ರಾತ್ರಿ ನಾನು ಇದನ್ನು ಬರೆಯಲು ಆರಂಭಿಸಿದಾಗ ಸಮಯ ಸರಿಯಾಗಿ 12: 24 ಊರಲ್ಲಿ ದೊಡ್ಡ ಕಾರ್ಯಕ್ರಮ, ಊರಿನ ಯಾವ ಮನೆಯಲ್ಲೂ ಜನ ಇಲ್ಲ ಅಥವಾ ತೀರಾ ವಿರಳ ಎಂದೇ ಹೇಳಬಹುದು. ಹೀಗಿರುವಾಗ ದಿನಾಂಕ 28 ಜನವರಿ 2024 ಬಿಗ್ ಬಾಸ್ ಫೈನಲ್ ಇತ್ತು, ಮೈತ್ರಿ ಕಲಾ ಬಳಗದಲ್ಲಿ ರಜತ ಮಹೋತ್ಸವ ಇತ್ತು. ನನಗೆ ಎರಡೂ ಮುಖ್ಯ ಒಂದು ಸ್ವಾಮಿ ಕಾರ್ಯ (ಆಫಿಸ್ ವರ್ಕ್ ಇದೆ) ಇನ್ನೊಂದು ಸ್ವಕಾರ್ಯ (ತಮ್ಮನ ಸಿಂಹ ನೃತ್ಯ ಇದೆ) ನನಗೂ 25 ವರ್ಷ ಕಲಾ ಬಳಗಕ್ಕೂ ಇಪ್ಪತ್ತೈದು ವರ್ಷ ಆ ಕಾರಣ ನಮ್ಮ ಮನೆಯಲ್ಲಿ ಅಲ್ಲಿ ನಡೆಯೋ ಕಾರ್ಯಕ್ರಮ ನೋಡಲು ಎಲ್ಲರೂ ಹೋಗಿದ್ದಾರೆ. ನನಗೆ ಸುದ್ದಿ ಮಾಡುತ್ತಾ ಇರುವಷ್ಟು ಹೊತ್ತು ಅತ್ತಿತ್ತ ಗಮನ ಇರಲಿಲ್ಲ. ಆದ್ರೆ ಈಗ ಮುಗಿದಿದೆ. ಜಗುಲಿಯಲ್ಲಿ ಏನೋ ಸದ್ದಾಗ್ತಾನೆ ಇದೆ.
ಸ್ವಾಮಿ ಕಾರ್ಯ (ಇದರಲ್ಲೂ ಖುಷಿ ಇದೆ)
ಅದರಿಂದ ಗಮನವನ್ನು ಬೇರೆಕಡೆ ಕೊಂಡೊಯ್ಯಲೇ ಬೇಕು ಇಲ್ಲ ಮನೆಯವರು ಬರುವ ಮೊದಲೇ ನಾನು ಹೆದರಿ ಕಂಗಾಲಾಗಿ ಮೈ ನಡುಗುತ್ತದೆ. ಎಷ್ಟು ಸಾರಿ ಬೆಚ್ಚಿ ಬೀಳುತ್ತೇನೆ ಎಂದು ಹೇಳೋದಕ್ಕೆ ಸಾಧ್ಯ ಇಲ್ಲ. ಮೊದಲೇ ಮುಗಿದರೆ ನಾನೂ ಕಾರ್ಯಕ್ರಮ ನೋಡೋಣ ಅಂತಿದ್ದೆ. ಆದರೆ ಅದು ಸಾಧ್ಯ ಆಗಲಿಲ್ಲ. ಲೈವ್ ಇತ್ತು ಅದನ್ನು ನೋಡ್ತಾ ಕುಳಿತಿದ್ದೆ. ಅಜ್ಜ ಉಳಿಸುಕೊಂಡು ಬಂದಿದ್ದ ಕಲೆ ಮುಂದುವರೆಸುವ ಆಶಯದಿಂದ ತಮ್ಮ ಈ ವರ್ಷ ಅಂದರೆ ಅಜ್ಜ ತೀರಿಕೊಂಡ ವರ್ಷವೇ ವೇಷ ಹಾಕುತ್ತಿದ್ದಾನೆ.
