ರಾತ್ರೊ ರಾತ್ರಿ ಬ್ಲಾಗ್ ಬರೆಯುವ ಮನಸಾಯಿತು ಕಾರಣ ಎಲ್ಲರ ಸ್ಟೇಟಸ್. ಎಷ್ಟೊಂದು ಜನ ತಮ್ಮ ಆಸೆ, ಕನಸುಗಳನ್ನು ಬರೆದುಕೊಂಡಿದ್ರು ತಮ್ಮ ನೋವನ್ನು ತೋಡಿಕೊಂಡಿದ್ರು. ಎಂದಿಗೂ ಒಂದು ದಿನವೂ ಸ್ಟೇಟಸ್ ಹಾಕದವರೂ ಸಹ ತಕ್ಷಣ ಒಂದು ಪೋಸ್ಟ್ ಮಾಡಿದ್ರು. ಇನ್ನು ಹೊಸ ಜೋಡಿಗಳಂತು ತಮ್ಮ ಪೋಟೋ ಮೊಗೆ ಮೊಗೆದು ಹಂಚಿಕೊಂಡಿದ್ರು.
ಇನ್ನೊಂದಷ್ಟು ಜನರದ್ದು ಬರೀ Sad ಸ್ಟೇಟಸ್. ಈ ವರ್ಷ ನಾನು ಇವರ ಸಾಲಿನಲ್ಲೇ ನಿಲ್ತೀನಿ ಬಹುಶಃ. ಲೈಪು ಎಲ್ಲ ನಾನಂದುಕೊಂಡ ಹಾಕೆ ಒಂದು ಹಂಪ್ ಕೂಡ ಬರ್ದಾಗೆ ಸಾಗ್ತಾ ಇತ್ತು. 2024ರ ವರೆಗೂ ಎಲ್ಲ ಅರಾಮಾಗೇ ಇತ್ತು. ಅಂದುಕೊಂಡಿದ್ದೆಲ್ಲ ಆಗ್ತಾ ಇತ್ತು ಅಂದ್ರೂ ತಪ್ಪೇನು ಇಲ್ಲ. ನಾನು ಆಸೆ ಪಟ್ಟಂತೆ ಮಾಸ್ಟರ್ ಡಿಗ್ರಿ, ಆಮೇಲೆ ನನ್ನಿಷ್ಟದ ಕೆಲಸ. ನಾನು ಇಷ್ಟ ಪಟ್ಟ ಹುಡುಗ, ಮದುವೆ, ಟ್ರಿಪ್, ಪ್ರಮೋಷನ್, ಹೈಕ್ ಹೀಗೆ ಸಾಕಷ್ಟು.
ಆದರೆ 2025 ಬರೋಬ್ಬರಿ ಪೆಟ್ಟು ಕೊಟ್ಟಿದೆ. ಇಷ್ಟು ದಿನ ಕಷ್ಟ ಬಂದ್ರೆ ಹೇಗಿರುತ್ತೆ ಅಂತ ಗೊತ್ತಿಲ್ಲದ ನನಗೆ ಸಾಲು ಸಾಲಾಗಿ ಕಷ್ಟಗಳೇ ಬಂತು ಹಾಗಂತ ತಲೆ ಹೋಗುವಂತ ಕಷ್ಟನೂ ಅಲ್ಲ. ತಲೆ ಹಾಳು ಮಾಡಿದ ಕಷ್ಟ. ಪ್ರಪ್ರಥಮ ಬಾರಿಗೆ ಲೈಫ್‌ನಲ್ಲಿ ಬ್ರೇಕ್ ಬಿತ್ತು. ನಾನು ಕೆಲಸ ಕಳ್ಕೊಂಡೆ.
ಕಾಲೇಜ್‌ನಲ್ಲಿ ಎಕ್ಸಾಂ ಬರಿಯೋಕು ಮುಂಚೆನೆ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದ ನನಗೆ ಕೆಲಸ ಹುಡುಕೋದು, ಕೆಲಸ ಇಲ್ಲದೆ ಕಳಿಯೋದು ಎಷ್ಟು ಡಿಫಿಕಲ್ಟ್ ಅಂತ ನಿಜಕ್ಕೂ ಗೊತ್ತಿರಲಿಲ್ಲ. ಫ್ರೆಂಡ್ಸ್ ಹೇಳುವಾಗ ಅದರ ಬಗ್ಗೆ ಅರ್ಥ ಆದ್ರು ಅನುಭವಕ್ಕೆ ಬಂದಿರ್ಲಿಲ್ಲ.
