ಅಕ್ಕೋರಾಗುವುದು ತುಂಬಾ ಕಷ್ಟ ಇದೆ. ನಾನು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆಗೆ ನನ್ನ ಚಿಕ್ಕಮ್ಮನ ಮಗಳನ್ನು ಕರೆದುಕೊಂಡು ಹೋಗಿದ್ದೆ. ಎಲ್ಲಾ ಮಕ್ಕಳಿಗೂ ರಜ. ಅರವತ್ತಕ್ಕೂ ಹೆಚ್ಚು ಮಕ್ಕಳು ಅಲ್ಲಿ ಹಾಜರಿದ್ದರು. ಒಂದೊಂದು ತರಗತಿಯವರನ್ನು ಒಂದೊಂದು ಕಡೆ ಕೂರಿಸಿದ್ದರು. ಅವರ ಗಲಾಟೆಯನ್ನು ಕೇಳಲಾಗದೆ ಸಭಾ ಭವನವೇ ಅಳುತ್ತಿತ್ತು. ಕೆಳಗಡೆ ದೇವಸ್ಥಾನ. ಆ ದೇವರಿಗೂ ಅನಿಸಿರಬಹುದು ಅಬ್ಬಾ! ಈ ಮಕ್ಕಳು ಎಷ್ಟು ಗಲಾಟೆ ಮಾಡ್ತಾರೆ ಅಂತ. ಮದುವೆ ಮನೆಯಲ್ಲಾದರೂ ಇನ್ನಷ್ಟು ಶಾಂತ ವಾತಾವರಣ ಇರುತ್ತದೆ.
ಆದರೆ, ಇಲ್ಲಿ ಮಾತ್ರ ಕೋಲಾಹಲ. ಕಾರ್ಯಕ್ರಮ ಆಯೋಜನೆ ಮಾಡುವವರು ಮುಂಜಾಗ್ರತಾ ಕ್ರಮವಾಗಿ ಮಕ್ಕಳನ್ನು ಹೇಗೆ ಕೂರಿಸಬೇಕು? ಎಲ್ಲಿ ಕೂರಿಸಬೇಕು? ಅವರ ವಯೋಮಾನದ ಮಿತಿಯನ್ನು ಎಷ್ಟರವರೆಗೆ ನಿಗದಿಪಡಿಸಬೇಕು ಇದ್ಯಾವುದನ್ನೂ ಸರಿಯಾಗಿ ನಿಗದಿ ಮಾಡಿಕೊಂಡಿರಲಿಲ್ಲ. ಆ ಕಾರಣಕ್ಕಾಗಿ ಇನ್ನಷ್ಟು ಗಲಿಬಿಲಿಯಾಯಿತು. ಜಡ್ಜ್ ಬಂದು ಇನ್ನು ನಾನು ತೀರ್ಪು ನೀಡಬಹುದಾ ಎಂದರು. ಮೂರು ಗಂಟೆಗೆ ಮಕ್ಕಳು ಚಿತ್ರ ಬಿಡಿಸಲಾರಂಭಿಸಿದ್ದಾರೆ ಎಂಬ ಕಲ್ಪನೆ ಅವರದು. ನಾಕು ಗಂಟೆಯಾದರೂ ಇನ್ನೂ ಮಕ್ಕಳ ಕೈಗೆ ಬಣ್ಣ ಅಂಟಿರಲಿಲ್ಲ. ಇನ್ನು ಅವರ ಜೊತೆಗೂಡಿ ಬಂದ ಪಾಲಕರದ್ದು ಇನ್ನೊಂದು ತರ. ರಜಾ ದಿನಗಳಲ್ಲೇ ಕೆಲಸ ಮಾಡಿಕೊಳ್ಳಬೇಕು ಎಂದುಕೊಂಡ ಅದೆಷ್ಟೋ ಜನರಿಗೆ ನಿಗದಿತ ಸಮಯ ಜಾರುತ್ತಿರುವುದು ಇನ್ನಷ್ಟು ತಲೆಕೆಡಿಸಿತು.
