Skip to main content

ಹೆಸರಿಸಲಾಗದ್ದು

ಶುಕ್ರವಾರ ದಿನಾಂಕ ಹದಿನಾರು ಬೆಳಿಗ್ಗೆ ಹಠಮಾಡಿ ಸತ್ತರೂ ಬದುಕಿದರೂ ಅವನನ್ನು ನೋಡುವುದೇ ಎಂಬ ಆಶಯದಿಂದ ಜಪಗುಡುವ ಮಳೆಯಲ್ಲಿ ಮನೆ ಬಿಟ್ಟೆವು. ಅಮ್ಮ ಮತ್ತು ನಾನು ಬಸ್ಸಿಲ್ಲದೆ ಯಾವುದೋ ಗಾಡಿ ಹತ್ತಿ ಬಂದು, ಮಾವನ ಮನೆಯಿಂದ ಕಾರಲ್ಲಿ ಹೊರಡುವಷ್ಟರಲ್ಲಿ ಬಿಪೀ ಲೋ ಆಗಿದೆ. ನಾಡಿ ಬಡಿತವಿಲ್ಲ. ಎಂಬ ಸುದ್ದಿ ಸಿಕ್ಕಿ ಇನ್ನಷ್ಟು ಗಟ್ಟಿಯಾಗಿ ಹೊರಡೊ ಹೊತ್ತಲ್ಲೆ ಕಾಗೆಗಳ ಹಿಂಡು ಕೂಗುತ್ತಿತ್ತು ಮರದೆತ್ತರಕ್ಕೆ ಕಣ್ಣು ಹಾಯಿಸಿ ಹಾಗೇ ಒಂದು ನೋಟ ನನ್ನೆಡೆಗೆ ಬೀರಿದ ಅಮ್ಮನ ಕಣ್ಣಲ್ಲಿ ನೀರು ತುಂಬಿತ್ತು.

ಅಲ್ಲಿಂದ ಹೊರಟು ಅರ್ಧದಾರಿ ಮುಟ್ಟಿದಾಗ ಹನ್ನೊಂದು ನಲವತ್ತೈದು ಕಾರು ನಿಲ್ಲಿಸಿದ್ದೆವು. ಅವನು ಉಸಿರು ನಿಲ್ಲಿಸಿದ್ದ. ನಾನು ಅಳು ನಿಲ್ಲಿಸಿದ್ದೆ. ಎಲ್ಲವೂ ಕಣ್ಣೆದೆರು ಒಮ್ಮಲೆ ಬಂದಂತಾಗಿ ಮೂಕಮಾತ್ರಳಾದೆ. ಅಲ್ಲಿಗೆ ಬರುವುದು ಬೇಡ ಎಂದರು ಹೋಗುವಷ್ಟರಲ್ಲಿ "ಬಾಡಿ ನೋಡುದಾದರೆ ಬನ್ನಿ" ಎಂದಾಗ ಹೃದಯವು ಒಂದೊಂದು ಹೋಳಾಗಿ ಹುಡುಕಿದರು ಜನ್ಮವಿಡಿ ಸಿಗದಷ್ಟು ಪುಡಿಯಾಗಿತ್ತು.

ತವಕದಲಿ ಐ ಸಿ ಯು ಹತ್ತಿರ ಹೋದೆ ಹಸಿರಂಗಿ ತೊಡಿಸಿದರು. ಹೋಗುವಷ್ಟರಲ್ಲಿ ಹತ್ತಾರು ವಾಲುಗಳ ನಡುವೆ ಮಲಗಿದ್ದ. ನಾಲಿಗೆ ಹೊರಚಾಚಿತ್ತು. ಕರುಳು ಕಿವುಚಿ ಬಂತು. ಮುಟ್ಟ ಬಹುದೇ ಎಂದು ಕೇಳಿದೆ ತಲೆ ಅಲುಗಾಡಿಸಿದರು. ಎರಡು ನಿಮಿಷ ಅವನ ರಕ್ತ ಕುಂದಿದ ಬಿಳಿ ಕೈಯಲ್ಲಿ ನನ್ನ ಕೈ ಹಿಡಿದು ಮನದ ಭಾವನೆಗಳೆಲ್ಲವನ್ನು ಹರಿಸಿದೆ. ಜನ್ಮವಿಡಿ ಜೊತೆಗಿರು ಖುಷಿಯಿಂದ ಹೋಗಿಬಾ ಎಂದೆ. ಮತ್ತೆ ಒಮ್ಮೆ ಮೇಲಿಂದ ಕೆಳಗೆ ನೋಡಿದೆ.



