ದೀಪಾವಳಿಯಲ್ಲಿ 'ಬೂದೆ ಕಳು' ಎಂಬ ಹಬ್ಬ ಬರುತ್ತದೆ. ಈ ಹಬ್ಬ ಇತ್ತೀಚಿನ ದಿನಗಳಲ್ಲಿ ಆಚರಣೆಯಲ್ಲಿ ಇಲ್ಲವಾದರೂ ಹಿಂದೆಲ್ಲ ಈ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸುತ್ತಿದ್ದರು ಎನ್ನುವುದಕ್ಕೆ ನಾನೇ ಸಾಕ್ಷಿ. ನಾನು ತುಂಬಾ ಚಿಕ್ಕವಳಿದ್ದಾಗ ನನ್ನ ಅಜ್ಜಿ ಮನೆಯಲ್ಲಿ ನಾನು ಈ ಹಬ್ಬದ ಆಚರಣೆಯ ಬಗ್ಗೆ ತಿಳಿದುಕೊಂಡೆ. ಇನ್ನು ನಮ್ಮ ಮನೆಯಲ್ಲಿ ಈ ರೀತಿ ಹಬ್ಬದ ಆಚರಣೆಯ ಬಗ್ಗೆ ನಾನು ವಿವರಣೆಯನ್ನು ಮಾತ್ರ ಕೇಳಿದ್ದೆ.
ಆದರೆ ಇದನ್ನು ಕಣ್ಣಾರೆ ಕಂಡು ಭಾಗಿಯಾಗಿದ್ದು ಮಾತ್ರ ಅಜ್ಜನ ಮನೆಯಲ್ಲಿ. ಅಜ್ಜನ ಮನೆಯೆಂದರೆ ಅದೊಂದು ದ್ವೀಪ. ಸುತ್ತಲೂ ನೀರು, ನಡುವೆ ನನ್ನ ಅಜ್ಜನ ಮನೆ. 'ಅಮ್ಮ' ಎಂಬ ಬಳ್ಳಿಯ ಬೇರು ಊರಿಕೊಂಡಿದ್ದ ಜಾಗ ಅದು. ಅಲ್ಲಿ ಹೋದಾಗಲೆಲ್ಲ ತುಂಬಿ ಗಲಗುಡುವ ಮನೆ. ಹತ್ತಾರು ಜನರು ಒಟ್ಟಿಗೆ ಕೂಡಿ ಬಾಳುತ್ತಿದ್ದ ಮನೆ ದಬ್ಬೇಸಾಲು. ಮರುದಿನವಾದರೆ ಲಕ್ಷ್ಮೀ ಪೂಜೆ. ಹಿಂದಿನ ದಿನವೇ ಈ ಬೂದೆ ಕಳು ಹಬ್ಬ. ಯಾರಿಗೂ ನಷ್ಟವಾಗದಂತೆ ಚಿಕ್ಕ ಪುಟ್ಟ ವಸ್ತುಗಳನ್ನು ಮಾತ್ರ ಕದಿಯುವ ಹಬ್ಬ. ಈ ಕಳು ಮಾಡುವ ಹಬ್ಬ ಯಾಕೆ ಆಚರಣೆಯಲ್ಲಿ ಬಂತು? ಅದರ ಹಿಂದಿನ ಇತಿಹಾಸ ಮತ್ತು ಆಚರಣೆಗೆ ಕಾರಣ ಏನು ಎಂಬುದು ನನಗೆ ತಿಳಿದಿಲ್ಲ. ನಿಮಗೇನಾದರೂ ತಿಳಿದಿದ್ದರೆ ನೀವು ವಿವರಿಸಬಹುದು.
ದಬ್ಬೇಸಾಲು ಊರಿನಲ್ಲಿ ಹಳ್ಳಗಳನ್ನು ದಾಟುತ್ತಲೇ ಒಂದೊಂದು ಮನೆ ತಲುಪಬೇಕು. ಹೀಗಿರುವಾಗ ನಾನು ತುಂಬಾ ಚಿಕ್ಕವಳು, ಒಂದೆರಡನೇ ತರಗತಿ ಇರಬಹುದು. ನನ್ನ ಮಾವಂದಿರು ನನ್ನನ್ನೂ ಕರೆದುಕೊಂಡು ಈ ಬೂದೆ ಕಳು ಹಬ್ಬಕ್ಕೆ ಹೋದರು. ನಾನು ಎಷ್ಟು ದೂರ ನಡೆದೆ ಎಂಬುದಕ್ಕಿಂತ ಮಾವಂದಿರು ನನ್ನನ್ನು ಎಷ್ಟು ಜೋಪಾನವಾಗಿ ಹಳ್ಳ ದಾಟಿಸಿದರು ಎಂಬುದೇ ಇಲ್ಲಿ ಮುಖ್ಯ ವಿಷಯ. ನನಗೆ ನೆನಪಿದ್ದದ್ದು ಮಾತ್ರ ಸುತ್ತ ಹತ್ತಾರು ಜನರ ತೋಟಕ್ಕೆ ನುಗ್ಗಿ ಎಳನೀರು ಕಡಿದು ನಾವೆಲ್ಲ ಕುಡಿದದ್ದು. ಅಷ್ಟಾದ ಮೇಲೆ ಯಾರ ಮನೆಯ ವಸ್ತುವನ್ನು ಕದ್ದಿರುತ್ತೇವೋ ಅವರ ಮನೆಯ ಮುಂದೆ ಇರುವ ತುಳಸಿ ಕಟ್ಟೆಯ ಹತ್ತಿರ ಹೋಗಿ 'ಗೋವಿಂದ' ಎಂದು ಕೂಗುವುದು.
