ಊರು ಕೇರಿಯವರು ಅಡಿಕೆ ಕೊಯ್ಲು ಬಂದರೆ ತುಂಬಾ ಬ್ಯೂಸಿ ಆಗಿ ಬಿಡುತ್ತಾರೆ. ಹೀಗೇ ಉಳಿದ ದಿನಗಳಲ್ಲಿ ಬಿಡುವಿದೆ ಎಂಬ ಅರ್ಥ ಈ ಮಾತಿನದ್ದಲ್ಲ. ಅವರು ಯಾವಾಗಲೂ ಪುರುಸೊತ್ತಿಲ್ಲದ ಜೇನಿನಂತೆ ಕೆಲಸ ಮಾಡುವ ಜನ. ಚಳಿ ಆರಂಭ ಆಗ್ತಾ ಇದ್ಹಾಗೆ ಅಡಿಕೆ ಕೊಯ್ಲು ಶುರುವಾಗಿ ಬಿಡುತ್ತೆ. ಆಗ ಹೆಂಗಸರಿಗೂ, ಗಂಡಸರಿಗೂ ಬಿಡುವಿಲ್ಲದ ಕೆಲಸ.
ನಮ್ಮಲ್ಲಿ ಗಂಡು ಮೇಲೋ ಹೆಣ್ಣು ಮೇಲೋ ಎಂಬ ಮಾತೇ ಬರೋದಿಲ್ಲ. ಎಲ್ಲ ಕೆಲಸಗಳನ್ನು ಎಲ್ಲರೂ ಸಮನಾಗಿ ಮಾಡುತ್ತಾರೆ. ಅಡಿಕೆ ಕುಯ್ಯುವ ಆ ದಿನವನ್ನು ಗಂಡಸರು ನಿಭಾಯಿಸಿದರೆ, ಆಳುಗಳಿಗೆ ಮಜ್ಜಿಗೆ ಬೆಲ್ಲವನ್ನೋ, ಚಹಾವನ್ನು ಮಾಡಿ, ತೆರಿ ಅಡಿಕೆ ಹೆಕ್ಕಿ ಅದೂ ಇದೂ ಅಂತ ಲೆಕ್ಕಕ್ಕೇ ಸಿಗದ ನೂರು ಕೆಲಸವನ್ನು ಹೆಂಗಸರೇ ಮಾಡುತ್ತಾರೆ. ಅಷ್ಟೇ ಯಾಕೆ ಅಡಿಕೆ ಹೋರಲು ಜನ ಸಿಗಲಿಲ್ಲ ಎಂದರೆ ಇವರು ಅದಕ್ಕೂ ಸೈ.
ಇನ್ನು ಸಂಜೆಯಾಗುತ್ತಿದ್ದಂತೆ ಊಟಕ್ಕೆ ತಯಾರಿ ಆಗೇ ಬಿಡಬೇಕು. ಯಾಕೆಂದರೆ ಮುರಿಯಾಳಿನ ಪ್ರಕಾರ ಒಬ್ಬರ ಮನೆ ಅಡಿಕೆಯನ್ನು ಇನ್ನೊಬ್ಬರು ಸುಲಿಯಬೇಕಲ್ಲ. ಅದೇ ಹಿಂದಿನಿಂದಲೂ ಬಂದ ಪದ್ದತಿ. ಹಾಗೆನ್ನುವುದಕ್ಕಿಂತ ನಮ್ಮ ಕೇರಿಯ ಒಗ್ಗಟ್ಟು ಎನ್ನಬಹುದು. ಏನೇ ಕಾರ್ಯಕ್ರಮ ಇರಲಿ ಅಥವಾ ಹತ್ತು ಜನ ಕೂಡುವ ಶುಭಕಾರ್ಯ ಇರಲಿ ಚಪ್ಪರ ಹಾಕುವುದರಿಂದ ಬಾಳೆಲೆಕೊಯ್ದು, ಬಂದವರಿಗೆ ಬಡಿಸುವವರೆಗೂ ಕೇರಿಯವರೇ ನೋಡಿಕೊಳ್ಳುತ್ತಾರೆ.
ಕೇರಿಯ ಪ್ರೀತಿಯ ಚಿಕ್ಕಪ್ಪ, ಚಿಕ್ಕಮ್ಮಂದಿರು ಎಲ್ಲಾ ಮಕ್ಕಳಿಗೂ ಅಪ್ಪ, ಅಮ್ಮ ಇದ್ದಂತೆ ನಾವು ಪ್ರತಿಭಾ ಕಾರಂಜಿಗೆ ಹೋದೆವು ಅಂದುಕೊಳ್ಳಿ ಅವರು ಯಾರದ್ದೇ ತಾಯಿ ಆಗಿರಲಿ ನಮ್ಮನ್ನೂ ಅವರ ಮಕ್ಕಳು ಎಂದೇ ಭಾವಿಸಿ ತಯಾರಿ ಮಾಡುತ್ತಾರೆ. ಅರ್ಜೆಂಟಿಗೆ ಹೊಲಿಗೆ ಬೇಕಾದರೆ ಮಾಡಿ ಕೊಡ್ತಾರೆ. ಅಯ್ಯೊ ನಮ್ಮನೆಲಿ ಸದ್ಯ ತುಪ್ಪ ಇಲ್ಲ ಎಂದು ಯಾರಾದರು ಒಬ್ಬರು ಹೇಳಿದರೆ ತುಪ್ಪ ಕೊಡಲು ಹತ್ತು ಜನ ಅಮ್ಮಂದಿರು ಸಿದ್ಧರಿರ್ತಾರೆ.
