Skip to main content

ರೀಲ್ಸ್


ಹಿತ ಮಿತ ಸೂಕ್ತ

ರೀಲ್ಸ ನೋಡದ ಜನರೇ ಇಲ್ಲ ಎಂಬಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಿ ಹೋಗಿರುವ ಈ ಚಿಕ್ಕ ವಿಡಿಯೋ ತುಣುಕುಗಳು, ಒಂದರ ಹಿಂದೆ ಒಂದು ಸರಪಟಾಕಿಯಂತೆ ಬರುತ್ತಲೆ ಇರುತ್ತವೆ. ಒಮ್ಮೆ ಇಂಟರ್ನೆಟ್ ಸ್ಪರ್ಶವಾದರೆ ಸಾಕು  ನಾ ಮುಂದೆ ತಾ ಮುಂದೆ ಎಂದು ಅದೆಷ್ಟೋ ಕೋಟಿ ರೀಲ್ಸಗಳು ನಮಗೆ ದೊರೆಯುತ್ತವೆ.


ಟಿಕ್ ಟಾಕ್ ಬ್ಯಾನ್ ಆದ ನಂತರ ಅದಕ್ಕೆ ಪರ್ಯಾಯವಾಗಿ ಅತಿ ಹೆಚ್ಚಾಗಿ ಬಳಕೆಯಾಗುತ್ತಿರುವ ಒಂದು ಉಪಕ್ರಮ ಇದು. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಈ ರೀಲ್ಸನ ಹುಚ್ಚು ಅಭಿಮಾನಿಗಳಾಗುತ್ತಿದ್ದಾರೆ. ಕೆಲವರು ರೀಲ್ಸ ಮಾಡುವವರಾದರೆ ಇನ್ನು ಕೆಲವರು ಅದರ ವೀಕ್ಷಕರು ಒಟ್ಟಿನಲ್ಲಿ ಒಂದಲ್ಲ ಒಂದು ತರದಲ್ಲಿ ನಾವೆಲ್ಲಾ ಸಂಭಂದಿಕರೇ ಆಗಿದ್ದೇವೆ.

ಜನಪ್ರಿಯತೆ ಪ್ರಶ್ನೆ ಕೆಲವರದ್ದಾದರೆ ತಮ್ಮ ಖುಷಿಗೆ ತಾವು ರೀಲ್ಸ ಮಾಡುವ ಮಂದಿ ಎಷ್ಟೋ ಇದ್ದಾರೆ. ನೂರು, ಸಾವಿರ ಮತ್ತು ಮಿಲಿಯನ್ಗಟ್ಟಲೆ ವೀಕ್ಷಣೆಹೊಂದುವ ರೀಲ್ಸಗಳು ನಮ್ಮ ಎದುರಿವೆ. ಒಂದು ಎರಡುಗಂಟೆಗಳ ಸಿನಿಮಾಗಳು ಸಹ ಕೆಲವೊಮ್ಮೆ ಇಷ್ಟು ವಿಕ್ಷಣೆಹೊಂದುವಲ್ಲಿ ಸೋತಿರಬಹುದು. ಆದರೆ ಈ ಕ್ಷಣ ಮಾತ್ರದ ವಿಡಿಯೋಗಳು ಆ ಸ್ಥಾನವನ್ನು ಕೆಲವು ಬಾರಿ ಗಿಟ್ಟಿಸಿಕೊಳ್ಳುತ್ತವೆ.

ಇದರಲ್ಲಿ ಟ್ರೆಂಡ್ ಸೆಟ್ಟಿಂಗ್ ಎನ್ನುವ ಅಂಶ ಕಂಡುಬರುತ್ತದೆ. ಒಂದು ಹಾಡು, ಒಂದು ಉಡುಗೆ, ಒಂದು ಮಾತು ಇದರ ಪುನರಾವರ್ತನೆ ಅಥವಾ ಅನುಕರಣೆಯೇ ಈ ವಿಡಿಯೋದ ಮೂಲ ವಸ್ತು ಆಗಿರುತ್ತದೆ. ಇದರಿಂದ ಎಷ್ಟೊ ಜನರು ಸ್ಟಾರ್ ಗಳಾಗಿದ್ದಾರೆ. ಡಬ್ಬಿಂಗ್ ಮಾಡುತ್ತಾರೆ. ಈ ಸಮಾಜದಲ್ಲಿ ಎಲ್ರೂ ನಟರಾಗೋಕೆ ಆಗಲ್ಲ ನಟರಾಗುವ ಅಂಶ ಇದ್ರು ಅವಕಾಶ ಸಿಕ್ಕಿರೋದಿಲ್ಲ. ಅಂಥವರಿಗಿದು ಉಪಯುಕ್ತ. ಇನ್ನು ಕೆಲವೊಮ್ಮೆ ಕಾಲಹರಣ. ಬಳಕೆಯಲ್ಲಿ ಹಿತ ಮಿತ ಇದ್ದರೆ ಎಲ್ಲವೂ ಸೂಕ್ತ.

