Skip to main content

ಭಾಸ್ಕರ ಪರ್ವ

ನಾನು ಹಲವಾರು ಪೋಟೋಗಳನ್ನು ಈಗಾಗಲೇ ಪೋಸ್ಟ್ ಮಾಡಿದ್ದೇನೆ. ಭಾಸ್ಕರ ಪರ್ವ ಕಾರ್ಯಕ್ರಮದ ಬಗ್ಗೆ ನಿಮಗೆ ಈಗಾಗಲೇ ಎಲ್ಲ ತಿಳಿದಿದೆ. ಪೋಸ್ಟ್ ಮಾಡಿ ಮುಗಿಸಲಾಗದಷ್ಟು ಪಟ ಮತ್ತು ನೆನಪುಗಳು ನನ್ನೊಳಗಡೆ ತುಂಬಿಕೊಂಡಿದೆ. ನಾನು ಉಜಿರೆಯಲ್ಲಿ ಪತ್ರಿಕೋದ್ಯಮ ಕಲಿಯುವಾಗ ಧೀಮಹಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದೆ. ಅಲ್ಲಿಗೆ ಮತ್ತೆ ಹೋಗಿ ಉಳಿಯುತ್ತೇನೆ ಎಂಬ ಅಂದಾಜು ಸಹ ನಾನು ಮಾಡಿರಲಿಲ್ಲ. ಆದರೆ ಮತ್ತದೆ ಹಳೆ ನೆನಪು ಮರುಕಳಿಸಿತು, ಅಷ್ಟೇ ಅಲ್ಲ ಎಲ್ಲ ಗೆಳತಿಯರು ಜೂನಿಯರ್‌ಗಳು ಸಹ ಅಲ್ಲೇ ಸಿಕ್ಕರು. 

ಕಾಲೇಜು ಕ್ಯಾಂಟಿನ್‌ನಲ್ಲಿ ತಿಂಡಿ‌ ಸವಿದಾಯಿತು. ವಿಶೇಷ ಎಂದರೆ ನನ್ನ ಗುರು (ಪತಿ) ಕೂಡ ಇದೇ ಕಾಲೇಜಿನಲ್ಲಿ ಕಲಿತದ್ದು, ಆದರೆ ನಾವು ಒಟ್ಟಿಗೆ ಕಲಿತವರಲ್ಲ. ನಾನು ಸೇರಿದ ವರ್ಷ ಅವನಿಗೆ ಬೀಳ್ಕೊಡುಗೆ ಆಗಿತ್ತು. ಇದು ನಮ್ಮ ಸರ್ ಬೀಳ್ಕೊಡುಗೆ ಆದ ಕಾರಣ ನಾವಿಬ್ಬರು ಹಳೆ ವಿದ್ಯಾರ್ಥಿಗಳಾಗಿ ಹೋಗಿದ್ದೆವು. ಜೊತೆಗೆ ಅವನ ದೋಸ್ತರು ಕೂಡ ಜೊತೆಯಾದರು.‌ ಎಷ್ಟೋ ದಿನದಿಂದ ಕೂಡಿಟ್ಟ ಮಾತೆಲ್ಲ ಒಟಗುಟ್ಟಿ ಆಯಿತು.

ಆದರೆ ಎಷ್ಟು ಮಾತಾಡಿದರು ಮುಗಿಯದ ಒಂದಷ್ಟು ಮಾತುಗಳು ಇನ್ನೂ ಉಳಿದಿದೆ. ನಾವು ಅಂತಷ್ಟೆ ಅಲ್ಲ ಎಲ್ಲರಿಗೂ ಹೀಗೆ ಆಗಿದೆ. ಹಳೆ ಸ್ನೇಹಿತರ ಹೊಸ ಬದುಕಿನ ತಿರುವುಗಳನ್ನೆಲ್ಲ ನೋಡಿ, ಕೇಳಿದ್ದಾಯಿತು.

ಎಷ್ಟು ಜನ ಸೇರಿದ್ದರು ನೋಡಿ, ಆ ಖುಷಿಯೇ ಬೇರೆ ಇತ್ತು.
ಸಾಕಷ್ಟು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಒಟ್ಟಿಗೆ ಸೇರಿದ್ದರು. 

ಒಂದೊಳ್ಳೆ ಹಾಡು ಡೆಡಿಕೇಟ್ ಮಾಡಿದ್ದೂ ಆಯಿತು. ಈಗ ನೆನಸಿಕೊಂಡರೆಎಲ್ಲ ಕನಸಿನಂತೆ ಅನಿಸಿಬಿಡುತ್ತದೆ.

