ಬೆಂಗಳೂರಿನಲ್ಲಿರುವ ನಮಗೆ ಊರಿನ ಸುದ್ದಿ ತಿಳಿಯಲು ಹೆಚ್ಚೇನು ಸಮಯ ಬೇಡ. ಆದರೂ ನನಗೆ ಈ ವಿಷಯ ತುಸು ತಡವಾಗೇ ಗೊತ್ತಾಗಿದ್ದು. ಅಮ್ಮ ಫೋನ್ ಮಾಡಿ ವಿಷಯ ಹೌದಾ? ಅಂತ ಅಂದ ತಕ್ಷಣ ಯಾವ ವಿಷಯ ಅಂತ ಗೊತ್ತಾಗಲಿಲ್ಲ. ನಂತರ ನಿಧಾನಕ್ಕೆ ಅರ್ಥವಾಯ್ತು. ಹೇಗಂದ್ರು ಮರುದಿನ ಶನಿವಾರ ಊರಿಗೆ ಹೊರಟೇ ಬಿಡೋಣ ಅಂದುಕೊಂಡರೆ ಅನಿವಾರ್ಯವಾಗಿ ಮತ್ತೆ ಮೂರು ದಿನಗಳ ನಂತರ ಬಸ್ ಬುಕ್ ಆಗಿತ್ತು. ಇದೆಲ್ಲ ಒಂದು ಕಡೆಯ ಯೋಚನೆ ಆದರೆ. ಸುಬ್ಬಜ್ಜ, ರಾಮಜ್ಜರ ವಿಡಿಯೋ ತುಣುಕೊಂದು ಮನಸಿಗೆ ನಾಟಿತು.
ಹಾಗೇ ಮೇಗಣ್ಮನೆ ಅಜ್ಜ (ಸುಬ್ಬಜ್ಜ) ನನ್ನ ಅಜ್ಜ ತೀರಿಕೊಂಡಾಗ ರಾಮಾ, ಏ ರಾಮಾ, ಎನ್ನುತ್ತಾ ಮೈಮುಟ್ಟಿ ಕಣ್ಣೀರು ಸುರಿಸಿದ್ದು ನೆನಪಾಗಿ ಹೋಯ್ತು. ಎಲ್ಲ ತಮ್ಮಂದಿರನ್ನು ಕಳೆದುಕೊಂಡು ಅಷ್ಟೊಂದು ಅಪಾರ ದುಃಖವನ್ನು ವರ್ಷದಿಂದ ವರ್ಷಕ್ಕೆ ನೋಡುತ್ತಲೇ ತನ್ನ ತಮ್ಮಂದಿರ ಅಳಿವನ್ನು ಕಣ್ಣಾರೆ ಕಂಡು ಮರುಗುತ್ತಲೇ ಬಂದವ ಮೇಗಣ್ಮನೆ ಅಜ್ಜ. ತಮ್ಮಂದಿರು ಹೋದಾಗಲೆಲ್ಲ ಮಂಕಾಗುತ್ತಾ ಬಂದಿದ್ದ.
ನಮ್ಮ ಮನೆ ಕಂಚೀಪಾಲಿನ ಹಿರಿಕೊಂಡಿಗಳೆಲ್ಲವೂ ಈಗ ಸುಬ್ಬಜ್ಜನ ಅಂತ್ಯದಿಂದ ಕಳಚಿಕೊಂಡಂತಾಯಿತು. ನನಗೆ ಒಟ್ಟು 4 ಜನ ಮನೆ ಅಜ್ಜಂದಿರು. ಒಂಭತ್ತು ಜನ ಅಜ್ಜನ ಮನೆ ಅಜ್ಜಂದಿರು. ಈಗ ಮನೆಯ ನಾಲ್ಕೂ ಅಜ್ಜಂದಿರೂ ಇಹದ ಋಣ ಮುಗಿಸಿಕೊಂಡು ಹೊರಟಿದ್ದಾರೆ. ಎಲ್ಲರಿಗೂ ಹಿರಿಯಣ್ಣನಾಗಿದ್ದ ಸುಬ್ಬಜ್ಜನೂ ನಿನ್ನೆ ಹೋಗಿಬಿಟ್ಟ. ಯಾವಾಗಲೂ ನನ್ನ ಅಜ್ಜ ರಾಮಜ್ಜ ಹಾಗೂ ಅವನ ಅಣ್ಣ ಮೇಗಣ್ಮನೆ ಅಜ್ಜ ಹೆಚ್ಚಾಗಿ ಒಟ್ಟಿಗಿರುತ್ತಿದ್ದರು. ತಮ್ಮಣ್ಣಜ್ಜನಂತು ತುಂಬಾ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡಿದ್ದಾನೆ. ಅವನು ಹೇಗಿದ್ದ ಎಂಬುದನ್ನೂ ಸಹ ನಾವು ನೋಡಿಲ್ಲ. ಯಾವಾಗಲೂ ಅಬ್ಬೆ ಒಂದು ಬ್ಲಾಕ್ ಎಂಡ್ ವೈಟ್ ಫೋಟೋ ತೋರಿಸಿದ ನೆನಪು ಆದರೂ ಅದು ಅಷ್ಟು ಸ್ಪಷ್ಟವಾಗಿಲ್ಲ. ಇನ್ನು ರಂಗಜ್ಜ ಎಲ್ಲರಿಗಿಂತ ಭಿನ್ನ ಯಾಕೆಂದರೆ ಅಜ್ಜಂದಿರ ಪೈಕಿ ಅವನೊಬ್ಬನೆ ನೌಕರಿ ಮಾಡಿದ್ದು.
