ನನ್ನ ಜೀವನದಲ್ಲಿ ನನ್ನ ಉತ್ತಮ ಮತ್ತು ಗರ್ವ ಪಡುವಂತ ಸಾಕಷ್ಟು ವಿಷಯವನ್ನು ನಾನು ಪಡೆದುಕೊಂಡಿದ್ದು ಕನ್ನಡ ಶಾಲೆಯಲ್ಲಾಗುವ ಪ್ರತಿಭಾ ಕಾರಂಜಿಯಲ್ಲಿ. ನಾನು ಯಾವ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಅದರಲ್ಲಿ ಬಹುಮಾನ ಬಂದಿಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಪ್ರಥಮ, ದ್ವಿತೀಯ, ತೃತೀಯ ಹೀಗೆ ಒಂದಲ್ಲದಿದ್ದರೆ ಇನ್ನೊಂದು ಖಂಡಿತ ಬಂದೇ ಬರುತ್ತಿತ್ತು. ಆದರೆ ನಾನು ಯಾವಾಗ ಪಿಯುಸಿಗೆ ಕಾಲಿಟ್ಟೆನೋ ಆಗ ನನಗೆ ನಾನು ಬಾವಿಯಲ್ಲಿದ್ದ ಕಪ್ಪೆಯಂತೆ ತೋರತೊಡಗಿದೆ.
ಜಗತ್ತು ವಿಶಾಲವಾಗುತ್ತಾ ಬಂತು. ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲೂ ಬಹುಮಾನ ಬಂದೇ ಬರುತ್ತದೆ ಎಂಬ ನನ್ನ ಗರ್ವಕ್ಕೆ ಭಂಗ ಬಂತು. ಅಷ್ಟೇ ಅಲ್ಲ ಎಂದಿಗೂ ಸೋಲಿನ ರುಚಿಯನ್ನೇ ಕಾಣದ ನನಗೆ ಅದನ್ನು ಅರಗಿಸಿಕೊಳ್ಳುವುದು ಕೂಡ ತುಂಬಾ ಕಷ್ಟದ ಸಂಗತಿಯಾಯಿತು.
ಅದಾದ ನಂತರ ನಾನು ಅಪರೂಪಕ್ಕೆ ಕೆಲವು ಸಲ ಸೋತಿದ್ದೇನೆ.
ಇನ್ನು ಬಹುಮಾನಗಳನ್ನು ಗೆದ್ದಿದ್ದೂ ಸಹ ಇದೆ. ಹಾಗೇ ನಾನು ಕೆಲಸಕ್ಕೆ ಸೇರಿಕೊಂಡ ನಂತರ ನಾಟಕ, ನೃತ್ಯಗಳಿಂದ ದೂರವಾದೆ. ಆದರೆ ಎಲ್ಲದರಲ್ಲೂ ಏಕತಾನತೆ ಕಂಡ ನಾನು ಒಮ್ಮೆ ವೇದಿಕೆ ಹತ್ತಬೇಕು. ನಾಟಕವನ್ನಾಗಲಿ ಅಥವಾ ನೃತ್ಯವನ್ನಾಗಲಿ ಮಾಡಬೇಕು ಎಂಬ ಹಂಬಲ ಹೊತ್ತಿದ್ದೆ. ಅದಕ್ಕೆ ಸರಿಯಾಗಿ ಪ್ರತಿಬಿಂಬ ಕಾರ್ಯಕ್ರಮದಲ್ಲಿ ನನಗೆ ಯಕ್ಷನೃತ್ಯ ಮಾಡುವ ಅವಕಾಶ ಸಿಕ್ಕಿತು.
ವೇದಿಕೆಯ ಹಿಂದಿನ ಪರಿಶ್ರಮ ಎಂದರೆ ಪ್ರಾಕ್ಟಿಸ್ ಸಮಯ.
ಅದು ನನಗೆ ತುಂಬಾ ಇಷ್ಟ ಅದರಲ್ಲೂ ಗ್ರೂಪ್ ಪ್ರಾಕ್ಟೀಸ್ ಇದ್ದರೆ ಇನ್ನೂ ಇಷ್ಟ. ನಂತರ ಆ ತಯಾರಿ ಮುಂದೆ ವೇದಿಕೆಯಲ್ಲಿ ಕೊಡುವ ಪ್ರತಿಫಲ ತುಂಬಾ ಅದ್ಭುತವಾಗಿರುತ್ತದೆ. ಆದರೆ ನನಗೆ ರೂಢಿ ತಪ್ಪಿಹೋದ ಕಾರಣ ನಾನು ನನ್ನ ಕೆಲಸದ ಅವಧಿ ಮುಗಿಸಿ ಪ್ರತಿದಿನ ರಾತ್ರಿ ನಿತ್ಯ ಎರಡು ಗಂಟೆಗಳ ಕಾಲ ಅಭ್ಯಾಸ ಮಾಡಿ ಈ ಪ್ರದರ್ಶನ ನೀಡಿದ್ದೆ.
ಇನ್ನೇನು ನನ್ನ ಪ್ರದರ್ಶನ ಹತ್ತಿರ ಬಂತು ಎನ್ನುವಾಗ ಎದೆ ಬಡಿತ ಜೋರಾಗುತ್ತದಲ್ಲ ಆ ಖುಷಿ. ವೇಷ ಬರೆದುಕೊಳ್ಳುವಾಗ ಬರುವ ಬಣ್ಣದ ಘಮ. ಅಂತಿಮ ಸೌಂದರ್ಯ, ಜನರ ಚಪ್ಪಾಳೆ. ವೇದಿಕೆಯಲ್ಲಿ ನಿಂತಾಗ ಕಣ್ಣಿಗೆ ಕುಕ್ಕುವ ಲೈಟ್‌ಗಳು. ಕಾಲಿನಲ್ಲಿ ಕಟ್ಟಿದ ಗೆಜ್ಜೆಯ ಸಪ್ಪಳ, ವೇದಿಕೆ ಹಿಂಬಾಗದಲ್ಲಿ ನಿಂತಾಗ ಪರದೆ ದಾಟಿ ಬರುವ ಪ್ರಖರ ಬೆಳಕು. ಇದೆಲ್ಲ ಕೊಡುವ ತೃಪ್ತಿ ಮಾತ್ರ ಬೇರೆಯದ್ದು.
Comments
Post a Comment