ಯಾರಿಗೂ ಅರ್ಥವಾಗದ ನಾಕು ಸಾಲು ಗೀಚಿದ್ದೆ
ಅದೋ ಅವರಿವರಿಂದ ಸಾಲ ಕೇಳಿ ಪಡೆದ ಸಾಲು,
ಎಲ್ಲವನ್ನೂ ಪೋಣಿಸಿ ಅಲೆದಾಡುತ್ತಿದ್ದ ಅಕ್ಷರವನ್ನು
ಗುಂಪುಮಾಡಿ ಸುಮ್ಮನೆ ಸಾಲಾಗಿ ಕೂರಿಸಿದೆ.
ಬರೆಯುವುದಕ್ಕೂ ಭಯಂಕರ ಸಮಯ ಬೇಕಂತೆ
ಸಾಹಿತ್ಯದ ಅರಿವೇ ಇಲ್ಲದ ಹಿರಿಯನೊಬ್ಬ ಹೇಳಿದ
ಪ್ರೇಮದ ಇನ್ನೊಂದು ಪರಿಯೇ ಕವನವಂತೆ
ಹದಿಹರೆಯದ ಹುಡುಗನೊಬ್ಬ ಸಣ್ಣಗೆ ಉಸುರಿದ.
ಅಕ್ಷರವೆಲ್ಲಾ ಆಕಾಶದೆಡೆಗೆ ಮುಖ ಮಾಡಿ
ಕವಿಗಳಿಂದ ನಮ್ಮನ್ನು ಪಾರುಮಾಡು ಎಂದವಂತೆ
ಎಲ್ಲರಿಗೂ ದಾರಿ ತೋರುವ ದೇವ ದಾರಿತಪ್ಪಿ
ಗುಡಿಯ ಹುಡುಕ ಹೊರಟ ನನ್ನ ಬಳಿ ಕೇಳಿದ
ಬರೆದದ್ದೇ ಬರೆದದ್ದು ಹಾಳೆಯ ಮೇಲಿನ ಅಕ್ಷರವೇ ಮಾಯವಾಗಿದೆ.
ಅಕ್ಷರ ಮುಗಿಸಿಕೊಂಡು ಎದ್ದು ಹೋಯಿತೆ?!
ಬೇಸರದಿಂದ ಅತ್ತು ಪುಟಗಳಲ್ಲಿ ಮಾಸಿ ಹೋಯಿತೆ
ಸುಮಾ.ಕಂಚೀಪಾಲ್
Comments
Post a Comment