ಸುಮಾ.ಕಂಚೀಪಾಲ್


Comments

Popular posts from this blog

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...

ಹೂಗಳಿಂದ ತುಂಬಿದ ಬೆಂಗಳೂರು ಬೀದಿಗಳು

ಪ್ರತಿದಿನ ಬೆಳಗ್ಗೆ ರೆಡಿಯಾಗಿ ಆಫೀಸಿಗೆ ಹೊರಡುವಾಗ ತಡವಾಯ್ತು ಎಂಬ ಗಾಬರಿಯೊಟ್ಟಿಗೆ ಹೊರಡುವುದು. ಆದರೆ ಮನೆ ಬಿಟ್ಟು ರಸ್ತೆಗೆ ಕಾಲಿಟ್ಟ ತಕ್ಷಣ ಹಳದಿ ಹೂಗಳ ಹಾಸಿಗೆ ಕಂಡು ಮನ ಕುಣಿಯುತ್ತದೆ. ಸಿಕ್ಕ ಸಿಕ್ಕದ್ದನ್ನೆಲ್ಲಾ ಫೋಟೋ ತೆಗೆಯುತ್ತಾ ಇನ್ನಷ್ಟು ತಡವಾಗಿಬಿಡುತ್ತದೆ. ನನ್ನ ಪಾಲಿಗೆ ಆ ರಸ್ತೆ ಬರಿ ಡಾಂಬರು ರಸ್ತೆಯಲ್ಲ, ಅದು ಹೂವುಗಳ ಹಳದಿ ಹೊದಿಕೆ ಹೊದ್ದ ರಾಜಮಾರ್ಗ.  ಆ ಹಳದಿ ಹೂಗಳನ್ನು ಕಂಡ ತಕ್ಷಣ ನನ್ನ ಕೈ ತಾನಾಗಿಯೇ ಬ್ಯಾಗ್ ಒಳಗೆ ಹೋಗಿ ಮೊಬೈಲ್ ಹುಡುಕುತ್ತದೆ. ಮೊಬೈಲ್‌ನಲ್ಲಿ ಚಾರ್ಜ್ ಎಷ್ಟಿದೆ? ಸ್ಟೋರೇಜ್ ಫುಲ್ ಆಗಿದೆಯೇ? ಆಫೀಸಿಗೆ ತಡವಾಗುತ್ತಿದೆಯೇ? ಯಾವುದರ ಚಿಂತೆಯೂ ಇಲ್ಲ. ನನ್ನ ಗಡಿಬಿಡಿಯೇನಿದ್ದರೂ ಆ ಹೂವುಗಳನ್ನು ನನ್ನ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯುವುದರಲ್ಲೇ ಇರುತ್ತದೆ.   ಹಾಗೆ ನಾಲ್ಕು ಹೆಜ್ಜೆ ಮುಂದೆ ನಡೆದರೆ ಸಾಕು, ಅಲ್ಲಿ ಮತ್ತೊಂದು ವಿಸ್ಮಯ. ಹಳದಿ ಹೂಗಳ ನಡುವೆ ಅಲ್ಲಲ್ಲಿ ನೀಲಿ ಮಿಶ್ರಿತ ಬಿಳಿ ಮೊಗ್ಗಿನ ರೀತಿಯ ಹೂಗಳು ಕಣ್ಣು ಮಿಟುಕಿಸುತ್ತಾ ನನ್ನನ್ನು ಕರೆಯುತ್ತಿರುತ್ತವೆ. ಅವುಗಳ ಆ ಮುಗ್ಧ ನೋಟಕ್ಕೆ ಮನಸೋತು ಮತ್ತೆ ಅಲ್ಲಿ ಎರಡು ನಿಮಿಷ ನಿಲ್ಲಲೇಬೇಕು. ನಡೆಯುವುದು, ಹೂವು ನೋಡಿ ನಿಲ್ಲುವುದು, ಫೋಟೋ ತೆಗೆಯುವುದು—ಇದೇ ಆಯಿತು ನನ್ನ ನಿತ್ಯದ ಕಾಯಕ. ಆಫೀಸಿಗೆ ಮುಟ್ಟುವುದು ತಡವಾದರೂ ನನ್ನ ಮನಸ್ಸು ಮಾತ್ರ ಆ ಹೂವುಗಳ ಬಣ್ಣದಲ್ಲೇ ಮಿಂದೆದ್ದು ಫ್ರೆಶ...