ನಾನು ಇವನು ಹೈದರಾಬಾದ್‌ಗೆ ಹೋಗೋದು ಅಂತ ನಿರ್ಧಾರ ಮಾಡಿ ಮನೆಯಲ್ಲೇ ಊಟ ಮುಗಿಸಿ ಹೊರಟೆವು. ಕುವೆಂಪು ಮೆಟ್ರೋ ಸ್ಟೇಷನ್‌ನಿಂದ ಸೀದಾ ಬಂದು ಇಳಿದದ್ದು ಮೆಜೆಸ್ಟಿಕ್‌ಗೆ. ನಾನು ಸ್ವಲ್ಪ ಕತ್ತಲಾಗಿ ಬೀದಿ ದೀಪಗಳು ಉರಿಯಲು ಶುರುವಾದರೆ ಸಾಕು ಹೆದರಿ ಸಾಯುತ್ತೇನೆ. ನನ್ನನ್ನು ಸಮಾಧಾನ ಮಾಡಿ ಬ್ಯಾಗಿನ ಜೊತೆ ಕೈ ಹಿಡಿದು ಬೇರೆ ಊರು ತಲುಪುವುದು ಎಂದರೆ ಇವನಿಗೆಷ್ಟು ಕಷ್ಟ ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಆದರೂ ನಮಗೇನಾದ್ರೂ ಆದ್ರೆ? ಕಳ್ಳ ಬಂದ್ರೆ? ನಾನು ಕಳೆದೇ ಹೋದ್ರೆ ಎಂದು ಏನೇನೋ ಮಳ್ಳು ಹಲುಬುತ್ತ ಸಾಗುತ್ತೇನೆ. ಇವನಿಗೆ ಇರುವಷ್ಟು ಸಹನೆ ಯಾರಿಗೂ ಇಲ್ಲ, ಅದಂತೂ ನಿಜ ಎಂದು ನನಗೆ ನಾನೇ ಹಲುಬಿಕೊಂಡು ಅವನ ಹಿಂದೆ ಸಾಗುತ್ತೇನೆ.
ಕೆಂಪು, ಬಿಳಿ, ನೀಲಿ ಬಸ್ಸುಗಳ ಸಾಲು. ಏ ಇಲ್ ನೋಡೇ, ಹಿಂದಿನ ಸಲ ನಾವು ಬಸ್ ಹತ್ತಿದ್ದು ಇಲ್ಲೆಯ ನೆನಪಿದ್ದಾ ನಿನಗೆ? ಎಂದು ಉಮೇದಿಯಿಂದ ಇವ ಒಂಚೂರು ನನ್ನ ಕೈ ಬಿಟ್ಟು ಮುಂದೆ ಸಾಗಿದರೆ ನಾನು ನಿಂತಲ್ಲೇ ಬಾಕಿ. ಯಾಕೆಂದು ನನಗೂ ಗೊತ್ತಿಲ್ಲ. ಆಮೇಲೆ ನನ್ನಿಂದ ಉತ್ತರ ಬರದೇ ಇದ್ದಾಗ ಅವ ಮತ್ತೆ ತಲೆಮೇಲೆ ಕೈ ಹೊತ್ತು ನಾನಿದ್ದಲ್ಲಿ ಬರುತ್ತಾನೆ.
ಅವನಿಗೆ ಎಲ್ಲ ಜನರನ್ನು, ಎಲ್ಲ ಊರುಗಳ ಹೆಸರನ್ನು ಹಾಗೇ ಕೆ. ಆರ್ ಮಾರ್ಕೇಟಿಗೆ ಹೋಗಲು ಬಂದಿಳಿದ ಫ್ರೆಷ್ ಪುದಿನಾ ಎಲೆಗಳ ಗಂಟನ್ನೂ; ಎಲ್ಲವನ್ನೂ ಮಾತಾಡಿಸಬೇಕು. ನನಗೆ ಜನರನ್ನು ಕಂಡೇ ಭಯ. ಈಗ ಮೆಜೆಸ್ಟಿಕ್ ಬೆಂಚಿನ ಮೇಲೆ ಕೂತು ಬ್ಲಾಗ್ ಬರೆಯುತ್ತಾ ಇದ್ದರೂ ಯಾವ ಕಳ್ಳ ಬಂದು ನನ್ನ ಕೈಯಿಂದ ಮೊಬೈಲ್ ಕಸಿಯುತ್ತಾನೋ ಎಂಬ ಭಯ.