ಇದು ನಮ್ಮ ಬ್ಯಾಚ್‌ನ ಪೋಟೋ ಜೊತೆಯಲ್ಲಿ ಭಾಸ್ಕರ ಸರ್.
 
ಎಲ್ಲರೂ ತೋರಿದ ಪ್ರೀತಿಗವರು ಭಾವುಕರಾಗಿದ್ದರು. 

ವಿಲಾಸ್ ನಾಯ್ಕ್ ಅವರು ಬಿಡಿಸಿದ ಚಂದದ ಚಿತ್ತಾರ ನೋಡಿ. 

ಈ ಬಾರಿ ಕಾಲುಂಗುರದ ಜೊತೆ ಧೀಮಹಿಗೆ ಬಂದಿದ್ದೇ ಬೇರೆ ರೀತಿ ಖುಷಿ. ನಾನು ನಿಜಕ್ಕೂ ಇಷ್ಟು ಬೇಗ ಮದುವೆ ಆಗುತ್ತದೆ ಎಂದುಕೊಂಡಿರಲಿಲ್ಲ. 

ಇನ್ನೊಂದು ಚಿಕ್ಕ ಖುಷಿ ಏನ್‌ಗೊತ್ತಾ ಅಂದೊಂದು ದಿನ ಕಾರ್ಯಕ್ರಮಕ್ಕೆ ಹೆಸರಿಡಲು ಚರ್ಚೆ ನಡಿತಿತ್ತು, ಎಲ್ಲರೂ ಒಂದೊಂದು ಹೆಸರು ಸೂಚಿಸಿದರು. ಆಗ ನಾನು ಹೇಳಿದ ಹೆಸರು ಪೋಲ್ ಮೂಲಕ ಆಯ್ಕೆ ಆಗಿತ್ತು. ಇದು ಹೇಳಿಕೊಳ್ಳುವಂತದಲ್ಲದಿದ್ದರು ಇದು ನನಗೆ ತುಂಬಾ ಖುಷಿಕೊಟ್ಟ ವಿಚಾರ ಹಾಗಾಗಿ ಬ್ಲಾಗ್‌ನಲ್ಲಾದರೂ ಇರಲಿ ಎಂದು ಬರೆದಿಟ್ಟೆ. 

ಅಭಿನಂದನ ಗ್ರಂಥಕ್ಕೆ ನಾ ಬರೆದ ಲೇಖನ
ಉತ್ತರ ಹಾಗೂ ದಕ್ಷಿಣದ ಸೇತುವೆ

ಉತ್ತರ ಕನ್ನಡದ ಶಿರಸಿ ಕಾಲೇಜಿನಲ್ಲಿ ಕಲಿತ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಕ್ಷಿಣ ಕನ್ನಡದ ಉಜಿರೆಯಲ್ಲಿ ಪತ್ರಿಕೋದ್ಯಮ ಕಲಿತಿದ್ದಾರೆ. ಕಲಿಕೆಗೆಂದೇ ಹಲವಾರು ಮೈಲಿಯಿಂದ ತಂದೆ, ತಾಯಿ ತಮ್ಮೂರನ್ನು ತೊರೆದು ಬರುವವರಿಗೆ ಇರುವ ಒಂದೇ ಒಂದು ಭರವಸೆ ಎಂದರೆ ಅದು ಭಾಸ್ಕರ್ ಸರ್. ಅದು ಕೇವಲ ಭೌಗೋಳಿಕ ಪಯಣವಲ್ಲ ಅದೊಂದು ಕನಸುಗಳ ಪಯಣ. ಈ ಪಯಣಕ್ಕೆ ಭರವಸೆಯ ಸೇತುವೆಯಾಗಿ ನಿಂತವರು ಭಾಸ್ಕರ್ ಸರ್. 

ನಾನು ಉಜಿರೆಗೆ ಸ್ನಾತಕೋತ್ತರ ಪದವಿಗೆ (Master Degree) ಬಂದಾಗ, ಅವರು ಬೋಧಿಸುತ್ತಿದ್ದುದು ಪದವಿ ವಿದ್ಯಾರ್ಥಿಗಳಿಗೆ ಮಾತ್ರ. ಹಾಗಾಗಿ, ಅವರ ತರಗತಿಯಲ್ಲಿ ಕುಳಿತು ಪುಸ್ತಕದ ಪುಟಗಳನ್ನು ತಿರುವಿ ಹಾಕುವ ಅವಕಾಶ ನನಗೆ ಸಿಗಲೇ ಇಲ್ಲ. ಆದರೆ ಸದಾ ರುಚಿಸುವ ಅವರ ಬದುಕಿನ ಪಾಠಗಳನ್ನು ಕೇಳಲು ಪಠ್ಯಪುಸ್ತಕದ ಹಂಗಿರಲಿಲ್ಲ. ಅವರು ನಮ್ಮ ವಿಭಾಗಕ್ಕೆ ಬಂದು ಮಾತನಾಡುತ್ತಿದ್ದುದು ಕೆಲವೇ ದಿನಗಳಾದರೂ, ಆ ಮಾತುಗಳು ವರ್ಷವಿಡೀ ಸ್ಫೂರ್ತಿ ನೀಡುವ ಶಕ್ತಿಯನ್ನು ಹೊಂದಿತ್ತು.