ಕತ್ತಿನ‌ ಕೆಳಭಾಗದಲ್ಲಿ ಒಂದು ಪಪ್ಪಾಯಿ ಹಣ್ಣಿನಷ್ಟು ಉಬ್ಬಿತ್ತು. ತುಟಿ ಬಿಳಿಗಟ್ಟಿತ್ತು ರಕ್ತ ಕನ್ನೆತ್ತರು ಕಂಡು ಕಣ್ಮುಚ್ಚಿದೆ. ಹೊರನೆಡೆಯಲು ಸೂಚಿಸಿದರು ನನ್ನ ನಗುಮೊಗ ತೋರಿಸಿಯೇ ಹೊರಬಿದ್ದೆ. ಅವನಮ್ಮನ ಎದುರು ಅಳಬೇಡ ಎಂದು ನನ್ನಮ್ಮನಿಗೆ ಗದರಿದೆ. ನನಗೆ ಅದೆಲ್ಲಿಂದ ಅಳು ನಿಂತಿತ್ತೊ ಗೊತ್ತಿಲ್ಲಾ ಎಲ್ಲರಿಗೂ ಸಮಾಧಾನ ಮಾಡಿದೆ.

ತೀರಾ ಆಪ್ತರಾದ ನಾನು ನನ್ನ ಮಾವ ಅಂದರೆ ಇವನ‌ ಅಣ್ಣ ಪ್ರವೀಣ ತುಂಬಾ ಆಪ್ತರು ಮೂವರಿಗೂ ತಿಳಿದಿರದ ವಿಷಯಗಳಿಲ್ಲ. ನನಗೂ ಈಗ ಹಾಸಿಗೆಯಲ್ಲಿ ಬದುಕ ಯಾನ ಮುಗಿಸಿದ ಪ್ರಸಾದ ಮಾವನಿಗೂ ಒಂದು ವರ್ಷಗಳ ಅಂತರ ಅಷ್ಟೇ. ಎಷ್ಟು ಆಪ್ತರಿದ್ದೆವೆಂದರೆ ಒಂದು ಪೆನ್ಸಿಲ್, ಚಪ್ಪಲಿ, ಬ್ಯಾಗ್ ಏನೇ ಕೊಂಡು ಆನ್ಲೈನ್ ಆರ್ಡರ್ ಮಾಡಿದರು ಸ್ರೀನ್ ಶಾಟ್ ಮೂವರಿಗೂ ತಲುಪಿಯೇ ತಲುಪುತ್ತದೆ ಹಾಗೆ. ಮಾತಾಡದೆ ಮೂರುದಿನ ಮೀರಿದರೆ ಕೋಪಿಸಿಕೊಳ್ಳುತ್ತಿದ್ದೆವು. ದಿನವೂ ಒಂದಾದರೂ ಮೆಸೇಜ್ ಇದ್ದೇ ಇದೆ.

ಇನ್ನು ಮುಂದೆ ಆ ಕಡೆಯಿಂದ ಯಾವ ಪ್ರತ್ಯುತ್ತರವೂ ಬರುವುದೇ ಇಲ್ಲ ಎಂದು ನಾನು ಹೇಗೆ ಸಂತೈಸಲಿ ನನ್ನನ್ನು. ದೇವರು ಎಷ್ಟು ಕ್ರೂರಿ ಎಂದರೆ ಸರಿ  ಇದ್ದ ಒಬ್ಬ ಮಗನನ್ನು ಅವನ ತಂದೆ ತಾಯಿಯಿಂದ ಕಸಿದ. ಎಷ್ಟು ಜನ ಅವನಿಗಾಗಿ ಪ್ರಾರ್ಥನೆ ಮಾಡಿದ್ದರು ಲೆಕ್ಕವಿಲ್ಲ. ಎಲ್ಲರಿಗೂ ಆಪ್ತ, ಆತ್ಮೀಯ.
ಆಸ್ಪತ್ರೆಯಲ್ಲಿ ಅವನಿಗಾಗಿ ಕಾದಿದ್ದ ಜನರ ಗುಂಪು ನೋಡಿದರೆ ಇಷ್ಟು ಜನರ ಕಣ್ಣೀರು ಅವನ ಮೈ ಪೂರಾ ತೋಯಿಸಿ ಬಿಡುವಷ್ಟಿತ್ತು..

