Skip to main content

ದೇವತೆ ಮತ್ತೆ ಹೊರಟಳು ಸ್ವರ್ಗದತ್ತ

ದೇವತೆ ಮತ್ತೆ ಹೊರಟಳು ಸ್ವರ್ಗದತ್ತ.
ಪುಟ್ಟಕರುವಾಗಿ ಪುಟಿಯುತ್ತಾ ಆಡುತ್ತಾ ಬೆಳೆದು ಮೆಂದು ಇರುವ ಹಸುವೊಂದು ಇಂದು ಮೈಕೊರಟು ಮಾಡಿ ಉಸಿರ ಏರಿಳಿತಗಳಿಲ್ಲದೆ ನೆಲದ ಮೇಲೆ ಮಲಗಿಯೇ ಇದೆ.! ಕೆಚ್ಚಲು ತುಂಬಿ ಸುರಿವ ಹಾಲು ಕೊನೆಯ ಉಸಿರಲ್ಲೂ ಚಿಮ್ಮಿಸಿ ಸುಮ್ಮನಾಗಿದೆ. ಈಗಲೂ ನಾವು ಹಾಲುಂಡ ಆ ತಾಯಿ ಸ್ವರ್ಗದ ಬಾಗಿಲೆಡೆಗೆ ಬಾಲ ಬೀಸಿ ನಡೆಯುತ್ತಿದೆ ಎಂದರೆ ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಉಳಿದಿರಲಿಲ್ಲ. ಅಮ್ಮ ಅಕ್ಕರೆಯಿಂದ ಬೆಳೆಸಿದ ಮುದ್ದಿನ ಕರು. ತಮ್ಮ ಆಗಾಗ ಚಿಕ್ಕ ಕೊಂಬು ಹಿಡಿದು ದೊಡ್ಡ ಯುದ್ದವನ್ನೇ ಮಾಡಿದ್ದು ಆ ಹಸುವಿನೊಂದಿಗೆ, ಎಳೆಹುಲ್ಲಿನ ಚಿಗುರನ್ನಷ್ಟೇ ಅಜ್ಜ ಕೊಯ್ದು ತಿನ್ನಿಸಿ ಬೆಳೆಸಿದ್ದು ಇದೇ ಕರುವನ್ನು. ಬುಟ್ಟಿ ಹಿಂಡಿ ಕೊಟ್ಟು ಅಪ್ಪ ಹಾಲು ಹಿಂಡಿದ್ದು ಇದೇ ಹಸುವಿನದು. ಬೇರೆಯವರಿಗೆ ಹತ್ತಿರ ಸುಳಿಯಲು ಭಯ ಹುಟ್ಟುವಷ್ಟು ಧೈತ್ಯವಾಗಿ ಬೆಳೆದಿತ್ತು ಇದೇ ಹಸು. ಎದೆಗೆ ಚುಚ್ಚಿದ ಮುಳ್ಳು ಒಳಗಡೆಯೇ ಮುರಿದಂತೆ ಮನದ ನೋವು.



