Skip to main content

ನಾರಿ ಶಕ್ತಿ


ಆದರ್ಶವನಿತಾ ಸಮಾಜ ಎಂದರೆ‌ ಉತ್ತರ ಕನ್ನಡದ ಶಿರಸಿಯ ನಾರಿಯರಿಗೆ ಶಕ್ತಿ ತುಂಬುವ ಕೇಂದ್ರ‌. ಸಕ್ರಿಯವಾಗಿ ತಮ್ಮನ್ನು ಸದಾ ಚಲನಶೀಲವಾಗಿರಿಸಿಕೊಳ್ಳಲು ದಾರಿ ತೋರಿದ ಒಂದು ಮಾರ್ಗ. ಹಲವು ವರ್ಷಗಳ ಇತಿಹಾಸವುಳ್ಳ ಆದರ್ಶ ವನಿತಾ ಸಮಾಜದ ಕುರಿತು ಒಂದಿಷ್ಟು ಮಾಹಿತಿ ಕಲೆಹಾಕಿದಾಗ ಸಿಕ್ಕಿದ್ದು ಆಸಕ್ತಿದಾಯಕ‌ ಸಂಘಟನೆಯ ಕತೆ.



ಸಿದ್ದಾಪುರ ತಾಲೂಕು ಕೊರ್ಲಕಾಯಿ ಗ್ರಾಮದ ಮಹಿಳೆ ವಾಸಂತಿ ಎನ್ನುವವರು 1975 ರಲ್ಲೆ ಈ ಮಹಿಳಾ ಸಂಘಟನೆಯನ್ನು ಹುಟ್ಟುಹಾಕಲು ಶ್ರಮಿಸಿದವರು. ಶಿರಸಿಯ ಚಿಪಗಿಯ ಸಹ್ಯಾದ್ರಿ ಕಾಲನಿಯಲ್ಲಿ ತಮ್ಮದೇ ಆದ ಒಂದಿಷ್ಟು ಜಾಗಕ್ಕಾಗಿ ಹೋರಾಟಮಾಡಿ ಕಟ್ಟಡ ನಿರ್ಮಾಣಮಾಡಿದರು.

ಈ ಕಾರ್ಯಕ್ಕೆ ಇವರ ಕುಟುಂಬದ ಸಹಾಯ ಹೆಚ್ಚಿನದಾಗಿತ್ತು.
ಅವರು ತಮ್ಮ ಹದಿನೇಳನೇ ವರ್ಷಕ್ಕೆ ತವರು ಮನೆಬಿಟ್ಟು ಗಂಡನ ಮನೆ ಸೇರಿದ್ದರು. ಆರ್ಥಿಕವಾಗಿ ಒಂದು ರೂಪಾಯಿ ಕೂಡ ಇಲ್ಲದ ಪೂರ್ವ ಹಂತದಲ್ಲಿ ಮನೆ ಮನೆಗೆ ತಮ್ಮ ಎರಡುವರೆ ವರ್ಷದ ಮಗುವನ್ನು ಕಂಕುಳಲ್ಲಿ ಹೊತ್ತು ಬಿಸಿಲಲ್ಲಿ ಕಾಲ್ನಡಿಗೆಯಲ್ಲಿ ತಿರುಗಿ ಬೇಕಾಗುವ ಮೊತ್ತ ಸಂಗ್ರಹಿಸಿದರು.

ಆ ಕಾಲದಲ್ಲೇ ಇವರು ತಮ್ಮ ಮೆಟ್ರಿಕ್ ಶಿಕ್ಷಣವನ್ನು ಮುಗಿಸಿದವರು‌. "ಎಂದಿಗೂ ಸುಮ್ಮನೆ ಮನೆಯಲ್ಲಿ ಕೂರಬಾರದು ಸದಾ ಕಾರ್ಯೋನ್ಮುಖರಾಗಿರಬೇಕು ಎನ್ನುವ ಹಂಬಲ ನನ್ನನ್ನು  ಮನೆಯಲ್ಲಿ ಕೂರಲು ಬಿಡಲಿಲ್ಲ" ಎನ್ನುತ್ತಾರೆ ವಾಸಂತಿ ಅಮ್ಮ‌. ಊರೂರು ತಿರುಗುವುದು, ಕೈಗಾರಿಕೆ, ಕ್ರೋಷಾ, ಕಸೂತಿ, ಅಲಂಕಾರ ವಸ್ತು ತಯಾರಿಕೆ, ಪರಿಸರ ಹೊರಾಟ ಇಷ್ಟು ತಮ್ಮಿಷ್ಟದ ಹವ್ಯಾಸ ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಸಮಾಜ ನಿರ್ಮಾಣವಾದಾಗ ಮೊದ ಮೊದಲು ಸಭೆ ಸೇರಲು ಕೆಲವರು ಅಂಜುತ್ತಿದ್ದರು. ಸಾಮಾಜಿಕವಾಗಿ ಮಹಿಳೆಯರಿಗೆ ಅಷ್ಟು ಸ್ವಾತಂತ್ರ್ಯವಿಲ್ಲದ ಕಾಲದಲ್ಲಿ ಇವರು ಮಹಿಳಾ ಸಂಘಟನೆ ಮಾಡಿ ಅವರೊಟ್ಟಿಗೆ ಹಲವು ಪರಿಸರ ಚಳುವಳಿಯಲ್ಲಿ ಪಾಲ್ಗೊಂಡರು.‌ ಶರಾವತಿ ಅಣೆಕಟ್ಟು, ಗಣಿ, ಕೈಗಾ ಹೀಗೆ ಪರಿಸರದ ಕುರಿತು ಕಾಳಜಿ ತೋರಿದರು.

