Skip to main content

ನಮ್‌ ಶಿವು ಮದ್ವೆ ಕಣ

ಶಿವು ಮದ್ವೆ ಎಂದು ದೋಸ್ತರೆಲ್ಲ ತಿಂಗಳುಗಳ ಕಾಲ ಹೇಳಿ ಹೇಳಿ ಅಂತು ಆ ದಿನ ಬಂದೇ ಬಿಡ್ತು. ಬೆಳಿಗ್ಗೆ ಎದ್ದು ತಿಂಡಿಯನ್ನೂ ಸಹ ತಿನ್ನದೆ ಸೀದಾ ಮದುವೆ ಮಂಟಪಕ್ಕೆ ನಾವೆಲ್ಲ ಹೋಗಿದ್ದೇವು. ಹಸಿದ ಹೊಟ್ಟೆಗೆ ಬಿಸಿ ಬಿಸಿ ಇಡ್ಲಿ, ಸಾಂಬಾರ್‌, ಪೊಂಗಲ್‌ ಮತ್ತು ಹಲ್ವಾ ತಿಂದು ಸಮಾಧಾನ ಆಯ್ತು. ಅಷ್ಟೆಲ್ಲ ಮುಗಿಸಿ ಬಂದ ಮೇಲೆ ನಾವೆಲ್ಲ ಕುಳಿತು ಮಾತನಾಡಿದೆವು. ಒಟ್ಟು ನಾಲ್ಕು ಜನರ ಒಂದು ಗಟ್ಟಿ ದೋಸ್ತರ ಬಳಗದಲ್ಲಿ ಈಗ ಇಬ್ಬರಿಗೆ ಮದುವೆ ಆಗಿದೆ. ಇನ್ನಿಬ್ಬರು ಬಾಕಿ ಇದ್ದಾರೆ. ಅವರ ಬಳಿ ನಾನು ಅವರ ಮದುವೆ ವಿಚಾರ, ಆ ಕಡೆ ಮದುವೆ ಸಂಪ್ರದಾಯ, ನಮ್ಮ ಕಡೆ ಹೇಗಿರುತ್ತದೆ ಎಂದೆಲ್ಲ ಮಾತನಾಡುತ್ತಿದ್ದೆ. ಅಷ್ಟರಲ್ಲಿ ಪ್ರಗತಿ (ಮದುಮಗಳು)ಯನ್ನು ಹಸೆ ಮಣೆಗೆ ಕರೆದುಕೊಂಡು ಬಂದರು. 

(ಎಲ್ರೂ ಸೈಡ್ ಬಿಡ್ಬೇಕು - ಯಾಕಂದ್ರೆ ಇದೊಂದ್ ಸ್ವಲ್ಪ ಸ್ಪೆಷಲ್ ಪೋಟೋ)

ನಾವೆಲ್ಲ ಅತ್ತ ಗಮನಹರಿಸಿದೆವು, ಹಾರ ಹಾಕುವಾಗ ಹಿಡಿದ ಅಂತರ್ಪಟಕ್ಕಿಂತ ಹೆಚ್ಚು ಎತ್ತರಕ್ಕೆ ಪ್ರಗತಿಯನ್ನು ಎತ್ತಿ ಹಿಡಿದರು. ಎಲ್ಲರೂ ಚಪ್ಪಾಳೆ ತಟ್ಟಿ ನಕ್ಕು ನಲಿಯುತ್ತಿದ್ದರೆ ನಾನು ಇತ್ತ ಯಾರಾದ್ರೂ ಹೋಗ್ರೋ ಶಿವಣ್ಣನನ್ನು ಎತ್ತಿ ಎಂದು ಕೂಗುತ್ತಿದ್ದೆ. ಅಷ್ಟೆಲ್ಲ ಆದ ನಂತರ ಹಾರ ಬದಲಿಸಿಕೊಂಡಾಯ್ತು. ಬಂದವರನ್ನೆಲ್ಲ ಮಾತಾಡಿಸುತ್ತ ಸಮಯ ಸಿಕ್ಕಾಗೆಲ್ಲ ಮದುಮಕ್ಕಳ ಫೋಟೋ ತೆಗೆದೆ. ಪರಿಚಯದ ಹಲವು ಮದುವೆಗೆ ಬಂದಿದ್ದ ಕಾರಣ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. 

ಶೆಕೆಗಾಲದ ಮದುವೆಯಾದರೂ ಅಷ್ಟು ಬೆವರಲಿಲ್ಲ ಎಂಬುದೆ ಎಲ್ಲರ ಬಾಯಲ್ಲಿ. ಬೆಂಗಳೂರಿನಲ್ಲಿದ್ದೀವಾ ಇಲ್ಲ ಊರಲ್ಲಿದ್ದೀವಾ ಎಂಬ ಪ್ರಶ್ನೆ ಬರುವಂತೆ ಅಚ್ಚುಕಟ್ಟಾಗಿ ಸಂಪ್ರದಾಯದ ಪ್ರಕಾರ ಸಾಂಗವಾಗಿ ಮದುವೆ ಮುಗಿಯಿತು. ಹುಡುಗ ತಾಳಿ ಕಟ್ಟೆಬಿಟ್ಟ ಕಣ್ರೋ " ಶಿವು ಬ್ರಹ್ಮಚರ್ಯದಿಂದ ಈಗ ದಾಂಪತ್ಯಕ್ಕೆ ಏನಂತೀಯಾ ಮಚಾ" ಎನ್ನುತ್ತ ಸ್ನೇಹಿತರು ನಿಂತಲ್ಲಿಂದಲೇ ನೋಡಿದರು. ನಂತರ ಅರುಂದತಿ ನಕ್ಷತ್ರ ತೋರಿಸಲೆಂದು ಹೊರಗಡೆ ಬಂದರು ಆಗ ಒಂದಿಷ್ಟು ಫೋಟೋ ಕ್ಲಿಕ್‌ ಮಾಡಿದೆ. ಅವರಿಬ್ಬರ ಕುಟುಂಬ, ಅವರ ಆತಿತ್ಯ, ಆತ್ಮೀಯತೆ ತುಂಬಾ ಹಿಡಿಸಿತು. 


ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಅವರು ಎಷ್ಟೇ ಕರೆದರೂ ಕಳಸಕ್ಕೆ ಹೋಗುವ ಭಾಗ್ಯ ನನಗೆ ಒದಗಲೇ ಇಲ್ಲ ಎಂಬ ಬೇಸರ ಮಾತ್ರ ನನ್ನಲ್ಲಿ ಉಳಿದುಕೊಂಡಿದೆ. ಯಾಕೆಂದರೆ ನಮ್ಮ ಮದುವೆಯಲ್ಲಿ ಮುಂಬೈ ಇಂದ ಬಂದು ಮದುವೆಯ ಮರುದಿನವೂ ಉಳಿದು ಓಕಳಿ ಹಾಗೂ ನೆಂಟರೂಟದ ಅಷ್ಟೂ ಫೋಟೋವನ್ನು ಕ್ಲಿಕ್‌ ಮಾಡಿ ಒಂದು ಮೆಮೊರಿ ಸೃಷ್ಟಿಸಿದ್ದ ಶಿವಣ್ಣ. 

(ಯಾವ್ದೊ ಮಗು ಹೂ ಹಾಳ್ಮಾಡ್ತಾ ಮದುವೆ ಮನೆ ಕಳೆ ಹೆಚ್ಚಿಸಿತು)

ನನಗೂ ಅವರ ಆ ದಿನಗಳಲ್ಲಿ ಅಲ್ಲಿ ನಾನಿರಬೇಕಿತ್ತು ಎಂದು ಆಸೆ. ಆದರೆ ಪರಿಸ್ಥಿತಿ ಅನುವು ಮಾಡಿಕೊಟ್ಟಿಲ್ಲ ಬಿಡಿ. ಆದ್ರೂ ಅವರೇನು ನಮಗೆ ದೂರದವರಲ್ಲ ಇನ್ನೊಮ್ಮೆ ಹೋದರಾಯಿತು ಎನ್ನುತ್ತ ಇನ್ನಿಬ್ಬರ ಬಳಿ ಬರ್ತೀನಿ. ಒಟ್ಟು ನಾಲ್ಕು ಜನರ ದೋಸ್ತರ ಗುಂಪಿನಲ್ಲಿ ಇಬ್ಬರಿಗೆ ಮದುವೆ ಆದಂತಾಯಿತು. ಇನ್ನಿಬ್ಬರು ಇನ್ನೆರಡು ವರ್ಷದಲ್ಲಿ ಮದುವೆಯಾಗಲೇ ಬೇಕು ಎಂದು ಈ ತಂಗಿ ಹಕ್ಕೊತ್ತಾಯ ಮಾಡಿದ್ದಾಳೆ. ಅವರು ಮನಸು ಮಾಡಬೇಕಷ್ಟೇ.

( ಎಲ್ರೂ ಹೀಗೆ ಪೋನಲ್ಲೆ)

( ಅಣ್ಣಂಗೆ ವಿಡಿಯೋ ಕಾಲ್ ಬಂದಿದೆ)

ನಾನಂತು ಈ ನಾಲ್ವರನ್ನು ನಿಲ್ಲಿಸಿ ಒಂದು ಫೋಟೋ ತೆಗೆಸಬೇಕು ಎಂದು ಹೆಣಗಾಡುತ್ತಿದ್ದೆ. ಆದರೆ ಒಬ್ಬೊಬ್ಬರು ಒಂದೊಂದು ಫೋನ್‌ ಕಾಲ್‌ನಲ್ಲಿ ಬ್ಯುಸಿ. ಅಂತು ಕೊನೆಗೆ ಹತ್ತಾರು ಸಲ ಹೇಳಿ ಅವರಿಗೆಲ್ಲ ಒತ್ತಾಯ ಮಾಡಿ ಫೋಟೋ ತೆಗೆದಿದ್ದಾಯ್ತು. ಅದರ ಜೊತೆ ಜೊತೆಗೆ ಪ್ರಗತಿಯೊಬ್ಬಳನ್ನು ನಮ್ಮ ಗುಂಪಿಗೆ ಅಧಿಕೃತವಾಗಿ ಸೇರಿಸಿಕೊಳ್ಳಲಾಗಿತು. ನಾಲ್ಕಿದ್ದವರು ಒಟ್ಟು ಎಂಟಾದರೆ ಸಂಪೂರ್ಣ.

( ನೆಕ್ಸ್ಟ ಮದು ಮಗಳು ನಿನೇ ಕಣೆ ಅಂತಾರಲ್ಲ ಅವ್ಳೆ ಇವ್ಳು ಕನ್ನಡಿ ಕಲಶ ಹಿಡಿದೋಳು)

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...