ಅದಾದ ಮೇಲೆ ಅಲ್ಲಿನವರು ನಮಗೆ ಅವಲಕ್ಕಿ ಕೊಟ್ಟರು. ನಾವೆಲ್ಲರೂ ಒಂದು ಲೇಯರ್ ಎಳನೀರು, ಇನ್ನೊಂದು ಲೇಯರ್ ಅವಲಕ್ಕಿ. ಇನ್ನು ಈ ದೀಪಾವಳಿ ಹಬ್ಬವನ್ನು ನಾವು 'ಅವಲಕ್ಕಿ ಹಬ್ಬ' ಎಂದೇ ಹೆಚ್ಚಾಗಿ ಕರೆಯುವುದು. ಹೀಗೆ ಒಂದಾದ ಮೇಲೆ ಇನ್ನೊಂದನ್ನು ಏರಿಸುತ್ತಲೇ ಹೋದೆವು. ಮರ ಹತ್ತುವ ತಾಕತ್ತು ಮತ್ತು ಊರು ಸುತ್ತುವ ಮಜ, ಆಗಿನ ಉತ್ಸಾಹ ಎಲ್ಲವೂ ಅಂದಿನ ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಇನ್ನು ಅದೇ ದಿನ ರಾತ್ರಿ ನಮ್ಮ ಮನೆಗೂ 'ಕಳು' ಮಾಡುವುದಕ್ಕೆ ಕೆಲವರು ಬರುತ್ತಿದ್ದರು. ಅದೇ ಊರಿನಲ್ಲಿದ್ದ ಕಾಮು ಮನೆಯವರು ಬಂದು ತುಳಸಿ ಪೀಠದ ಸುತ್ತ ಸುತ್ತಿ ಗೋವಿಂದ ಹಾಕುತ್ತಿದ್ದದ್ದನ್ನು ನೆನೆಸಿಕೊಂಡರೆ ಇನ್ನಷ್ಟು ಖುಷಿ. ನಾವು ಅಡಗಿ ಕುಳಿತು ಅವರಿಗಿಂತ ಮೊದಲು ಗೋವಿಂದ ಹೇಳಿ ಕಾಯಿ ಒಡೆಯಲು ಕಾದು ಕುಳಿತುಕೊಳ್ಳುತ್ತಿದ್ದೆವು. ಈಗ ರಜಾ ದಿನಗಳಲ್ಲಿ ಮನೆಗೆ ಹೋಗುವುದನ್ನು ಬಿಟ್ಟರೆ ಮತ್ತೆ ಕೆಲಸಕ್ಕೆ ಮರಳಿ ಬರಬೇಕು ಎನ್ನುವ ಆಲೋಚನೆಯೊಂದನ್ನು ಬಿಟ್ಟರೆ ಇವುಗಳನ್ನು ಮೆಲುಕು ಹಾಕುವುದು ಮಾತ್ರ.
ನಂತರ ದಿನ ಕಳೆದಂತೆ ಹಬ್ಬದ ಕಳೆ ಮಾಸುತ್ತಾ ಬಂತು. ಆದರೂ ಜನುಮಕ್ಕೆ ಆಗುವಷ್ಟು ನೆನಪಿನ ಬುತ್ತಿಗಳನ್ನು ಕೊಟ್ಟ ಅಜ್ಜನಮನೆ ಮತ್ತು ನನ್ನ ಬಾಲ್ಯವನ್ನು ನಾನು ಸದಾ ಹೆಮ್ಮೆಯಿಂದ ಸ್ವೀಕರಿಸುತ್ತೇನೆ.
ಸುಮಾ ಕಂಚೀಪಾಲ್
Comments
Post a Comment