ಬ್ರೇನ್ ಡೆಡ್ ಆಗಿದೆ ನೀವು ಅಂಗಾಂಗ ದಾನ ಮಾಡುವುದಾದರೆ ಮಾಡಿ ಬಿಡಿ ಎಂದು ಮೊದಲನೇ ದಿನವೇ ಡಾಕ್ಟರ್ ಹೇಳಿದ್ದರು. ಆದರೂ ದೈವ ಬಲದಿಂದ ಉಳಿಯಬಹುದು ಎಂಬ ಆಸೆಗೆ ಪೂಜೆ ಹವನ ಮಾಡಿಯಾಯ್ತು.

ಸಲ್ಪ ಚೆತರಿಸಿದ ರೇಖಿ ಚಿಕಿತ್ಸೆ ಮಾಡಿ ಆತ್ಮವನ್ನು ದೇಹದೊಳಗೆ ಕರೆಸಲಾಗುತ್ತಿತ್ತು. ಅವನು ಪ್ರಯತ್ನಿಸಿದ ಕೈ ಕಾಲು ಚಲನೆ ಆಯ್ತು ಹುಬ್ಬು ಅದುರಿತ್ತು. ಕೊನೆಗೆ ಅವನಮ್ಮ ಇನ್ನು ಬೇಡ ನಿನಗೆ ಮತ್ತೆ ನೋವು ಕೊಡುವುದಿಲ್ಲ. ನೀನು ಹೋಗಿ ಬಾ ಈ ದೇಹ ಯೋಗ್ಯವಿಲ್ಲ ಎಂದು ಅವಳ ಬದುಕಿನ ಎಲ್ಲ ಶಕ್ತಿ ಸೇರಿಸಿ ಹೇಳುವ ಹೊತ್ತಿಗೆ.

ಬಿಪಿ ಲೊ ನಿಧಾನಕ್ಕೆ ಹೃದಯ ಒಂದರಲ್ಲಿ ಮಾತ್ರ ಜೀವಿಸುತ್ತಿದ್ದ ಅವನ ಆತ್ಮ ಪರಮಾತ್ಮನ ಎಡೆಗೆ ನಡೆಯಿತು. ಅದೆಷ್ಟೋ ಬಾರಿ ನಾನು ಸನ್ಯಾಸಿ ಆಗುತ್ತೇನೆ. ಮುಕ್ತಿ ಪಡೆಯುತ್ತೇನೆ. ನಾನು ಕೆಲ ವರ್ಷಗಳ ನಂತರ ನಿಮಗೆ ಕಾಣುವುದಿಲ್ಲ ದೇಶಾಂತರ ಹೋಗುತ್ತೇನೆ ಎಂದೆಲ್ಲಾ ನನ್ನ ಬಳಿ ಹೇಳುತ್ತಿದ್ದ. ಅವನ ಮಾತು ಇಷ್ಟು ಬೇಗ ನಿಜವಾಗುತ್ತದೆ ಎಂದು ಊಹಿಸಿರಲಿಲ್ಲ.

