Skip to main content

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ? 



ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒಂದೊಂದಾಗಿ ಮಳೆಗಾಲದ ವಿವರಣೆ ಕೊಡೋಕೆ ಆರಂಭ ಮಾಡಿದ್ರು. ಆ ವಿವರಣೆ ಮಾತ್ರ ತುಂಬಾ ಮಜವಾಗಿತ್ತು. ಥೇಟೋ ಥೇಟು ಊರಿಗ್ ಹೋಗ್ಬಂದಾಗೇ ಇತ್ತು. 



ಮಳೆ ಅಂದ್ರೆ "ಗುಡುಗ್ಬೇಕು, ಮಿಂಚ್ಬೇಕು, ವಾರಗಟ್ಲೆ ಕರೆಂಟ್ ಹೋಗ್ಬೇಕು, ಗೇರ್ ಬೀಜ ಸುಡ್ಬೇಕು, ಒದ್ದೆ ಆದ ಯಾವ ಬಟ್ಟೆನೂ ವಾರಗಟ್ಟಲೆ ಒಣ್ಗ್‌ಬಾರ್ದು, ಹೊಗೆ ಜಂಬು ಆಗ್ಬೇಕು" ಇಷ್ಟೆಲ್ಲ ಹೇಳ್ತಾ ಎಲ್ಲರೂ ಆಫೀಸಿಂದ ಒಮ್ಮೆ ಊರಿಗ್ ಹೋಗ್ ಬಂದ್ರು. 

ಬೆಂಗಳೂರಲ್ಲಿ ಒಂದ್ ಮಳೆ ಬಂದ್ರೆ ಸಾಕು. "ನಂಗೆ ಶೀತ ಆಗಿದೆ. ನಂಗೆ ತಲೆನೋವು, ಅಯ್ಯೋ! ನಂಗಂತೂ ಸಿಕ್ಕಾಪಟೆ ಜ್ವರ" ಅನ್ನೋ ಡೈಲಾಗ್ ತೀರಾ ಸಾಮಾನ್ಯ. ಆದ್ರೆ ಊರಲ್ಲಿ ಮಳೆ ಬಂದ್ರೆ ಹೀಗೆಲ್ಲ ಆಗಲ್ಲ. ಯಾಕಂದ್ರಲ್ಲಿ ವಾತಾವರಣ ಪದೇ ಪದೇ ಬದಲಾಗೋಕೆ AC ಇರೋದಿಲ್ಲ.



ಮಳೆಲಿ ನೆಂದು ಮೆಟ್ರೋದೊಳಗೆ ಪ್ರವೇಶ ಮಾಡೋದು ಇನ್ನೊಂದು ಬೇರೆ ಕಥೆ. ಮಳೆಗಾಲ, ಚಳಿಗಾಲ - ಬೇಸಿಗೆಯಂತಿಲ್ಲ, ಎಲ್ಲ ಕಾಲದಲ್ಲೂ ಸಿಕ್ಕಾಪಟ್ಟೆ AC ಹಾಕಿ ಮಹಿಳೆಯರನ್ನ ಕೂಲ್ ಆಗಿಡ್ತಾರೆ ಈ ಮೆಟ್ರೋದವ್ರು. ಯಾಕಂದ್ರೆ, ಮಹಿಳಾ ಬೋಗಿಯಲ್ಲೇ ಈ AC ಹವಾ ಜಾಸ್ತಿ. ಮೆಟ್ರೋ ಇಳಿಯುವಷ್ಟರಲ್ಲೇ ಶೀತ ಆಗಿರುತ್ತೆ. ಒಂದು ಉದಾಹರಣೆ ಕೊಡ್ತೀನಿ ನೋಡಿ, ಆಫೀಸಿನ AC ಒಂದ್ ರೀತಿ. ನಂತ್ರ, ಬಸ್ಸಲ್ಲಿ ಇನ್ನೊಂದ್ ರೀತಿ. ನಡ್ಕೊಂಡು ಹೋಗುವಾಗ ಇನ್ನೊಂದು, ಮೆಟ್ರೋ ಹತ್ತಿದ್ರೆ ಮತ್ತೊಂದು, ಮನೆ ತಲ್ಪಿದ್ರೆ ಅದೇ ಮಗದೊಂದು. ಒಂದ್ ತಾಸಲ್ಲಿ ಇಷ್ಟೆಲ್ಲಾ ಹವಾಮಾನ ಬದಲಾವಣೆ. ಇದರಿಂದ ಆರೋಗ್ಯದಲ್ಲಿ ವೈಪರೀತ್ಯ. ಅದೇನೆ ಇರ್ಲಿ ಇತ್ಯಾಕೋ ಟ್ರಾಫಿಕ್ ಜಾಸ್ತಿನೆ ಇತ್ತು. 



ಬಿಎಂಟಿಸಿ ಬಸ್‌ನಲ್ಲಿ ಈ ಬ್ಲಾಗ್ ಬರ್ದು ಮುಗೀತು. ಬೆಂಗಳೂರು ಮಳೆಯ ಮತ್ತೊಂದು ವಿಶೇಷ ಅಂದ್ರೆ ನಿಮ್ಮ ಕೈಯಲ್ಲಿ ಕೊಡೆ ಇದ್ರೆ ಮಳೆ ಬರಲ್ಲ. 

ಸುಮಾ ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...