Skip to main content

ನಮ್ಮ ಕೇರಿ

ಊರು ಕೇರಿಯವರು ಅಡಿಕೆ ಕೊಯ್ಲು ಬಂದರೆ ತುಂಬಾ ಬ್ಯೂಸಿ ಆಗಿ ಬಿಡುತ್ತಾರೆ. ಹೀಗೇ ಉಳಿದ ದಿನಗಳಲ್ಲಿ ಬಿಡುವಿದೆ ಎಂಬ ಅರ್ಥ ಈ ಮಾತಿನದ್ದಲ್ಲ. ಅವರು ಯಾವಾಗಲೂ ಪುರುಸೊತ್ತಿಲ್ಲದ ಜೇನಿನಂತೆ ಕೆಲಸ ಮಾಡುವ ಜನ. ಚಳಿ ಆರಂಭ ಆಗ್ತಾ ಇದ್ಹಾಗೆ ಅಡಿಕೆ ಕೊಯ್ಲು ಶುರುವಾಗಿ ಬಿಡುತ್ತೆ. ಆಗ ಹೆಂಗಸರಿಗೂ, ಗಂಡಸರಿಗೂ ಬಿಡುವಿಲ್ಲದ ಕೆಲಸ. 



ನಮ್ಮಲ್ಲಿ ಗಂಡು ಮೇಲೋ ಹೆಣ್ಣು ಮೇಲೋ ಎಂಬ ಮಾತೇ ಬರೋದಿಲ್ಲ. ಎಲ್ಲ ಕೆಲಸಗಳನ್ನು ಎಲ್ಲರೂ ಸಮನಾಗಿ ಮಾಡುತ್ತಾರೆ. ಅಡಿಕೆ ಕುಯ್ಯುವ ಆ ದಿನವನ್ನು ಗಂಡಸರು ನಿಭಾಯಿಸಿದರೆ, ಆಳುಗಳಿಗೆ ಮಜ್ಜಿಗೆ ಬೆಲ್ಲವನ್ನೋ, ಚಹಾವನ್ನು ಮಾಡಿ, ತೆರಿ ಅಡಿಕೆ ಹೆಕ್ಕಿ ಅದೂ ಇದೂ ಅಂತ ಲೆಕ್ಕಕ್ಕೇ ಸಿಗದ ನೂರು ಕೆಲಸವನ್ನು ಹೆಂಗಸರೇ ಮಾಡುತ್ತಾರೆ. ಅಷ್ಟೇ ಯಾಕೆ ಅಡಿಕೆ ಹೋರಲು ಜನ ಸಿಗಲಿಲ್ಲ ಎಂದರೆ ಇವರು ಅದಕ್ಕೂ ಸೈ. 


ಇನ್ನು ಸಂಜೆಯಾಗುತ್ತಿದ್ದಂತೆ ಊಟಕ್ಕೆ ತಯಾರಿ ಆಗೇ ಬಿಡಬೇಕು. ಯಾಕೆಂದರೆ ಮುರಿಯಾಳಿನ ಪ್ರಕಾರ ಒಬ್ಬರ ಮನೆ ಅಡಿಕೆಯನ್ನು ಇನ್ನೊಬ್ಬರು ಸುಲಿಯಬೇಕಲ್ಲ. ಅದೇ ಹಿಂದಿನಿಂದಲೂ ಬಂದ ಪದ್ದತಿ. ಹಾಗೆನ್ನುವುದಕ್ಕಿಂತ ನಮ್ಮ ಕೇರಿಯ ಒಗ್ಗಟ್ಟು ಎನ್ನಬಹುದು. ಏನೇ ಕಾರ್ಯಕ್ರಮ ಇರಲಿ ಅಥವಾ ಹತ್ತು ಜನ ಕೂಡುವ ಶುಭಕಾರ್ಯ ಇರಲಿ ಚಪ್ಪರ ಹಾಕುವುದರಿಂದ ಬಾಳೆಲೆಕೊಯ್ದು, ಬಂದವರಿಗೆ ಬಡಿಸುವವರೆಗೂ ಕೇರಿಯವರೇ ನೋಡಿಕೊಳ್ಳುತ್ತಾರೆ. 

ಕೇರಿಯ ಪ್ರೀತಿಯ ಚಿಕ್ಕಪ್ಪ, ಚಿಕ್ಕಮ್ಮಂದಿರು ಎಲ್ಲಾ ಮಕ್ಕಳಿಗೂ ಅಪ್ಪ, ಅಮ್ಮ ಇದ್ದಂತೆ ನಾವು ಪ್ರತಿಭಾ ಕಾರಂಜಿಗೆ ಹೋದೆವು ಅಂದುಕೊಳ್ಳಿ ಅವರು ಯಾರದ್ದೇ ತಾಯಿ ಆಗಿರಲಿ ನಮ್ಮನ್ನೂ ಅವರ ಮಕ್ಕಳು ಎಂದೇ ಭಾವಿಸಿ ತಯಾರಿ ಮಾಡುತ್ತಾರೆ. ಅರ್ಜೆಂಟಿಗೆ ಹೊಲಿಗೆ ಬೇಕಾದರೆ ಮಾಡಿ ಕೊಡ್ತಾರೆ. ಅಯ್ಯೊ ನಮ್ಮನೆಲಿ ಸದ್ಯ ತುಪ್ಪ ಇಲ್ಲ ಎಂದು ಯಾರಾದರು ಒಬ್ಬರು ಹೇಳಿದರೆ ತುಪ್ಪ ಕೊಡಲು ಹತ್ತು ಜನ ಅಮ್ಮಂದಿರು ಸಿದ್ಧರಿರ್ತಾರೆ. 