ದೇವರು ಬದುಕವ ಮತ್ತು ಸಾಯುವ ಎರಡು ಆಯ್ಕೆ ತನ್ನೆದುರಲ್ಲಿಟ್ಟರೆ ನಾನು ಸಾವನ್ನೆ ಆಯ್ದು ಕೊಳ್ಳುತ್ತೇನೆ ಎಂದು ನಿಮ್ಮಿಬ್ಬರ ಮಾತಿನಲ್ಲಿ ಸದ್ಯವೇ ಬಂದಿತ್ತು. ಅದೇ ಅವನ ಆಸೆಯೂ ಆಗಿತ್ತು ಎಂದರೆ ಅವನು ತನ್ನ ಖುಷಿಯನ್ನು ಸಾವಲ್ಲಿ ಕಂಡುಕೊಂಡ. ಆದರೆ ನಮ್ಮೆಲ್ಲರಿಗೆ ಸಹಿಸಲಾಗದ ಸದಾ ಎದೆಯಲ್ಲಿ ಹಸಿಯಾಗೆ ಉಳಿವ ಅಗ್ನಿ ಬರೆಗಳನ್ನು ಎಳೆದು ಹೋದ.

ಧಾರವಾಡದಿಂದ ಮಾವನ ಕಾರಲ್ಲಿ ಕೂತು ಬರುವ ಹೊತ್ತಿಗೆ ನಾಳೆ ಬೆಳಿಗ್ಗೆ ಮಾಡುವ ಅಂತ್ಯಕ್ರಿಯೆಗೆ ಬೇಕಾಗುವ ಸಾಮಾನುಗಳೆಲ್ಲವನ್ನು ಗಾಡಿಯಲ್ಲಿ ಹೇರುವಾಗ. ಅವನ ಕೊನೆಯ ವಸ್ತು ಅಸ್ತಿ ತುಂಬುವ ಮಣ್ಣಿನ ಗಡಿಯನ್ನು ನನ್ನ ಕಾಲ ಮೇಲಿಟ್ಟು "ಜೋಪಾನ ಇದು ಒಡೆಯಬಾರದು ಸರಿಯಾಗಿ ಹಿಡಿದು ಕೂತುಕೋ "ಎಂದಾಗ. ನಾನು ಅವನು ಕೂಡಿ ಕೊಳ್ಳ ಬೇಕೆಂದಿದ್ದ ಎಷ್ಟೋ ವಸ್ತುಗಳು. ಸೇರಿ ಸುತ್ತಬೇಕೆಂದಿದ್ದ ಎಷ್ಟೋ ಜಾಗಗಳು ಕಣ್ಣಲ್ಲಿ ನೀರಾಗಿ ಹರಿದು ಹೋಗುತ್ತಿವೆ.

ಮಗ ಮಾಡುವ ಕಾರ್ಯವನ್ನು ತಂದೆ ಮಾಡುವಂತಹ ದೃಷ್ಯವನ್ನು ಇನ್ನು ಹೇಗೆ ಈ ಮಣ್ಣಿನ ಮಡಿಕೆಯೊಳಗೆ ನೋಡಲಿ! ??

ಎಂ.ಎಸ್.ಇ ಕೊನೆಯ ವರ್ಷದ ಪರೀಕ್ಷೆ ಜೊತೆಗೆ ಪಿ.ಎಚ್.ಡಿ‌ ಕೊಂಚಿಂಗ್ ಪಡೆದು ಬದುಕಿನ ಹಲವಾರು ಕನಸುಗಳನ್ನು ಅವನು ಕಂಡಿದ್ದ ಎನ್ನುವುದಕ್ಕಿಂತ ನಾವೆಲ್ಲ ಅವನ ಕುರಿತಾಗಿ ಇನ್ನೂ  ಹೆಚ್ಚು ಕಂಡಿದ್ದೆವು. ಅವನು ಎಲ್ಲರಂತಿರಲಿಲ್ಲ ವಿಶೇಷ ಎನಿಸಿದ್ದ. ಜಗಳ, ತಕರಾರು ಟೆನ್ಶನ್ ಎನ್ನುವುದೇ ಇರಲಿಲ್ಲ.  ಕಲಿಯುವ ಸಲುವಾಗಿ ಹೋದವ ರಾತ್ರಿ ಊಟಕ್ಕೆಂದು ಹೊರಗೆ ತನ್ನ ಸ್ನೇಹಿತರೊಟ್ಟಿಗೆ ಹೋದವನಿಗೆ ಇನ್ನೊಂದು ಬೈಕ್ ಬಂದು ಗುದ್ದಿದ ರಭಸಕ್ಕೆ ಹೆಲ್ಮೆಟ್ ಪುಡಿಯಾಯ್ತು. ಮೈಗೆ ಯಾವ ಗಾಯವೂ ಆಗದೆ ಇದ್ದರೂ ಮೆದುಳು ಮಾತ್ರ ಬಲವಾಗಿ ನೊಂದಿತ್ತು.