ಒಂದುವಾರದಿಂದ ಹಿಂದೆ ಏಕೋ ಒಂದು ದಿನ ಮಲಗಿದ ಹಸು ಏಳಲೇ ಇಲ್ಲ. ಕಣ್ಣುಗಳಲ್ಲೇ ತನಗೆ ಏನೋ ಆಗಿದೆ ಎಂದು ಸಣ್ಣದಾಗಿ ಹೇಳುತ್ತಿದ್ದ ಅವಳ ಮಾತು ಮೊದಲು ತಿಳಿದದ್ದು ಅಮ್ಮನಿಗೆ. ಇಲ್ಲ ಸಂಜೆಯಾದರೂ ಹುಲ್ಲು, ನೀರು, ಅವಳಿಷ್ಟದ ಬಾಳೆ ಎಲೆ ಯಾವುದನ್ನೂ ತಿನ್ನುತ್ತಿಲ್ಲ ಹಾಲು ಕರೆಯಬೇಕೆಂದು ಹತ್ತಿರ ಹೋದರು ಏಳುವ ಬಲುಮೆ ಅವಳಲ್ಲಿರಲಿಲ್ಲ. ಅಪ್ಪ ತಡಮಾಡಲಿಲ್ಲ " ಡಾಕ್ಟರ್ ಒಮ್ಮೆ ಬಂದು ನೋಡಿ ಎಂದಿಗೂ ಚುರುಕಾಗಿಯೇ ಇರುತ್ತಿದ್ದ ನಮ್ನ ಹಸುವಿಗೆ ಏನೋ ಆಗಿದೆ" ಎಂದು ಪೋನಿಸಿದ ಮಾರನೆ ದಿನ ಬೆಳಿಗ್ಗೆ ಬಂದು ವಿಚಾರಿಸಿ ಔಷದಿ ನೀಡಿ ಹೋಗಿದ್ದಾಯ್ತು. ಮರುದಿನವೂ ಯಾವಸುಧಾರಣೆಯೂ ಕಾಣುತ್ತಿಲ್ಲ. ಮನೆಯ ಮನುಷ್ಯರಿಗೆ ಹುಶಾರು ತಪ್ಪಿದರೆ ಎಷ್ಡು ಕಳವಳವೋ ಅದಕ್ಕಿಂತ ಹೆಚ್ಚಿನ ಆತಂಕ ನಮ್ಮೆಲ್ಲರದು. ಯಾಕೆ ಹೇಳಿ!? ನಾವಾದರೆ ಮಾತಿನಲ್ಲಾದರೂ ನಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಳ್ಳುವ ಅವಕಾಶವನ್ನು ದೇವರು ಒದಗಿಸಿದ್ದಾನೆ. ಅವಳಾದರೋ ಮೂಕ ಪ್ರಾಣಿ. ರಾತ್ರಿ ನಿದ್ದೆ ಬಾರದೆ ಅಪ್ಪ ಮನದಲ್ಲಿ ಅದೆಷ್ಟು ವಿಚಾರ ಮಾಡಿದರೋ ಏನೋ. ನಮ್ಮ ಜೀವನದ ಮುಖ್ಯ ಆಧಾರವೇ ಅವಳಾಗಿದ್ದಾಗ ಅವಳನ್ನು ಕಳೆದುಕೊಳ್ಳುವ ಭಯವನ್ನು ನೆನೆಯಲೂ ಸಾಧ್ಯವಿಲ್ಲದ ಪರಿಸ್ಥಿತಿ ನಮ್ಮದಾಗಿತ್ತು. 
ನಾಕಾರು ವೈದ್ಯರನ್ನು ದಿನ ದಿನವೂ ಕರೆಸಿ ಅದೆಷ್ಟು ಬಾರಿ ಸೂಜಿಗಳನ್ನು ಅವಳ ಚರ್ಮದ ಪದರಗಳಲ್ಲಿ ನುಸುಳಿಸಿ ನೋವು ಕೊಟ್ಟೆವೋ ಲೆಕ್ಕವಿಲ್ಲ. " ಇಲ್ಲಾ ಈ ಹಸು ಉಳಿಯುವ ಸಾಧ್ಯತೆ ತುಂಬಾ ಕಡಿಮೆ ಇದೆ" ಎಂದು ವೈದ್ಯರು ಹೇಳಿದಾಗಲೇ ಅಪ್ಪನ ಹೊಟ್ಟೆಯಲ್ಲಿ ನೂರು ಕೊಳ್ಳಿದೆವ್ವಗಳ ಸಾಲು ಸುಳಿದಿತ್ತು. ಮನಸ್ಸು ಗಟ್ಟಿಮಾಡಿಕೊಂಡು ಪ್ರಯತ್ನ ಬಿಡದೆ ಇಲ್ಲ ಮತ್ತು ಬೇರೆ ವೈದ್ಯರಿದ್ದರೆ ತಿಳಿಸಿ ಹೇಗಾದರೂ ಮಾಡಿ ನಾನು ಉಳಿಸಿಕೊಳ್ಳುತ್ತೇನೆ ಎಂದು ಮತ್ತೂ ಒಂದು ಚಿಕ್ಕ ಭರವಸೆಯನ್ನು ಅವನಿಗವನೇ ತಂದು ಕೊಂಡ.