ಇದು ತಮ್ಮ
ಜಗುಲಿಯಲ್ಲಿ ನೇತುಹಾಕಿದ್ದ ಅಜ್ಜನ ಫೋಟೋದ ಕೆಳಗೆ ಒಂದು ಪ್ಲಾಸ್ಟಿಕ್ ಚೇರ್ ಕೂಡ ಇರುತ್ತದೆ. ಅಜ್ಜನೇ ಮೃದಂಗ, ಚಂಡೆಯ ತಾಳಕ್ಕೆ ಕುಣಿದನೇ ಅನ್ನೋ ರೀತಿ ಶಬ್ಧ ಆಯ್ತು. ನನಗೆ ಭಯವಾಯ್ತು ಮನೆಯಲ್ಲಿ ನಾನೊಬ್ಬಳು. ಮತ್ತೊಂದು ವಿಚಾರ ಎಂದರೆ ಕಾರ್ಯಕ್ರಮದ ಮೈಕ್ ಶಬ್ಧ ಇಲ್ಲಿವರೆಗೆ ಕೇಳ್ತಾ ಇದೆ. ಅಲ್ಲಿ ಕೂರ್ಚಿಯ ಮೇಲೆ ಹಾರಿದ್ದು ಪಲ್ಲಿ ಹಿಡಿಯಲು ಹೋದ ಬೆಕ್ಕು ಎಂಬುದು ನನಗೆ ನಿಕ್ಕಿ ಇದೆ. ಆದರೂ ಈ ಹುಚ್ಚು ಕಲ್ಪನೆಗಳು ಯಾವಾಗಲೂ ಭಯ ಹುಟ್ಟಿಸುತ್ತದೆ.
ನನ್ನ ನಾಕಾರು ಗೆಳತಿಯರು ಬಂದಿದ್ದಾರೆ. ಅವರೆಲ್ಲ ಸೇರಿ ಯಕ್ಷಗಾನ ನೋಡುತ್ತಾ ಇದ್ದಾರೆ. ಶಾಲೆಯ ಗ್ಯಾದರಿಂಗ್ನಲ್ಲಿ ಮಕ್ಕಳು ಕುಣಿಯುವುದನ್ನು ನೋಡಲು ನನಗೆ ತುಂಬಾ ಇಷ್ಟ ಯಾಕೆಂದರೆ ನನಗೆ ನನ್ನ ಬಾಲ್ಯ ಕಣ್ಮುಂದೆ ಬರುತ್ತದೆ. ನಾನು ಕುಣಿಯುವ ಅವಕಾಶವನ್ನು ಭಾಗಶಃ ಕಳೆದುಕೊಂಡಿದ್ದೇನೆ. ಇಂದು ಮತ್ತೆ ಶಾಲೆ ಮಕ್ಕಳ ನೃತ್ಯ ಇತ್ತೂ ಅದೂ ತಪ್ಪಿ ಹೋಯಿತು.
ಕೈಯ್ಯಿಗ್ ಬಂದ್ರೂ ಬಾಯಿಗ್ ಬೈಂದ್ಲೆ ಅನ್ನೋತರ ನನ್ನ ಪರಿಸ್ಥಿತಿ ಈಗಾಗಿದೆ. ಇಷ್ಟೊತ್ತು ಇದನ್ನಾದ್ರೂ ಬರೆದೆ ಈಗ ಚಂಡೆ ಅಬ್ಬರ ಇನ್ನೂ ಹೆಚ್ಚಾಗಿದೆ ಇಲ್ಲಿ ಕುಳಿತುಕೊಳ್ಳುವ ಬದಲು ಬ್ಯಾಟರಿ ಹಿಡಿದು ಓಡಿಕೊಂಡು ಹೋಗಿ ಬಿಡೋಣ ಅಂತ ಅನಿಸುತ್ತಿದೆ. ಬರೆಯುವುದನ್ನು ನಿಲ್ಲಿಸಿದೆನಾದರೆ ಮತ್ತೆ ಯೋಚನೆಗಳು ಆರಂಭವಾಗುತ್ತದೆ. ಆ ಕಾರಣಕ್ಕಾಗಿ ಬರೆದ ಬ್ಲಾಗ್ ಇದು. ಇನ್ನೊಂದು ರೆಡಿ ಇದೆ ನಿಮಗೆ ಆಶ್ವಾಸನೆ ಕೊಟ್ಟ ಬ್ಲಾಗ್ ಅದು. ಅದನ್ನು ಇನ್ನೊಮ್ಮೆ ಪೋಸ್ಟ್ ಮಾಡುತ್ತೇನೆ.