ಕಿವಿ, ಮೂಗಿನಿಂದ ರಕ್ತ ಹರಿದಿತ್ತು. ಅವನ ಅಣ್ಣ ರಜತ್ ಅವರಿಬ್ಬರೂ ಒಂದೇ ರೂಂ ಶೇರ್ ಮಾಡಿಕೊಂಡಿರುವವರು. ಅವನು ವಿಷಯತಿಳಿದು ಮನೆಗೂ ತಿಳಿಸಿದ. ಆಸ್ಪತ್ರೆ ಸೇರಿಸಿದ್ದ. ಇದರ ನಡುವೆ ಅಕ್ಷರಗಳಲ್ಲಿಯೂ ವ್ಯಕ್ತಪಡಿಸಲಾಗದ ನೋವು ಉಂಡವರು ಹಲವರಿದ್ದಾರೆ.

ಸಮಸ್ತ ಕುಟುಂಬದವರು ಪಾಂಡವರಂತಿದ್ದ ಅಣ್ಣ ತಮ್ಮಂದಿರು. ಹಿಂದೂ ಮುಂದು ಸುಳಿದು ಮಾತಾಡುತ್ತಿದ್ದ ಅತ್ತಿಗೆಯಂದಿರು. ತನ್ನದೇ ತಾಯಿಯಷ್ಟು ಸಮಾನ ಸ್ಥಾನದಲ್ಲಿರಿಸಿದ್ದ ಅವನ ಚಿಕ್ಕಮ್ಮ, ಅವನ ಗೆಳೆಯರು, ಶಿಕ್ಷಕರು, ಆಪ್ತರು, ಇವುಗಳನ್ನೆಲ್ಲ ವಿವರಿಸಲು ನನ್ನ ಪದಗಳು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ. ಕಣ್ಣು ಮಂಜಾಯ್ತು ಇನ್ನು ಬರೆಯಲು ಸಾಧ್ಯವಾಗುತ್ತಿಲ್ಲ.

ಸುಮಾ.ಕಂಚೀಪಾಲ್. 

Comments

  1. ನಿರ್ಲಿಪ್ತನಾಗಿ ಹೊಗಿ ಬರಲಿ..ಓಂ ಶಾಂತಿ🙏

    ReplyDelete
  2. ನಿನ್ನ ಬರಹಕ್ಕೆ ಇನ್ನೊಮ್ಮೆ ಕಂಗಳು ತೇವಗೊಂಡಿದ್ದು ನಿಜ..
    ಮತ್ತೆ ಹುಟ್ಟಿ ಬಾ ಸಹೋದರ.. ನಿನ್ನ ಅನುಪಸ್ಥಿತಿಯ ದುಃಖ ಭರಿಸುವ ಶಕ್ತಿ ದೇವರು ಎಲ್ಲರಿಗೂ ಕರುಣಿಸಲಿ🙏

    ReplyDelete
    Replies
    1. ಮತ್ತೆ ಹುಟ್ಟಬಾರದು ಮುಕ್ತಿ ದೊರೆಯಬೇಕು ಎಂಬುದು ಅವನ ಆಶಯ. ಕುಟುಂಬದವರಿಗೆ ಶಕ್ತಿಯೊಂದನ್ನ ನೀಡಲಿ ಆ ಭಗವಂತ ಇದ್ದರೆ.

      Delete
  3. ದುಃಖ, ನೋವು, ಸಂಕಟಗಳನ್ನ ಬರದಲ್ಲಿ ಹಿಡಿದಿಡುವುದು ಕಷ್ಟಸಾಧ್ಯ, ಆದರೆ ನಿನ್ನ ಬರಹ ನಡೆದ ಪ್ರತಿ ಸಂದರ್ಭವೂ ಕಣ್ಮುಂದೆ ಇರಿಸಿತು.