ನನ್ನ ಎಡಗೈ ಸ್ವಾಧೀನವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗ್ತಿನಿ ಅನಿಸಿಬಿಟ್ಟಿತ್ತು. ಮೆಂಟಲಿ ತುಂಬಾ ಟಾರ್ಚರ್ ಅನುಭವಿಸಿಬಿಟ್ಟೆ. ಅರಾಮಾಗಿರು ಎಂದಾಗಲೆಲ್ಲ ಇನ್ನಷ್ಟು ತಲೆ ಹಾಳಾಗ್ತಿತ್ತು. ನನ್ನ ಜೊತೆ ಸುಮಾರು 20 ಜನ ಕೆಲಸ ಕಳೆದುಕೊಂಡಿದ್ರು. ಕಾರಣಾಂತರದಿಂದ ಎಲ್ಲರ ಲೇ ಆಪ್ ಮಾಡಲಾಗಿತ್ತು. ನಂತರ ಎರಡು ತಿಂಗಳಲ್ಲಿ ಬೇರೊಂದು ಕೆಲಸಕ್ಕೆ ಸೇರಿದ್ದೂ ಆಯ್ತು. ಆದ್ರೆ ಇದರ ನಡುವೆ ಅನುಭವಿಸಿದ್ದು ಬಹಳ. ಸಾಮಾಜಿಕ ಒತ್ತಡ ಅಂದ್ರೇನು ಅನ್ನೋದು ಅರ್ಥ ಆಯ್ತು. ತುಂಬಾ ದಿನ ಒಂಟಿತನ ಕೂಡ ಕಾಡಿತು. ನನಗೆ ಈ ವರ್ಷ ಯಾಕೋ ಜವಾಬ್ದಾರಿ ಹೋರುವ ಗಂಡುಮಕ್ಕಳ ಬಗ್ಗೆ ಬಹಳ ಗೌರವ ಬಂದಿದೆ.
ಮನೆಯಲ್ಲಿರುವು, ಬೇರೆಯವರ ಮಾತನ್ನು ಚಾಚು ತಪ್ಪದೆ ಕೇಳುವುದು, ಇನ್ನೊಬ್ಬರ ಇಷ್ಟದಂತೆ ನಡೆದುಕೊಳ್ಳುವುದು. ಇನ್ನೊಬ್ಬರು ನಮ್ಮ ದೃಷ್ಟಿಕೋನವೇ ಸರಿ ಇಲ್ಲ ಎಂದು ಹೀಗಳೆಯುವುದು. ನೀನು ಮಾಡಿದ್ದು ಏನೂ ಇಲ್ಲ ಎಂಬ ಕೀಳರಿಮೆ ಮೂಡಿಸುವುದು ಈ ಮಾತುಗಳು ಎಷ್ಟು ಘಾಸಿಮಾಡುವ ವಿಷಯ ಎಂದು ಅರ್ಥ ಆಯ್ತು. ಕೆಲಕ್ಕಾಗಿ ಹತ್ತಾರು ಸಂದರ್ಶನ ನೀಡಿದ್ದೂ ಆಯ್ತು ಒಂದೊಂದು ಕಡೆ ಒಂದೊಂದು ಅನುಭವ. ನಾನೇ ಕೆಲಸ ರಿಜೆಕ್ಟ್ ಮಾಡಿದ್ದೂ ಇದೆ. ಕೆಲಸ ಕೊಡುವವರು ನನ್ನನ್ನು ರಿಜೆಕ್ಟ್ ಮಾಡಿದ್ದೂ ಇದೆ. ನಾನು ಇದುವರೆಗೂ ಈ ರೀತಿ ರಿಜೆಕ್ಷನ್‌ಗಳನ್ನ ಖಂಡಿರಲಿಲ್ಲ.
2025 ರೋಸಿ ಹೋಗಿತ್ತು. ಈಗ 2025 ಮುಗಿದಿರಬಹುದು ದಿನಾಂಕ ಬದಲಾಗಬಹುದು ಆದರೆ ಪರಿಸ್ಥಿತಿ ಏನಾಗುತ್ತದೆ ಎಂದು ಖಂಡಿತ ತಿಳಿದಿಲ್ಲ. ಆದರೆ ಇಷ್ಟೆಲ್ಲ ರಿಜೆಕ್ಷನ್ ನಂತರವೂ ಸ್ಥಿರವಾಗಿ ನಿಲ್ಲಲು ಸಹಕರಿಸಿದವರಿಗೆ, ಸದಾ ನನ್ನನ್ನು ಖುಷಿಯಿಂದಿಡಲು ಪ್ರಯತ್ನಿಸಿದವರಿಗೆ ಧನ್ಯವಾದ.
Comments
Post a Comment