ಪುಟಿಯುವ ಹಂಬಲಕ್ಕೆ ಸ್ಫೂರ್ತಿ ಅವರು
ಸರ್ ಬಂದು ನಿಂತರೆ ಸಾಕು, ಅಲ್ಲಿ ಬರೀ ಸಿದ್ಧಾಂತಗಳಿರುತ್ತಿರಲಿಲ್ಲ. ಬದಲಾಗಿ, ನಮ್ಮದೇ ಮಣ್ಣಿನ ವಿದ್ಯಾರ್ಥಿಗಳು ಶೂನ್ಯದಿಂದ ಹೇಗೆ ಸಾಧನೆ ಮಾಡಿದರು, ಇಲ್ಲಿನ ಶಿಸ್ತಿಗೆ ಒಗ್ಗಿಕೊಂಡು ಹೇಗೆ ಬಾನೆತ್ತರಕ್ಕೆ ಬೆಳೆದರು ಎಂಬ ನಿದರ್ಶನಗಳು ಅವರ ಮಾತುಗಳಲ್ಲಿ ತಿಳಿಯುತ್ತಿತ್ತು.
 
ಯಾರದೋ ಬಗ್ಗೆ ಹೇಳುತ್ತಾ "ಅವನು ನಿಮ್ಮಂತೆಯೇ ಬಂದವನು, ಇಂದು ಉತ್ತಮ ಹುದ್ದೆಯಲ್ಲಿದ್ದಾನೆ" ಎಂದು ಅವರು ಒಬ್ಬ ವಿದ್ಯಾರ್ಥಿಯ ಸಾಧನೆಯನ್ನು ವಿವರಿಸುವಾಗ, ನಮ್ಮೊಳಗೂ ಏನೋ ಒಂದು ಸಂಚಲನ.

ಸೋತು ಕುಳಿತಿದ್ದ ಮನಸ್ಸುಗಳಿಗೆ ಆ ಮಾತುಗಳು ಚಾಟಿಯಂತೆ ಬೀಸುತ್ತಿದ್ದವು. ನಾವೂ ಕೂಡ ಹೀಗೆಯೇ ಬೆಳೆಯಬೇಕು, ಪುಟಿಯಬೇಕು ಎಂಬ ಹಠ ಹುಟ್ಟುತ್ತಿದ್ದುದೇ ಅವರ ಆ ಸಾಂದರ್ಭಿಕ ಮಾತುಗಳಿಂದ.

ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವವರಲ್ಲ‌.  ತಲೆಮಾರುಗಳಿಗೆ ದಾರಿದೀಪವಾದವರು ಭಾಸ್ಕರ್ ಸರ್. ನಮಗೆ ಕಲಿಸಿದ್ದು ಪರೀಕ್ಷೆಯಲ್ಲಿ ಅಂಕ ಪಡೆಯುವುದನ್ನಲ್ಲ, ಬದಲಾಗಿ ಬದುಕಿನ ಪರೀಕ್ಷೆಯಲ್ಲಿ ಎದೆಗುಂದದೆ ನಿಲ್ಲುವುದನ್ನು.

ಇಂದು ನಾವು ಎಲ್ಲೇ ಇರಲಿ, ಹೇಗೆ ಇರಲಿ, ನಮ್ಮ ಯಶಸ್ಸಿನ ಸಣ್ಣ ಎಳೆಯಲ್ಲಿ ಭಾಸ್ಕರ್ ಸರ್ ಅವರು ಬಿತ್ತಿದ ಆ ಪುಟಿಯುವ ಹಂಬಲ ಜೀವಂತವಾಗಿದೆ. ಅಕ್ಷರ ಕಲಿಸಿದವರಿಗಿಂತ ಅರಿವು ಮೂಡಿಸಿದ ಗುರುಗಳೇ ಶ್ರೇಷ್ಠ ಎಂಬ ಮಾತಿಗೆ ಅವರು ಸಾಕ್ಷಿಯಾಗಿದ್ದಾರೆ.

ಸುಮಾ ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...