    ಆ ದೇವರು ದುಃಖ ಭರಿಸುವ ಶಕ್ತಿ ಕುಟುಂಬದವರಿಗೆ ನೀಡಲಿ.

    ReplyDelete
    Replies
    1. ದುಃಖ, ನೋವು, ಸಂಕಟಗಳನ್ನ ಬರಹದಲ್ಲಿ ಹಿಡಿದಿಡುವುದು ಕಷ್ಟಸಾಧ್ಯ, ಆದರೆ ನಿನ್ನ ಬರಹ ನಡೆದ ಪ್ರತಿ ಸಂದರ್ಭವೂ ಕಣ್ಮುಂದೆ ಇರಿಸಿತು.

      ಆ ದೇವರು ದುಃಖ ಭರಿಸುವ ಶಕ್ತಿ ಕುಟುಂಬದವರಿಗೆ ನೀಡಲಿ.

      Delete
  4. 🙏 ಪರಿಶುದ್ಧ ಅತ್ಮ ಪರಮಾತ್ಮನಲ್ಲಿ ಲೀನ...

    ReplyDelete
  5. ಪಾಪು ಸಾವನ್ನು mareyalaagadiddaru ದುಃಖ ವನ್ನು ಸಹಿಸುವ ಶಕ್ತಿ ಆ ದೇವರು ನಮ್ಮೆಲ್ಲರಿಗೂ ನೀಡಲಿ.ಅವನ ಆತ್ಮ ಪರಮಾತ್ಮನಲ್ಲಿ ಸೇರಲಿ

    ReplyDelete
  6. ಎನೆಂದು ಹೇಳಲೀ ಇಂದು.. ಮಾತೇ ತೋಚದಾಗಿದೆ... ಏನೆಂದು ಬರೆಯಲೀ ಅದೇಷ್ಟೋ ಬರವಣಿಗೆಯ ಬರೆದ ಕೈ ಇಂದು... ಗಡಗಡನೆ ನಡುಗುತ್ತಿದೆ.. ಈ ಸಾವು ನಿನಗೆ ತರವಲ್ಲ ... "ಅಕಾ !!!! ಎಂತದೇ ಪತ್ತೆನೇ ಇಲ್ಲೆ ನೀನು... ಹೈ ಸ್ಕೂಲ್ ಮುಗದ್ ಮೇಲೆ ನಾವ್ ಶಿಕ್ಕಿ ಆಗಿತ್ಲೆ ಅಲ್ದನೇ.... ಸುಮಾರ ದಿನ ಆಯೋತು ನೋಡು" ಹೇಳಿ ಎಲ್ಲೋ ಸಿಕ್ಕಿದಾಗ ಹೇಳಿದ ನೆನಪು... ಅದೇ ಕೊನೆ.. ಇನ್ನೆಂದೂ ನಾವು ಸಿಗಲೇ ಇಲ್ಲ... ಈಗ ಮಾತಾಡಲೂ ಸಿಗದಂತ ಊರಿಗೆ ಹೋಗಿಬಿಟ್ಟೆ ನೀನು.... ನೀ ಅಂತೂ ತುಂಬಾ ಆತ್ಮೀಯ.... ಯಾವಾಗಲೋ ಒಮ್ಮೆ ಮೆಸೆಜ್ ಮಾಡಿದರೂ ಮಾಡದಿದ್ದರೂ.... ಸಿಕ್ಕಿದಾಗ ನಮ್ಮದೂ ತುಂಬಾ ಮಾತು ಹರಟೆ.... ನನ್ನಂತವಳಿಗೆ ನಿನ್ನ ಸಾವು ಅಷ್ಟು ನೋವು ಕೊಟ್ಟೀತು ಎಂದರೆ... ಇನ್ನು ಅಪ್ಪ ಅಮ್ಮನ ಪರಿಸ್ಥಿತಿ.!!! ಈ ದುಃಖ ಬರಿಸುವ ಶಕ್ತಿ ನಿನ್ನ ಕುಟುಂಬಕ್ಕೆ ದೇವರು ಕೊಡಲಿ.!!! ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ... ನಮ್ಮ ಮನದಲ್ಲಿ ನೀನೆಂದೂ ಜೀವಂತ❤️
    ಇಂತಿ : ಸಹನಾ ಭಟ್ಟ (ಸನಾಮಿಕ)