ಇಲ್ಲೊಂದು ವಿಶೇಷ ಇದೆ ಅದೇನ್ ಗೊತ್ತಾ ಬಿಗ್ ಬಾಸ್ ನೋಡಲು ಇಷ್ಟ ಇಲ್ಲದ ಎಷ್ಟೋಜನ ಇದ್ದಾರೆ, ಅದರಲ್ಲಿ ನಾನೂ ಒಬ್ಬಳು ಆದರೆ ಕೆಲಸಕ್ಕಾಗಿ ನೋಡಿದ್ದೇನೆ ಅದು ಅನಿವಾರ್ಯ ಕೂಡ. ಆಮೇಲೆ ನಾನು ಅದನ್ನು ಇಷ್ಟಪಡಲು ಆರಂಭಿಸಿಕೊಂಡಿದ್ದೆ. ಅದರಲ್ಲಿ ಮಹಿಳೆ ವಿನ್ ಆಗಬೇಕಿತ್ತು ಎಂದಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇಂದು ನಮ್ಮ ಊರಿನಲ್ಲಿ ಮಹಿಳೆಯರು ವಿನ್ ಆಗಿದ್ದಾರೆ.
ಇಂದು ನಡೆದ ತಾಳಮದ್ದಳೆಯಿಂದ ಹಿಡಿದು ನಿರೂಪಣೆ, ನೃತ್ಯ, ಯಕ್ಷಗಾನದವರೆಗೆ ಎಲ್ಲದರಲ್ಲೂ ಮಹಿಳೆಯರೇ ಇದ್ದಿದ್ದು ತುಂಬಾ ಖುಷಿಕೊಟ್ಟಿದೆ. ಒಂದೆಡೆ ಬಿಗ್ ಬಾಸ್ ಲೈವ್ ಇನ್ನೊಂದೆಡೆ ನಮ್ಮೂರಿನ ಕಾರ್ಯಕ್ರಮದ ಲೈವ್ ಎರಡನ್ನೂ ನೋಡುತ್ತಾ ಈ ವಿಚಿತ್ರ ರಾತ್ರಿಯನ್ನು ಕಳೆಯುತ್ತಿದ್ಧೇನೆ. ನೀವು ಬಹುಶಃ ನಾಳೆ ಬೆಳಿಗ್ಗೆ ಎದ್ದು ಇದನ್ನು ಓದಬಹುದು.
ಗುಡ್ ನೈಟ್ ಹೇಳುತ್ತಾ, ಲೈಟ್ ಆಫ್ ಮಾಡದೇ ಮುಂದೇನು ಮಾಡಬೇಕೆಂದು ತಲೆಕೆರೆದುಕೊಳ್ಳುತ್ತಿರುವ ಇಂತಿ ನಿಮ್ಮ
ಸುಮಾ. ಕಂಚೀಪಾಲ್
ಓದಿದ ಮೇಲೆ ಹಲವರು ನಿಮ್ಮ ಪ್ರತಿಕ್ರಿಯೆ ತಿಳಿಸುತ್ತೀರಿ ಅದರಂತ ಖುಷಿ ಇನ್ನೊಂದಿಲ್ಲ. ಇನ್ಮುಂದೆ ಸುಕಂ ಬ್ಲಾಗ್ ಇನ್ನಷ್ಟು ಚಿಗುರಲಿದೆ ಕಾಯ್ತಾ ಇರಿ.
ಬರೆದು ಮುಗಿದಾಗ ಸಮಯ _12:49
ReplyDeleteಇಷ್ಟ ಆಯ್ತು ತುಂಬಾ. ಬರೆಯುತ್ತಾ ಇರು. ನಿನ್ನ ಬ್ಲಾಗ್ ಓದಲು ತುಂಬಾ ಖುಷಿ.
ಧನ್ಯವಾದ ತಮ್ಮ ಹಾರೈಕೆ ಸದಾ ಇರಲಿ
ReplyDeleteSuper 😍
ReplyDeleteThank you
Delete