ಕೇರಿಯ ತುಂಬ ಅಮ್ಮಂದಿರು, ಅವರ ಪ್ರೀತಿ, ಅವರಿಗೂ ನಾವೆಲ್ಲ ಮಕ್ಕಳು. ಯಾರೇ ಕಲಿಯಲು ದೂರ ಹೋಗಿರಲಿ ಅವರು ಊರಿಗೆ ಬಂದರೆಂದರೆ ಎಲ್ಲರೂ ನಮ್ಮನೆಗೆ ಬಾ ಎಂದು ಅಕ್ಕರೆಯಿಂದ ಕರೆಯುವವರೇ ಆಗಿರುತ್ತಾರೆ. ನಾನು ಇಂದು ರಾತ್ರಿ ಬಸ್ಸಿಗೆ ಹೋಗ್ತೀನಿ ಅಂತ ಹೇಳಿದರೆ ಅವರ ಮನೆಯಲ್ಲಿ ಏನಾದರೂ ವಿಶೇಷ ಮಾಡಿದ್ದರೆ ಅದನ್ನು ಹಾಲು ಡೇರಿ ( ಅದೊಂತರ ವಿವಿಧೋದ್ದೇಶ ಸಂಘ ಇದ್ಹಾಗೆ, ವಸ್ತು ವಿಚಾರಗಳ ವಿನಿಮಯಕ್ಕೆ) ಅಲ್ಲಿಗೆ ಕಳಿಸಿ ಕೊಡ್ತಾರೆ. 


ಇನ್ನು ಶಾಲೆಯಲ್ಲಿ ಪಾಲಕರನ್ನು‌ ಕರೆ ತರಲು ಹೇಳಿದರೆ ಕೆಲವು ಬಾರಿ ನನ್ನ ದೊಡ್ಡಪ್ಪ ಸಿಗ್ನೇಚರ್ ಮಾಡಿದ್ದೂ ಇದೆ. ನಮ್ಮ ಕೇರಿಯ ಒಗ್ಗಟ್ಟಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂಬುದೇ ಆಶಯ. ಇನ್ನು ಅಡಿಕೆ ಸೊಲಿಯುವ ಆ ರಾತ್ರಿಗಳ ಕಥೆಯನ್ನು ಕೇಳಲು ಎಷ್ಟು ಮಜವಾಗಿರುತ್ತದೆ ಎಂದರೆ ಯಾವ ಹಾಲಿವುಡ್ ಮೂವಿಗೂ ಆ ಕಥೆಗಳು ಕಮ್ಮಿಯಿಲ್ಲ. ಕಾಮಿಡಿ, ಎಮೋಷನಲ್ ಪ್ರದೀಪಣ್ಣ ಹೇಳುವ ಹಾರರ್ ಕಥೆಗಳು ಆಹಾ! ಒಂದಕ್ಕಿಂತ ಒಂದು ಮಜ. 


ಇದನ್ನೆಲ್ಲಾ ನಿಮಗೆ ಪೇಟೆಯಲ್ಲಿ ಅನುಭವಿಸಲು ಖಂಡಿತ ಸಿಗೋದಿಲ್ಲ. ಇದು ಒಂಥರ ವರ ಎಂದೇ ಹೇಳಬಹುದು. ಯಾಕೆಂದರೆ ಮೊಬೈಲ್, ಇಂಟರ್ನೆಟ್, ಟಿವಿ ಎಂದು ಕಳೆದು ಹೋಗುವ ಈ ದಿನಗಳಲ್ಲಿ ಅಡಿಕೆ ಕೊಯ್ಲು ಎಂದು ನಾಕು ಜನ ಸೇರಿ ಮಾತಾಡುವುದಿದೆಯಲ್ಲ ಅದರ ಮಹತ್ವ ಅಲ್ಲಿ ಹೋಗಿ ಕುಳಿತಾಗಲೇ ಅರ್ಥವಾಗುತ್ತದೆ. 

ನೀವೂ ಈ ದಿನಗಳು ಹೇಗಿರುತ್ತದೆ ಎಂದು ಅನುಭವಿಸಿಯೇ ನೋಡಬೇಕು ಎಂದಾದರೆ ಅಡಿಕೆ ಕೊಯ್ಲಿನಲ್ಲಿ ಊರಿಗೆ ಹೋಗಿ ಬನ್ನಿ, ಸಾಧ್ಯವಾದರೆ ನಾನೂ ಹೋಗುತ್ತೇನೆ

ಮತ್ತೆ ಸಿಗೋಣ...
ಸುಮಾ.ಕಂಚೀಪಾಲ್ 

Comments

  1. Hey I don't know to read Kannada, but I read the English translated version, and it still felt good to read. Very wholesome topic and the pics are good too.

    ReplyDelete
  2. ಚೆ‌ಂದ ಆಯ್ದು ಕೂಸೆ.ನೈಜತೆ ಮತ್ತು ಕೇರಿಯ ಆತ್ಮೀಯತೆ ಕೂಡಿದ್ದು.ಇಂತಹ ದಿನಗಳು ಇನ್ನು ಬಹಳದಿನಗಳು ಇರಲಾರದು.ಎಲ್ಲರೂ ಮುದುಕರಾಗುತ್ತದ್ದಾರೆ.ಯುವಕರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ.ಇರಲಿ,ಆದಷ್ಟು ದಿನ ಹೀಗೆ ಇರೋಣ.ನೆನಪುಗಳನ್ನು ಮೆಲಕು ಹಾಕಲಾದರೂ ಮುಂದಿನ ದಿನಗಳಲ್ಲಿ ಬೇಕು.

    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...