    ReplyDelete
  7. ಜನನ ಮರಣದ ಸಂಕೋಲೆಯಲ್ಲಿ ಈ ಅನಿರೀಕ್ಷಿತ ಮರಣ ಎಂಬುದು ಒಂದು ಯಕ್ಷಪ್ರಶ್ನೆ ಯೇ ಸರಿ!!! ಮಕ್ಕಳಿಗಾಗಿ ಹಗಲಿರುಳು ದುಡಿದು ಕನಸಿನ ಗೌರವ ಕಟ್ಟಿ, ಇನ್ನೇನು ವಿಶ್ರಾಂತಿಯ ನಿಟ್ಟುಸಿರು ಬಿಡಬೇಕು ಎನ್ನುವಷ್ಟರಲ್ಲಿ.. ಎದೆಯೆತ್ತರಕ್ಕೆ ಬೆಳೆದ ಮಕ್ಕಳನ್ನು ಜವರಾಯ ಎಳೆದೊಯ್ದ ರೆ..!!? ಅಂಥಹ ಪಾಲಕರ ಮನೋಸ್ಥಿತಿಯನ್ನು ಊಹಿಸಲು ಅಸಾದ್ಯ!!. ಈಗಿನ ವಿಜ್ಞಾನ ಆರಿಗ್ಯವನ್ನು ವೃದ್ಧಿಸಬಹುದು ಆಯುಷ್ಯವನ್ನಲ್ಲ!!!. ಈ ಅಲ್ಪಾಯುಷಿ ಗಳ ಕಾಗುಣಿತದ ಲೆಕ್ಕಾಚಾರವನ್ನು ಪರಮಾತ್ಮನೇ ಬಲ್ಲ!!. # ಹೆಗಲಮೇಲೆ ಹೆಣವನ್ನು ಹೋರುವವನ ಎದೆಯಲ್ಲಿಯೂ ಸಹ ಆಸೆಯೆಂಬ ಬೀಜ ಬಿತ್ತಿ,.. ಮೋಹವೆಂಬ ಬೇಲಿ ಕಟ್ಟಿ..ಮನುಕೂಲವೆಂಬ ಬೆಳೆ ಯನ್ನು ಲೀಲಾಜಾಲವಾಗಿ ತೆಗೆಯುವ # ಅದೋ ಆ ಜಗನ್ನಾಥ ನಿಗೊಂದು ದೊಡ್ಡ ನಮಸ್ಕಾರ 🙏🙏🙏🙏

    ReplyDelete
  8. ಜನನ ಮರಣದ ಸಂಕೋಲೆಯಲ್ಲಿ ಈ ಅನಿರೀಕ್ಷಿತ ಮರಣ ಎಂಬುದು ಒಂದು ಯಕ್ಷಪ್ರಶ್ನೆ ಯೆ ಸರಿ!! ಮಕ್ಕಳಿಗಾಗಿ ಹಗಲಿರುಳು ದುಡಿದು ಕನಸಿನ ಗೋಪುರ ವ ಕಟ್ಟಿ..ಇನ್ನೇನು ವಿಶ್ರಾಂತಿ ಪಡೆಯಬೇಕು ಎನ್ನುವಷ್ಟರಲ್ಲಿ...ಎದೆಯೇತ್ತರಕ್ಕೆ ಬೆಳೆದ ಮಕ್ಕಳನ್ನು ಜವರಾಯ ಎಳೆದೊಯ್ದ ರೆ...!!? ಅಂಥಹ ಪಾಲಕರ ಮನೋಸ್ಥಿತಿ ಯನ್ನು ಊಹಿಸಲೂ ಅಸಾಧ್ಯ..!! ಈಗಿನ ವಿಜ್ಞಾನ ಆರೋಗ್ಯ ವೃದ್ಧಿ ಸಬಹುದು ಆಯುಷ್ಯ ವನ್ನಲ್ಲ!! ಈ.ಅಲ್ಪಾಯುಷಿ ಗಳ ಕಾಗುಣಿತದ ಲೆಕ್ಕಾಚಾರವನ್ನು ಪರಮಾತ್ಮನೇ ಬಲ್ಲ!! # ಹೆಗಲ ಮೇಲೆ ಹೆಣವನ್ನು ಹೋರುವವನ ಎದೆಯಲ್ಲಿಯುಸಹ...ಆಸೆಯೆಂಬ ಬೀಜ ಬಿತ್ತಿ ಮೋಹವೆಂಬ ಬೇಲಿ ಕಟ್ಟಿ.. ಮನುಕುಲವೆಂಬ ಬೆಳೆ ಯನ್ನು ಲೀಲಾಜಾಲವಾಗಿ ತೆಗೆಯುವ ಅದೋ ಆ ಜಗನ್ನಾ ಥ ನಿಗೊಂದು.ದೊಡ್ಡ ನಮಸ್ಕಾರ 🙏🙏🙏🙏

