ಜುಲೈ 6, 2021. ಕಂಚೀಪಾಲ್ ಬ್ಲಾಗ್ ಸ್ಪಾಟ್‌ನಲ್ಲಿ ಅಂದು ನಾನು ನನ್ನ ಮೊದಲ ಬರಹ ಪ್ರಕಟಿಸಿದ್ದೆ. ಓದುಗರು ಇಷ್ಟವಾದರೆ ಓದುತ್ತಾರೆ, ಇಲ್ಲವೆ ಪ್ರಯತ್ನ ಜಾರಿಯಲ್ಲಿರಲಿ. ನಾನಂತೂ ಬರಿಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ನಿಮ್ಮಿಂದ ನನಗೆ ಸಿಕ್ಕ ಸ್ಪಂದನೆ ಬಹಳ ದೊಡ್ಡದು. ಒಮ್ಮೆ ಓದಿದವರು ಮತ್ತೊಮ್ಮೆ ಓದಿ ಇಷ್ಟವಾದ ಬರಹಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ನಾನು ಸಿಕ್ಕಾಗೆಲ್ಲ 'ನೀ ಬರೆದದನ್ನು ಓದಿದೆ, ತುಂಬಾ ಚೆನ್ನಾಗಿತ್ತು. ಹೀಗೆ ಬರಿತಾ ಇರು' ಎಂದು ಪ್ರೋತ್ಸಾಹಿಸಿದವರು ಹಲವರಿದ್ದೀರಿ. ಮನೆ, ಕಾಲೇಜು, ಆಫೀಸ್ ಎಲ್ಲ ಕಡೆಗಳಲ್ಲಿ ಖುಷಿಯಿಂದ ಬರೆದೆ. ಇಂದು ಇದೇ ಅಕ್ಷರಗಳು ನನ್ನ ಬದುಕಿನ ಕೈಹಿಡಿದು ಮುನ್ನಡೆಸುತ್ತಿವೆ. ಮೊದಲ ಉದ್ಯೋಗ ಸಿಕ್ಕಾಗ ಮತ್ತು ನನ್ನ ಮುಂದಿನ ಹೆಜ್ಜೆಗೂ ಇದೇ ಬ್ಲಾಗ್ ಕಾರಣ ಎಂದು ಕೆಲಸ ಕೊಟ್ಟವರೂ ಹೇಳಿದ್ದು ಇನ್ನೊಂದು ಖುಷಿ.
ಇಂದಿಗೆ ಈ ಬ್ಲಾಗ್ ಆರಂಭವಾಗಿ 4 ವರ್ಷಗಳು ಸಂದಿವೆ. ಹಲವರು ಸಾಮಾಜಿಕ ಕಾರ್ಯಕ್ರಮ, ಸ್ವ ಉದ್ಯೋಗಗಳಿಗೆ ಸಂಬಂಧಿಸಿದ ಬರಹಗಳನ್ನು ಇದೇ ಬ್ಲಾಗ್ ಮೂಲಕ ಸಂಪರ್ಕಿಸಿ ಬರೆಸಿಕೊಂಡಿದ್ದಾರೆ. ಕೆಲವರಿಗೆ ಉಚಿತವಾಗಿ ಬರೆದುಕೊಟ್ಟರೆ, ಇನ್ನು ಕೆಲವರು ಅವರಾಗೇ ಹಣ ತಲುಪಿಸಿದ್ದೂ ಉಂಟು.
ಈ 4 ವರ್ಷಗಳಲ್ಲಿ ಹತ್ತೊಂಬತ್ತು ಸಾವಿರ ಜನರು ನನ್ನ ಬ್ಲಾಗ್ ಓದಿದ್ದಾರೆ. ಅದರಲ್ಲಿ ನೀವೂ ಒಬ್ಬರು. 21 ಸಾವಿರ ಜನರನ್ನು ಈ ನಾಲ್ಕು ವರ್ಷಗಳಲ್ಲಿ ತಲುಪಬೇಕು ಎಂಬ ಸಂಕಲ್ಪ ಆಗ ನನ್ನಲ್ಲಿತ್ತು. ಆದರೆ ನಾನು ನಿರಂತರವಾಗಿ ಬರೆಯದ ಕಾರಣ ಅಷ್ಟು ಜನರನ್ನು ತಲುಪುವುದು ಸಾಧ್ಯವಾಗಲಿಲ್ಲ. ಆದರೆ ನಿಮ್ಮ ಆಶೀರ್ವಾದ ನಾನು ಬರೆದ ಬರಹಗಳಿಗೆ ಎಂದೂ ಕಡಿಮೆ ಆಗಲಿಲ್ಲ.
ಎಲ್ಲರಿಗೂ ತುಂಬಾ ಧನ್ಯವಾದಗಳು. ಇನ್ನು ಮುಂದೂ ನಿಮ್ಮ ಪ್ರೀತಿ ಹೀಗೆ ಇರಲಿ.
ಈಗ ಈ ಬ್ಲಾಗಿಗೊಂದು ಹೊಸ ರೂಪ ಕೊಡಲಿದ್ದೇನೆ. ಆಸಕ್ತರು ಕಳಿಸುವ, ಈ ಬ್ಲಾಗ್‌ಗೆ ಒಪ್ಪುವಂತಹ ಬರಹಗಳನ್ನು ನಾನು ಪ್ರಕಟಿಸುತ್ತೇನೆ. ನನ್ನ ಜೊತೆ ನನ್ನ ಮನೆಯವರೂ ಇದ್ದಾರೆ. ಇನ್ನು ಮುಂದೆ ಗುರುಗಣೇಶರ ಬರಹಗಳನ್ನೂ ನೀವು ಓದಬಹುದು.
ನಾನು ವಿದ್ಯಾರ್ಥಿಯಾಗಿದ್ದಾಗ ಆರಂಭಿಸಿದ ಈ ಬ್ಲಾಗ್ ಅಕ್ಷರಗಳಿಂದಲೇ ಬದುಕಿನ ದಾರಿ ತೋರಿಸಿ ಸುಲಲಿತಗೊಳಿಸಿದೆ. ಇಂತಹ ಹತ್ತು ಹಲವು ಪ್ರಯತ್ನ ಜಾರಿಯಲ್ಲಿರಲಿ, ಇರುತ್ತದೆ.
ಧನ್ಯವಾದಗಳು.
ಸುಮಾ.ಕಂಚೀಪಾಲ್
Comments
Post a Comment