ನಂತರ ಇವರ ಪ್ರಯತ್ನ ನೋಡಿ ಸರ್ಕಾರ ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಯ ಉಳಿತಾಯ ಯೋಜನೆ ಮೂಲಕ ಸಹಾಯ ತೊರಕಿತು.‌ ವತ್ಸಲಾ ಪ್ರಾತಕ್ಕಾಲ, ನಾಗರಾಜ್ ಮತ್ತು ಲೀಲಮ್ಮಾ ಎಂಬ ತ್ರಿಮೂರ್ತಿಗಳೇ ಪೋಸ್ಟನ ಮೂಲಕ ಆದಾಯದ ದೃಢತೆತಂದು 12 ಗುಂಟೆ ಮೊದಲು ಮುಡಿಪಿಟ್ಟು ನಂತರ 5 ಗುಂಟೆ ಜಾಗ ದೊರೆತು ಅದರಲ್ಲಿ ಕಟ್ಟಡ ನಿರ್ಮಾಣ ಮಾಡಲಾಯಿತು.

ನಂತರ ಪ್ರತೀ ವರ್ಷ ಪ್ರಚಾರ ಮಾಡಿ ಮಹಿಳಯರ ಸದಸ್ಯತ್ವವನ್ನು ಮಾಡಿಸಿ ಐನೂರಕ್ಕೂ ಹೆಚ್ಚು ಜನರು ವನಿತಾ ಸಮಾಜವನ್ನು ಸೇರಿಕೊಂಡರು. ಈಗಲೂ ಈ ವನಿತಾ ಸಮಾಜ ಪ್ರಚಲಿತವಾಗಿದ್ದು ಎಷ್ಟೋ ಮಹಿಳೆಯರಿಗೆ ಸಹಾಯಕವಾಗಿದೆ. ಇಪ್ಪತ್ತೆಂಟು ವರ್ಷ ಸಂಸ್ಥಾಪಕ ಅಧ್ಯಕ್ಷರಾಗಿ ವಾಸಂತಿ ಅವರೆ ಕಾರ್ಯ‌ನಿರ್ವಹಿಸಿದರು. ನಂತರ  ಭಾಗೀರಥಿ, ಅಹಲ್ಯಾ, ಮತ್ತು ಸೀತಾ ಎನ್ನುವವರು ಅಧ್ಯಕ್ಷತೆವಹಿಸಿ ಮುಂದುವರೆಸಿಕೊಂಡು ಬಂದಿದ್ದಾರೆ.

ಹೊಲಿಗೆ, ಶೋರ್ಟ ಹ್ಯಾಂಡ್ ಟೈಪಿಂಗ್,  (1978 - 82 )  ಯೋಗ, ನೃತ್ಯ ಮತ್ತು ಕಟ್ಟಡದ ಬಾಡಿಗೆ ಹಣದಿಂದ ವೆಚ್ಚ ನಿರ್ವಹಣೆ ಮಾಡಿ 2000ದಲ್ಲಿ ಬೆಳ್ಳಿ ಭವನ ಎಂಬ ಹೆಸರಿನಲ್ಲಿ ಸಭಾಭವನ ನಿರ್ಮಿಸಿದರು. ಇಂದಿಗೂ ಇಲ್ಲಿ ನಾಟಕ, ಯಕ್ಷಗಾನ, ಭರತನಾಟ್ಯ, ಭಜನೆ ಮತ್ತು ಸಂಗೀತ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಅಡಿಗೆ, ರಂಗೋಲಿ ಸ್ಪರ್ಧೆ, ಸ್ಪೋಕನ್ ಇಂಗ್ಲಿಷ್ ತರಗತಿ, ಹೊಳೆ ಊಟ, ಬೆಳದಿಂಗಳೂಟ, ಪ್ರಾಣ ಚೈತನ್ಯ ಚಿಕಿತ್ಸೆ, ಸಂಕ್ರಾಂತಿಗೆ ಬಾಗೀನ, ವಾರ್ಷಿಕೋತ್ಸವ ‌ನಡೆಯುತ್ತದೆ‌. ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ. ಹಾಗೂ ಒರ್ವ ಬಡ ವಿದ್ಯಾರ್ಥಿನಿಗೆ ದತ್ತಿ ನಿಧಿ ನೀಡಲಾಗುತ್ತದೆ.

ನಿರಂತರವಾಗಿ ಈ ಎಲ್ಲಾ ಚಟುವಟಿಕೆ ನಡೆದುಕೊಂಡು ಬಂದಿರುವ ಗುಟ್ಟು ಎಂದರೆ‌ ಒಗ್ಗಟ್ಟು " ಒಗ್ಗಟ್ಟು ಇಲ್ಲದಿರೆ ಬಿಕ್ಕಟ್ಟು " ಮಾಡುವ ಕಾರ್ಯದಲ್ಲಿ ಆತ್ಮತೃಪ್ತಿ ಇದೆ ಎಂದಿದ್ದಾರೆ ವಾಸಂತಿ ಅಮ್ಮ.

ಸುಮಾ.ಕಂಚೀಪಾಲ್

Comments