ಮೂರು ಹೊತ್ತು ಅವಳು ನರಳುವ ಮತ್ತು ಉಸಿರಾಡಲು ಪಡುತ್ತಿದ್ದ ಕಠೋಟ ನೋವುತುಂಬಿದ ದನಿಗಳು ಕೊಟ್ಟಿಯ ಕಡೆಯಿಂದ ಅಲೆಯಾಗಿ ಮನೆಯನ್ನು ಸುಳಿಯುತ್ತಿತ್ತು. ಎರಡು ದಿನದಿಂದ ಅವಳೊಟ್ಟಿಗೆ ಅಪ್ಪ,ಅಮ್ಮನೂ ನಿಶ್ಚಿಂತರಾಗಿ ನಿದ್ದೆ ಮಾಡಿರಲಿಲ್ಲ. ಅಮ್ಮ ದಿನವೂ ಅವಳ ಮೈಗೆ ಬಿಸಿ ನೀರ ಶಾಖ ನೀಡಿ ತುಂಬಾ ಪ್ರೀತಿಯಿಂದ " ಶೋಭಾ ನಿನಗೆ ಏನಾಗುತ್ತಿದೆ!? ನಾನಿದ್ದೇನೆ ಎಂದು ಮೈಮೇಲೆ ಕೈಯಾಡಿಸುತ್ತಿದ್ದರೆ. ಅಮ್ಮನನ್ನೇ ದಿಟ್ಟಿಸಿ ನೋಡಿ ಇದಕ್ಕೂ ಹೆಚ್ಚು ನನ್ನಿಂದಾಗದು. ನಾನು ನಿಮ್ಮನ್ನು ಅಗಲುವ ಸಮಯ ಬಂದಂತಿದೆ ಎಂದು ಹೇಳಿದ್ದು ಅಮ್ಮನಿಗೂ ತಿಳಿಯುತ್ತಿತ್ತು ಆದರೂ ಅವಳ ಪಕ್ಕ ಕುಳಿತು ಸಮಾಧಾನ ಮಾಡುತ್ತಿದ್ದರು. ಏಳಲು ಪ್ರಯತ್ನಿಸುತ್ತಿದ್ದ ಅವಳನ್ನು ಯಂತ್ರದ ಮೂಲಕ ಎತ್ತಿ ನಿಲ್ಲಿಸುವ ಪ್ರಯತ್ನವೂ ನಡೆಯಿತು. ಬದುಕ ಬೇಕು ಎದ್ದು ನಿಲ್ಲಬೇಕೆಂಬ ಅವಳ ಬಯಕೆಯೂ ಏಳುವಾಗ ಅವಳ ಮೊಣಕಾಲಿಗಾದ ಗಾಯವೇ ಸಾರುತ್ತಿತ್ತು.



ಏಳು ಬಾರಿ ಬೇರೆ ಬೇರೆ ವೈದ್ಯರನ್ನು ತರಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಯಸ್ಸಾದ ಹಸುವಲ್ಲ ಹುಟ್ಟಿ ಐದುವರ್ಷವಷ್ಟೇ ಆಗಿತ್ತು. ತಮ್ಮನಿಗೂ ಅವಳೆಂದರೆ ವಿಶೇಷವಾದ ಒಲವಿತ್ತು ಯಾಕೆಂದರೆ ತಿಂಗಳಿದು ಐದಾರು ಬಾರಿ ಕುಣಿದು ಕುಣಿದು ಕುತ್ತಿಗೆಯ ಹಗ್ಗ ಬಿಡಿಸಿಕೊಂಡು ಓಡುತ್ತಿದ್ದ ಅವಳ ದೈತ್ಯಕಾಯವನ್ನು ಉಪಾಯಮಾಡಿ ಹಿಡಿದು ತಂದು ಅಶ್ವಮೇಧದ ಕುದುರೆ ಕಟ್ಟಿದಷ್ಟು ಖುಷಿ ಪಡುತ್ತಿದ್ದ. ಅವಳೊಟ್ಟಿಗೆ ಅದನ್ನೇ ಮಾತನಾಡಿ ನಗುತ್ತಿದ್ದ. ಯಾವದಕ್ಕೂ ಕರಗದ ಅವನ ಮನಸ್ಸು ಇವಳ ನರಳಾಟಕ್ಕೆ ತೀರಾ ಕುಂದಿ ಹೋಗಿತ್ತು.