    ReplyDelete
  9. ಹೃದಯ ವಿದ್ರಾವಕ ಘಟನೆ. ಒಂದೊಂದು ಬಾರಿ ಸಮಯ ತುಂಬಾ ಕ್ರೂರಿ. ಜೊತೆಗಿಲ್ಲದ ಜೀವ ಎಂದಿಗಿಂತ ಜೀವಂತ ಎನ್ನುವ ಮಾತು ನೆನಪಿಗೆ ಬರುತ್ತದೆ. ಸ್ನೇಹಿತ ನ ಆತ್ಮಕ್ಕೆ ಶಾಂತಿ ಸಿಗಲಿ. ಭಗವಂತ ಕುಟುಂಬಕ್ಕೇ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

    ReplyDelete
  10. ತುಂಬಾ ಕಷ್ಟ ಆತು ಓದಲೆ.. ನಾನು ಅವ ಚಿಕ್ಕವರಿರೂವಾಗಲೂ ಆಡಿ ಬೆಳೆದವರು...
    ನಾನು ಅವನನ್ನು ನೋಡಲು ಶನಿವಾರ ಹೋಗುವವಳಿದ್ದೆ...ಆದರೆ ನನಗೆ ಅವನ ನೋಡುವ ಅದೃಷ್ಟ ಇಲ್ಲವೇನೋ ಆದರೆ ಅವನು ಎಲ್ಲಿ ಕಂಡಾಗಲೂ ಅಕ್ಕ ಎಂದು ಕರೆದು ಮಾತನಾಡಿ ಸುತ್ತ ಇದ್ದ ನೆನಪು ನೆನಪು ಹಾಗೇಯೆ ಉಳಿತು ನನ್ನಲ್ಲೆ ..ಅವನ ಇಲ್ಲದಿರುವಿಕೆ ಮನಸ್ಸು ನಂಬಲು ಇಂದು ತಯಾರಿಲ್ಲ.. ಎಲ್ಲೋ ಇರುವೆನೆಂಬುದು ಮನಕೆ... ಪ್ರಸಾದ ನೀನು ಯಾವಾಗಲೂ ನನ್ನ ನೆನಪಲ್ಲೆ ಇರುವೆ ನೀನಗೆ ಮುಂದಿನ ಜನ್ಮದಲ್ಲಾದರೂ ನೀನು ಅಂದುಕೊಂಡದ್ದೆಲ್ಲಾ ಸಾಧಿಸು ..ನೀನು ಯಾವಾಗಲೂ ಕರೆಯುತ್ತಿದ್ದೆ ಮನೆಗೆ ಬಾ ಎಂದೂ ಆದರೂ ನನಗೇಕೋ ಬರಲೂ ಸಾಧ್ಯವಾಗಲೇ ಇಲ್ಲ ..ಹಾಗೆಯೇ ಉಳಿಯಿತು ..

    ReplyDelete

Post a Comment

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...