ಕೇರಿಯ ತುಂಬ ಅಮ್ಮಂದಿರು, ಅವರ ಪ್ರೀತಿ, ಅವರಿಗೂ ನಾವೆಲ್ಲ ಮಕ್ಕಳು. ಯಾರೇ ಕಲಿಯಲು ದೂರ ಹೋಗಿರಲಿ ಅವರು ಊರಿಗೆ ಬಂದರೆಂದರೆ ಎಲ್ಲರೂ ನಮ್ಮನೆಗೆ ಬಾ ಎಂದು ಅಕ್ಕರೆಯಿಂದ ಕರೆಯುವವರೇ ಆಗಿರುತ್ತಾರೆ. ನಾನು ಇಂದು ರಾತ್ರಿ ಬಸ್ಸಿಗೆ ಹೋಗ್ತೀನಿ ಅಂತ ಹೇಳಿದರೆ ಅವರ ಮನೆಯಲ್ಲಿ ಏನಾದರೂ ವಿಶೇಷ ಮಾಡಿದ್ದರೆ ಅದನ್ನು ಹಾಲು ಡೇರಿ ( ಅದೊಂತರ ವಿವಿಧೋದ್ದೇಶ ಸಂಘ ಇದ್ಹಾಗೆ, ವಸ್ತು ವಿಚಾರಗಳ ವಿನಿಮಯಕ್ಕೆ) ಅಲ್ಲಿಗೆ ಕಳಿಸಿ ಕೊಡ್ತಾರೆ.
ಇನ್ನು ಶಾಲೆಯಲ್ಲಿ ಪಾಲಕರನ್ನು ಕರೆ ತರಲು ಹೇಳಿದರೆ ಕೆಲವು ಬಾರಿ ನನ್ನ ದೊಡ್ಡಪ್ಪ ಸಿಗ್ನೇಚರ್ ಮಾಡಿದ್ದೂ ಇದೆ. ನಮ್ಮ ಕೇರಿಯ ಒಗ್ಗಟ್ಟಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂಬುದೇ ಆಶಯ. ಇನ್ನು ಅಡಿಕೆ ಸೊಲಿಯುವ ಆ ರಾತ್ರಿಗಳ ಕಥೆಯನ್ನು ಕೇಳಲು ಎಷ್ಟು ಮಜವಾಗಿರುತ್ತದೆ ಎಂದರೆ ಯಾವ ಹಾಲಿವುಡ್ ಮೂವಿಗೂ ಆ ಕಥೆಗಳು ಕಮ್ಮಿಯಿಲ್ಲ. ಕಾಮಿಡಿ, ಎಮೋಷನಲ್ ಪ್ರದೀಪಣ್ಣ ಹೇಳುವ ಹಾರರ್ ಕಥೆಗಳು ಆಹಾ! ಒಂದಕ್ಕಿಂತ ಒಂದು ಮಜ.
ಇದನ್ನೆಲ್ಲಾ ನಿಮಗೆ ಪೇಟೆಯಲ್ಲಿ ಅನುಭವಿಸಲು ಖಂಡಿತ ಸಿಗೋದಿಲ್ಲ. ಇದು ಒಂಥರ ವರ ಎಂದೇ ಹೇಳಬಹುದು. ಯಾಕೆಂದರೆ ಮೊಬೈಲ್, ಇಂಟರ್ನೆಟ್, ಟಿವಿ ಎಂದು ಕಳೆದು ಹೋಗುವ ಈ ದಿನಗಳಲ್ಲಿ ಅಡಿಕೆ ಕೊಯ್ಲು ಎಂದು ನಾಕು ಜನ ಸೇರಿ ಮಾತಾಡುವುದಿದೆಯಲ್ಲ ಅದರ ಮಹತ್ವ ಅಲ್ಲಿ ಹೋಗಿ ಕುಳಿತಾಗಲೇ ಅರ್ಥವಾಗುತ್ತದೆ.
ನೀವೂ ಈ ದಿನಗಳು ಹೇಗಿರುತ್ತದೆ ಎಂದು ಅನುಭವಿಸಿಯೇ ನೋಡಬೇಕು ಎಂದಾದರೆ ಅಡಿಕೆ ಕೊಯ್ಲಿನಲ್ಲಿ ಊರಿಗೆ ಹೋಗಿ ಬನ್ನಿ, ಸಾಧ್ಯವಾದರೆ ನಾನೂ ಹೋಗುತ್ತೇನೆ
ಮತ್ತೆ ಸಿಗೋಣ...
ಸುಮಾ.ಕಂಚೀಪಾಲ್
Hey I don't know to read Kannada, but I read the English translated version, and it still felt good to read. Very wholesome topic and the pics are good too.
ReplyDeleteThank you so much
ReplyDeleteಚೆಂದ ಆಯ್ದು ಕೂಸೆ.ನೈಜತೆ ಮತ್ತು ಕೇರಿಯ ಆತ್ಮೀಯತೆ ಕೂಡಿದ್ದು.ಇಂತಹ ದಿನಗಳು ಇನ್ನು ಬಹಳದಿನಗಳು ಇರಲಾರದು.ಎಲ್ಲರೂ ಮುದುಕರಾಗುತ್ತದ್ದಾರೆ.ಯುವಕರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ.ಇರಲಿ,ಆದಷ್ಟು ದಿನ ಹೀಗೆ ಇರೋಣ.ನೆನಪುಗಳನ್ನು ಮೆಲಕು ಹಾಕಲಾದರೂ ಮುಂದಿನ ದಿನಗಳಲ್ಲಿ ಬೇಕು.
ReplyDeleteಹೌದು
ReplyDeleteಆಹಾ..!
ReplyDelete