ಕೊನೆಯ ದಿನದಲ್ಲಿ ಅವಳ ಶರೀರದ ಬಾಗಗಳು ಬಿರುಕು ಬಿಡತೊಡಗಿದ್ದವು. ಗಡ್ಡೆಯಂತಾಗಿದ್ದವು. ಕೆಚ್ಚಲು ತುಂಬಾ ಭಾರವಾಗಿದ್ದವು, ಅಲ್ಲಲ್ಲಿ ಗಾಯಗಳು ಔಷಧಿಯ ಪರಿಣಾಮವಾಗಿ ಬಾವು ಬಂದಿತ್ತು. ಪದೇ ಪದೇ ಅವಳು ಬದುಕುವುದಿಲ್ಲ ಎಂಬ ಭಾವ ದೃಡವಾಯ್ತು. ಹೇಗಾದರೂ ಸಾಯುವವಳು ಈ ಎಲ್ಲ ನೋವುಗಳಿಂದ ಬೇಗ ಮುಕ್ತಿಹೊಂದಿ ಬೇರೆ ದಾರಿ ಹಿಡಿಯಲಿ ಎಂದು ಕೊನೆಗೆ ನಾವೇ ಬಯಸುವ ಸ್ಥಿತಿಯಲ್ಲಿ ಅವಳು ಇಂದು ಉಸಿರು ನಿಲ್ಲಿಸಿದ್ದಾಳೆ. ಏಳು ಜನ ಸೇರಿದರು ಎತ್ತಲಾಗದ ಅವಳ ದೈತ್ಯ ದೇಹವನ್ನು ಅಂತ್ಯಸಂಸ್ಕಾರಕ್ಕಾ ಎಳೆದುಕೊಂಡು ಹೋಗುವ ಕಾಲಕ್ಕೆ ಅಪ್ಪನ ಮನಸ್ಸು ಅದೆಷ್ಟು ಸಹಸ್ರ ಚೂರುಗಳಾಗಿ ಒಡೆದವೆಂದು ಊಹಿಸಲು ನಮಗೆ ಸಾದ್ಯವಾಗುವುದಿಲ್ಲ. 


ಸದಾ ಜೊತೆಯಾಗಿರುತ್ತಿದ್ದ ಅಂಬಾ ಎನ್ನುವ ಭಾಷೆಯಲ್ಲಿ ಮಾತನಾಡುತ್ತಿದ್ದ ಉಳಿದ ಹಸುಗಳಿಗೆ ಆ ದೃಷ್ಯದ ಅರಿವಾಗಿರಬಹುದು ಹಗ್ಗ ಹರಿಯುವಂತೆ ಕುಪ್ಪಳಿಸಿ ಅಂಬಾ, ಅಂಬಾ, ಎಂದು ಎಣಿಸಲಾರದಷ್ಟು ಬಾರಿ ಕೂಗಿದವು. ಮಾತೂ ಬಾರದ ಕಣ್ಣೀರೂ ಸುರಿಯದ ಒಳನೋವು ಅಪ್ಪನಿದಾದರೆ ,ಈ ಯಾವ ದೃಷ್ಯವನ್ನೂ ನೋಡುವ ಮನಸ್ಸು ಮಾಡದ ಅಮ್ಮ ಇನ್ನೊಂದು ಕಡೆ. ಹಗ್ಗ ತಪ್ಪಿಸಿಕೊಂಡಾಗ ಅವಳನ್ನು ಮಣಿಸುತ್ತಿದ್ದ ತಮ್ಮನ್ನು ಇಂದು ಅವಳನ್ನು ಮಣ್ಣಿನ ಗುಣಿಯೆಡೆಗೆ ಎಳೆಯುತ್ತಿದ್ದಾನೆ. ಅವನಿಗೂ ಅನಿಸಿಯೇ ಅನಿಸಿರುತ್ತದೆ " ಒಮ್ಮೆ ಎದ್ದು ಓಡಿಬಿಡು ದಯವಿಟ್ಟು ಮತ್ತೆ ಹಿಡಿಯುತ್ತೇನೆ " ಎಂದು ಬಲಗೈಯ ಅಂಗಿ ತೋಳುಗಳು ತೊಯ್ಯವಷ್ಟು ಅವನು ಕರಗಿದ್ದಾನೆ. ದೂರದ ಊರಲ್ಲಿರುವ ನನಗೆ ಕೊನೆಪಕ್ಷ ಅವಳನ್ನು ನೋಡುವ ಕನಿಷ್ಠ ಭಾಗ್ಯವೂ ಸಿಗಲಿಲ್ಲ.

ಸುಮಾ.ಕಂಚೀಪಾಲ್

ಅವಧಿ ಬ್ಲಾಗ್ ನಲ್ಲಿ ಹಿಂದೆ ಪ್ರಕಟವಾದ ನನ್ನ ಬರಹ. 
#avadhi

Comments

  1. ನೀನಾರಿಗಾದೆಯೋ ಎಲೆ ಮಾನವಾ...! ಹಾಡು ನೆನಪಾಯಿತು...

    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...