ಮೇಗಣ್ಮನೆ ಅಜ್ಜ ಆಟದ ಚಿನ್ನ ಮಾಡುತ್ತಿದ್ದ (ಯಕ್ಷಗಾನ ಆಭರಣಗಳು) ಕಣ್ಣು ಸರಿಯಾಗಿ ಕಾಣಿಸುವ ಕೊನೆ ದಿನಗಳವರೆಗೂ ಅವನು ಆಟದ ಚಿನ್ನಕ್ಕೆ ಕನ್ನಡಿಗಳನ್ನು ಅಂಟಿಸಿ ಬ್ಯಾಗಡೆ ಹಚ್ಚುತ್ತಿದ್ದ. ಯಾಕೆಂದರೆ ನಾನು ಮೇಗಣ್ಮನೆಗೆ ಯಾವಾಗಲೂ ಹೆಚ್ಚಾಗಿ ಹೋಗಿದ್ದು ಸಂಜೆಯ ಹೊತ್ತಿಗೆ ಆಗ ನಾನೂ ಅವನೊಟ್ಟಿಗೆ ಕೂತು ಅದನ್ನೆಲ್ಲ ನೋಡಿದ್ದೆ. ರಜೆ ಇದ್ದರೆ, ಬೇಜಾರು ಬಂದರೆ, ಕೆಲಸ ಇದ್ದರೆ, ಅಮ್ಮ ಏನಾದರು ಕೊಟ್ಟು ಬರಲು ಹೇಳಿ, ತರಲು ಹೇಳಿದರೆ, ಹಬ್ಬವಿದ್ದರೆ, ಅಕ್ಕ ಬಂದರೆ ಹೀಗೆ ಮೇಗಣ್ಮನೆಗೆ ಹೋಗಲು ಸಾವಿರ ಕಾರಣ ಇರುತ್ತದೆ ಬಿಡಿ. ಹೋದಾಗೆಲ್ಲ ಅಜ್ಜ "ಅಕೋ" ಎಂದು ಮಾತಾಡಿಸಿ ಮೊಟ್ಟ ಮೊದಲು ಕೇಳುತ್ತಿದ್ದ ಪ್ರಶ್ನೆ "ಅಜ್ಜಂದು ಎಲೆ ಇದ್ದ ಖಾಲಿ ಆಯ್ದ?" ಎಂಬುದಾಗಿ. ಅಜ್ಜಂದಿರಿಬ್ಬರು ಬರಪೂರ ಕವಳ ಹಾಕುವವರು ಹಾಗಾಗಿ ಅವರು ಅದನ್ನೇ ವಿಚಾರಿಸುತ್ತಿದ್ದರು.
ಅದನ್ನು ಬಿಟ್ಟರೆ ಶಾಲೆ, ಕಾಲೇಜಿನ ವಿಚಾರ. ಇನ್ನೊಂದೇನೆಂದರೆ ಅಜ್ಜನಿಗೆ ಸದಾಕಾಲ ಓದುವ ಹವ್ಯಾಸವೂ ಇತ್ತೂ. ಕಣ್ಣು ಮಂಕಾದ ಮೇಲೆ ಪಾಪ ಜಗುಲಿಯ ತುದಿಗೆ ಕೂತು ಕೈಯ್ಯಲ್ಲೇ ಕವಳ ಪೇಳಿಯಲ್ಲಿ ಏನಿದೆ? ಏನಿಲ್ಲ ಎಂಬುದನ್ನು ಗ್ರಹಿಸುತ್ತ ಮನೆಗೆ ಯಾರಾದರೂ ಬಂದರೆ ಅವರ ಧ್ವನಿ ಕೇಳಿಯೇ ಮಾತಾಡಿಸುತ್ತಾ ಇರುತ್ತಿದ್ದ. ಅಜ್ಜ ಮೊಮ್ಮಕ್ಕಳು, ಮಿಮ್ಮಕ್ಕಳನ್ನೆಲ್ಲ ಕಂಡು ಹೋಗಿದ್ದಾಯ್ತು. ಆದರೆ ಕೊನೆಗೊಂದು ಸಲ ಮುಖ ನೋಡಿದ್ದರೆ ನನಗೆ ಇನ್ನಷ್ಟು ಸಮಾಧಾನ ಇರುತ್ತಿತ್ತು.
ಸುಮಾ. ಕಂಚೀಪಾಲ್
Comments
Post a Comment