆಯರ ಗುಂಪು ಅಂಗಡಿಯ ಮುಂದೆ ನಿಂತು. "ನಂಗೆ ಬೇಯಿಸಿದ ಜೋಳ ಇವಳಿಗೊಂದು ಕೆಂಡದಲ್ಲಿ ಸುಟ್ಟ ಜೋಳ, ಅವನಿಗೆ ಖಾರ ಸ್ವಲ್ಪ ಜಾಸ್ತಿ ಇರೋದು ಕೊಡಿ. ನಿಂಬು ಚೆನ್ನಾಗಿ ಹಿಂಡಿ ಹುಳಿ ಹುಳಿಯಾಗಿಸಿ ಕೊಡಿ" ಎಂಬ ಮಾತಲ್ಲೆ ಮುಂದೆ ತೆನೆ ತಿನ್ನುವ ತವಕ ಎದ್ದು ಕಾಣುತ್ತದೆ. ಅದರಲ್ಲು ನಾವೆಲ್ಲಾ ಕಾಲೇಜಿನಿಂದ ವಾಪಾಸಾಗುವ ಸಮಯದಲ್ಲಿ ಪುಟ್ಟಪಾತ್ ಬದಿಯಲ್ಲಿ ಜೋಳ ಬೇಯಿಸುವ ನಾಕಾರು ಅಂಗಡಿಗಳು ನಿಂತೇ ಇರುತ್ತಿದ್ದವು. ದಿನವೂ ಒಂದೊಂದು ಅಂಗಡಿಗೆ ಹೋಗುವುದು ರೂಢಿ. ಕಾರಣ ಕೇಳ್ತೀರಾ?! ಅಂಗಡಿಯವರಿಗೆ ಬೇಸರ ಆಗಬಾರದು ಎಂದು ಅನ್ನಬಹುದು. ನಿಜವಾದ ಕಾರಣ ಕೇಳ್ತೀರ!? ನಮಗೆ ಉಪ್ಪು, ಕಾರ, ಹುಳಿಯ ಹದದಲ್ಲಿ ವ್ಯತ್ಯಾಸ ಬೇಕಿತ್ತು ಅಷ್ಟೇ. ಅದರಲ್ಲೂ ಜೋರಾಗಿ ಮಳೆ ಸುರಿಯುತ್ತಿರುವ ಹೊತ್ತಲ್ಲಿ ಬೀಸುವ ಜೋರು ಗಾಳಿಗೆ ಅರ್ಧ ಮೈ ತೊಯ್ದು ಒದ್ದೆಯಾದಾಗ ಕೊಡೆಯ ಅಂಚಿನಿಂದ ಕೈ ಒಡ್ಡಿ ಹಣಕೊಟ್ಟು .ಒಂದು ಕೈಯಲ್ಲಿ ಕೊಡೆ ಸಂಭಾಳಿಸಿ ಇನ್ನೊಂದು ಕೈಯಲ್ಲಿ ಜೋಳದ ತೆನೆ ಸವಿಯುವ ಮಜವಿದೆಯಲ್ಲಾ ಮಳೆಗಾಲದಲ್ಲಿ ಬಿಟ್ಟರೆ ಅದು ಇನ್ ಯಾವತ್ತಿಗೂ ಸಿಗಲು ಸಾಧ್ಯವಿಲ್ಲ. ಜೂಡಿದಾರದ ಪ್ಯಾಂಟ್ ಒದ್ದೆಯಾಗಿ ಚಪ್ಪಲಿಯ ನೀರು ಜಡೆಯ ತುದಿವರೆಗೆ ಹಾರಿ, ಸಣ್ಣಗೆ ಚಳಿಯ ನಡುಕ ಹಿಡಿದಿರುವಾಗ, ಹೇಗೊ ನಡೆದು ಬಸ್ಟಾಂಡ್ ಹೊಕ್ಕಿ ಕೊಡೆ ಮಡಚಿದ...