ಹಿರಿಯ ಪ್ರೇಮ.
ಅವನು ಕೊಡಿಸಿದ ಪಟ್ಟಿ ಪುಸ್ತಕ ನಾನು ಇಷ್ಟಪಟ್ಟದ ಬಣ್ಣದ ನೀರಿನ ಬಾಟಲಿ, ಅಂಗಿ, ಬೆಳ್ಳಿಯ ಕಾಲುಗೆಜ್ಜೆ, ಜಗುಲಿಗೆ ಕೂತರೆ ತೂಗು ಹಾಕಿದ ಅವನ ನಗು ಮೊಗದ ಪೋಟೋ. ಕೈಯಾಡಿಸಿದಲ್ಲೆಲ್ಲಾ ಅವನ ಇರುವಿಕೆಯ ಸಣ್ಣ ಸಣ್ಣ ವಸ್ತುಗಳು.
"ಹಲೋ ಮರಿ ಎಂತ ಮಾಡ್ತಿದ್ದೆ "ಎಂದು ಅಜ್ಜ ಪೋನಿಸುವಾಗೆಲ್ಲ ಅಲವರಿಕೆಯ ಮಾತನ್ನಾಡಿ” ಮತ್ತೇನು ಇಲ್ಲೆ ಎಲ್ಲಾ ಅರಾಮು”ಎಂಬಷ್ಟೇ ವಿಷಯದಲ್ಲಿ ಮಾತನಾಡಿ ತಾತ್ಸಾರ ಮಾಡುತ್ತಿದ್ದ ಹಿಮಾಳಿಗೆ ಈಗ ಅಜ್ಜನಿಲ್ಲ.
ಅವಳು ಅಜ್ಜನ ಪೋನು ಬರುವ ಹೊತ್ತಿಗಾಗಿ ಈಗ ಕಾಯುತ್ತಾಳೆ ಆದರೆ ಏನು ಪ್ರಯೋಜನ ಅಸ್ತಮಾ ಇರುವ ಅವಳ ಅಜ್ಜ ತೀರಿಕೊಂಡು ಈಗಷ್ಟೇ ಒಂದು ವಾರ ಕಳೆದಿದೆ. ತಿಂಗಳಿಗೊಮ್ಮೆಯಾದರೂ ಪೇಟೆಗೆ ಬಂದಾಗ ಮಗಳ ಮನೆಗೆ ಬಂದು ಮೊಮ್ಮಗಳಿಗೆಂದು ಲಿಂಬು ಚಾಕಲೇಟ್ ತರುವ ಪರಿಪಾಠ ಇಟ್ಟುಕೊಂಡಿದ್ದ. ಆದರೆ ಇವಳು ಇಂದಿನ ಡೇರಿಮಿಲ್ಕ ಚಾಕೊಲೇಟ್ ಬಿಟ್ಟು ಬೇರೇನು ಮುಟ್ಟುವುದಿಲ್ಲ.
ಅಜ್ಜನನ್ನು ಕಂಡರೆ ಇಷ್ಟವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದವಳಿಗೆ ಈಗ ಅಜ್ಜನಿಲ್ಲದೇ ಅಳು ನಿಲ್ಲಿಸಲಾಗುತ್ತಿಲ್ಲ.
ಅಜ್ಜನನ್ನು ಇಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದೆ ಎಂಬುದು ಈಗ ಅರ್ಥವಾಗ್ತಿದೆ. ಅಮ್ಮ ನನಗೆ ಅಜ್ಜ ಬೇಕು ,ಅವನ ಪೋನು ಬರಬೇಕು, ಕೊನೆಗೆ ಅವನು ಹೋಗುವುದೇ ಆದರೆ ಒಂದೇ ಒಂದು ಬಾರಿ ಕೇವಲ ಹತ್ತು ನಿಮಿಷ ಅವನೊಟ್ಟಿಗೆ ನನಗೆ ಮಾತನಾಡುವುದಿದೆ. ಕ್ಷಮಿಸು ಎಂದು ಕೇಳಬೇಕಿದೆ ಎಂದು ಗೋಗರೆಯುತ್ತಿದ್ದಾಳೆ. ನಿಮಗೂ ವಯಸ್ಸಾದ ಅಜ್ಜನೊ ಅಜ್ಜಿಯೊ ಇದ್ದರೆ ಅದು ನಿಮ್ಮ ಪುಣ್ಯ ಅವರು ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ. ಗಾಯವಾದಾಗ ಔಷಧ ತೆಗೆದುಕೊಳ್ಳುವುದಕ್ಕಿಂತ ಗಾಯವಾಗದಂತೆ ನೋಡಿಕೊಳ್ಳುವುದು ಉತ್ತಮ.
ಸುಮಾ.ಕಂಚೀಪಾಲ್
Comments
Post a Comment