ಒಂದು ಕೈಯ್ಯಲ್ಲಿ ಮೊಬೈಲ್ ಗಟ್ಟಿಯಾಗಿ ಹಿಡಿದು ಬ್ಯಾಗ್ ಮುಂದೆ ನೇತುಹಾಕಿಕೊಂಡು ಇದನ್ನು ಬರೆದೆ. ಆಗಾಗ ಇವನ ಭುಜ ನನಗೆ ತಾಗದೆ ಇದ್ದರೆ ತಕ್ಷಣ ಅವನಿದ್ದ ಕಡೆಗೆ ವಾಲುತ್ತೇನೆ. ನಾನ್ಯಾಕೆ ಇಷ್ಟು ಭಯಪಡುತ್ತೇನೆ? ಯಾಕೆ ಇಷ್ಟು ಅತಿಯಾಗಿ ಆಡುತ್ತೇನೆ ಎಂದು ನನಗೆ ನಾನೇ ಪ್ರಶ್ನೆ ಮಾಡಿಕೊಂಡಾಗ ಹೊಳೆದವರು ಚಿತ್ರ ವಿಚಿತ್ರ ಜನರು - ಉದಾಹರಣೆಗೆ, ನೆಲದ ಹಾಸಿನ ಮೇಲೆ ಇದೇ ಅರಮನೆ ಎಂಬಂತೆ ಮಲಗುವ ಉದ್ದ ಕೂದಲು ಬಿಟ್ಟ ಅಜ್ಜ. ಕನ್ನಡಕ ಧರಿಸಿ ಕತ್ತಿಗೆ ಮೂರು ಚೈನು ಕೈ ಎಲ್ಲಾ ಬೆರಳಿಗೂ ಉಂಗುರ ತೊಟ್ಟ ಮಧ್ಯಮ ವಯಸ್ಕ, ಲವರ್ ಹತ್ತಿರ ಜಗಳ ಮಾಡುತ್ತ ಇನ್ನೇನು ಕೊಂದೇ ಹಾಕುತ್ತಾನೆ ಇವ ಎಂಬಂತ ಜೋಡಿಗಳು. ಅವರು ಎಲ್ಲಿಂದ ಬಂದವರೋ? ಎಲ್ಲಿಗೆ ಹೋಗುವವರೋ ಗೊತ್ತಿಲ್ಲ.
ನನ್ನದಲ್ಲದ ಹಲವು ಭಾಷೆಗಳನ್ನು ಆಡುವ ಜನ. ಸತ್ತು ಹೋದ ನನ್ನ ಅಜ್ಜ, ಅವ್ವನನ್ನೇ ಹೋಲುವ ಮುದಿ ಜೋಡಿ. ಇದೆಲ್ಲ ನನ್ನೊಳಗೆ ಆತಂಕ ಹುಟ್ಟಿಸುವ ವಿಷಯಗಳು. ಇಷ್ಟು ಬರೆಯುವಷ್ಟರಲ್ಲಿ ಪಕ್ಕದಲ್ಲಿದ್ದ ನಮ್ಮ ಯಜಮಾನರು ಮಾಯ! ಬಸ್ ನೋಡಿ ಬರುತ್ತೇನೆ ಎಂದು ಹೋದವರು ಇನ್ನೂ ಬಂದಿಲ್ಲ. ನನ್ನ ಪಕ್ಕದ ಜಾಗ ಈಗಲೇ ಆಕ್ರಮಣ ಆಗಿಬಿಟ್ಟಿದೆ. ಇವನು ಬರುವುದಕ್ಕೂ ಮೊದಲು ಆ ಸಹಸ್ರ ಜನರ ಆಸ್ತಿಯೇ ಆಗಿಹೋದ ಮೆಜೆಸ್ಟಿಕ್‌ನಲ್ಲಿ ಕೇಳಿದ್ದು ನಮ್ಮ ಹವ್ಯಕ ಭಾಷೆ ಯಾರೋ ಮಂತ್ರಾಲಯಕ್ಕೆ ಹೊರದವರದ್ದು. ಇದೊಂದು ಖುಷಿ ನೋಡಿ, ಎಲ್ಲಿ ಹೋದ್ರೂ ನಮ್ಮವರು ಸಿಕ್ಕೇ ಸಿಗುತ್ತಾರೆ.
ಎಲ್ಲಿದ್ದನೋ ಎಲ್ಲಿಂದ ಬಂದನೋ.. ಇವನು ಬಂದು 'ಬಾ, ಬಸ್ ಬಂತು' ಎಂದ. ಸೀದಾ ಇವನ ಹಿಂದೆ ನಡೆದು ಬಂದೆ. ಐರಾವತ ಕ್ಲಬ್ ಕ್ಲಾಸ್ ಬಸ್ ರೆಡಿಯಾಗಿತ್ತು. ಐಡಿ ತೋರಿಸಿ ಸೀಟು ಭದ್ರಪಡಿಸಿಕೊಂಡು ಇಬ್ಬರ ಮನೆಗೂ ಕಾಲ್ ಮಾಡಿ ಧರಣಿ ಮಂಡಲ ಸಿನಿಮಾ ನೋಡಲು ಅಣಿಯಾದೆವು.
ಮತ್ತೆ ಸಿಗೋಣ ಶುಭರಾತ್ರಿ.
ನಾಳಿನ ಬೆಳಗು ಹೈದರಾಬಾದ್
ಸುಮಾ. ಕಂಚೀಪಾಲ್
Super 👍 aadru kallara hedrake iddu helatu hangallla bittik hogada helu yajamanara hatra😅😂
ReplyDelete