ಮನೆಯಿಂದ ಹೆಂಡತಿಯ ಪೋನು ಬರಲಾರಂಬಿಸಿದರೆ, ಇನ್ನು ಕೆಲವರಿಗೆ ಸಂಜೆಯ ಅಡುಗೆ ನೆನಪಾಗುತ್ತಿರಬಹುದು. ಇನ್ನು ಹೊರಗಡೆ ಜೋರು ಮಳೆ. ಕೆಳಗಡೆ ದೇವಸ್ಥಾನದ ಬಟ್ಟರ ಹೆಂಡತಿ ಮಿಕ್ಸಿ ಕೂಗಿಸುತ್ತಿದ್ದರು. ಅಯ್ಯೊ ಒಂದು ಮನುಷ್ಯ ಎಷ್ಟು ಅಂತ ತಡೆದುಕೊಳ್ಳುವುದು ಎನಿಸತೊಡಗಿತು. ಆ ಮಕ್ಕಳನ್ನು ನೋಡಿ ನನ್ನ ಬಾಲ್ಯವೂ ನೆನಪಾಯಿತು. ಇನ್ನು ಪಾಲಕರಲ್ಲೇ ಕೆಲವರು ಟೀಚರ್ಸ್ ಇದ್ದರು. ಅವರೆಲ್ಲ ಕಪ್ಪೆಯನ್ನು ಕೊಳಗದಲ್ಲಿ ತುಂಬಿದಂತೆ ಒಬ್ಬೊಬ್ಬರನ್ನೇ ಕೂಗಿ, ಕಿರುಚಿ, ಗದರಿ ಕೂರಿಸುವ ಪ್ರಯತ್ನ ಮಾಡಿದರು.
ಅದು ಬರಿ ಪ್ರಯತ್ನವೇ ಆಗಿತ್ತು. "ಅವರೆಲ್ಲರ ಚೀರಾಟದ ನಡುವೆ ಇವರದ್ದೂ ಒಂದು ಇಲ್ಲಿಂದ ಹೊರಟೇ ಬಿಡ್ಬೇಕು" ಅಂತ ಅನಿಸಿತು. ಎಲ್ಲವನ್ನೂ ನೋಡುತ್ತಾ ಕುಳಿತ ನನಗೆ ಮನಸಿನಲ್ಲೇ ಪ್ರಾಥಮಿಕ ಶಾಲೆಯ ಟೀಚರ್ಸ್‌ಗಳ ನೆನಪಾಯಿತು. ಅದಕ್ಕೆ ಆಗಲೇ ಹೇಳಿದ್ದು ಅಕ್ಕೋರಾಗುವುದು ಕಷ್ಟ ಎಂದು. ಅಂತೂ ಯಾರೋ ಒಬ್ಬ ದೇವಸ್ಥಾನದ ಕಮೀಟಿಯವ ಬಂದು ಮೈಕು ಸರಿಮಾಡಿಕೊಟ್ಟ. ಈಗ ಸ್ಪರ್ಧೆ ಆರಂಭವಾಗಿದೆ.
ಅದಾದ ಮೇಲೆ ಬೇಗ ಬೇಗ ಮಕ್ಕಳಿಗೆ ಸರಿಯಾಗಿ ಚಿತ್ರ ಬಿಡಿಸಲೂ ಅವಕಾಶ ಕೊಡದಂತೆ ಅರ್ಧಗಂಟೆಯಲ್ಲಿ ಮುಗಿಸೇಬಿಟ್ಟರು. ಕೆಲ ಮಕ್ಕಳು ಗಾಬರಿಯಾದರು, ಇನ್ನು ಕೆಲವರು ಸಮಯ ಸಾಲುತ್ತಿಲ್ಲ ಎಂದು ಅತ್ತರು, ಪಾಲಕರು ಹೀಗೆ ಮಾಡಬಾರದಿತ್ತು ಎಂದು ಹೀಗೆಲ್ಲ ಮಾಡುತ್ತಾ ಸ್ಪರ್ಧೆ ಮುಗೀತು. ನಂತರ ಪಾಲಕರಿಗೆ ಸಂಗೀತ ಕುರ್ಚಿ ಇತ್ತು. ಅದಾದ ನಂತರ ಬಹುಮಾನ ಕೊಟ್ರು ನಮ್ ಹುಡ್ಗಿ ವರ್ಷಾ ಮೊದಲ ಬಹುಮಾನ ಪಡೆದುಕೊಂಡಿದ್ದು ಈ ದಿನದ ಖುಷಿಯಾಗಿತ್ತು.
ಸುಮಾ ಕಂಚೀಪಾಲ್
Comments
Post a Comment