Skip to main content

ಹಿತ ಏಕಾಂತ

ಆಫೀಸ್ ಕೆಲಸ ಮುಗಿದಿತ್ತು. ಚೇರ್ ಹಿಂದಕ್ಕೆ ಸರಿಸಿ ಚಾರ್ಜರ್ ಎತ್ತಿಡುತ್ತಲೆ ಗಂಟೆ ಎಷ್ಟಾಗಿದೆ ಎಂದು ಒಮ್ಮೆ ಮೊಬೈಲ್ ಸ್ಕ್ರೀನ್ ಡಬಲ್ ಟ್ಯಾಪ್ ಮಾಡಿ ನೋಡಿದೆ. 6:15 ಆಗಿತ್ತು. ಹಾಗೇ ಅವನಿಗೊಂದು ಪೋನು ಮಾಡಿ ಹೊರಡೋಣ ಎನ್ನುವಷ್ಟರಲ್ಲಿ ಇನ್ನು ಹತ್ತು ನಿಮಿಷಗಳಲ್ಲಿ ಹೊರಡಲಿರುವ ಬಸ್ ನೆನಪಾಗಿ‌ ಮೊಬೈಲ್ ಬ್ಯಾಗಿಗೆ ತುರುಕಿ ಮಧ್ಯಾಹ್ನ ಊಟಕ್ಕೆ ತಂದಿದ್ದ ಮೂರು ಡಬ್ಬಿಗಳನ್ನು ಬ್ಯಾಗಿಗಿಳಿಸಿ ಹೊರಟು ನಿಂತೆ. ಲಾಗ್ ಔಟ್ ಮಾಡಲು ಬಾಗಿಲ ಬಳಿ ಬೆರಳಿಟ್ಟೆ. ಅದು ಥ್ಯಾಂಕ್ಯೂ ಎನ್ನುವುದರ ಒಳಗಾಗಿ ನಾನು ಅಲ್ಲಿಂದ ಕಾಲು ಕಿತ್ತು ಲಿಫ್ಟ್ ಬಟನ್ ಪ್ರೆಸ್ ಮಾಡಿದ್ದೆ. ಅದರ ಬಾಗಿಲಿನಲ್ಲಿ ಕಾಣುವ ನನ್ನ ಪ್ರತಿಬಿಂಬ ನೋಡಿ ಕೂದಲು ಸರಿ ಮಾಡಿ ನನ್ನೊಂದಿಗೆ ನಾನೇ ನಗುವಷ್ಟರಲ್ಲಿ ಡೋರ್ ಓಪನ್ ಆಗಿತ್ತು.



ತುಸು ಭಯ ಹುಟ್ಟುಸುವ ಮೈನಸ್ ಒಂದರಲ್ಲಿ ಇಳಿದು ಸೆಕ್ಯುರಿಟಿ ಇದ್ದಾರಾ? ಎಂದು ವಾರೆಗಣ್ಣಲ್ಲೇ ನೋಡುತ್ತಾ ಕಾಲಿನ‌ ವೇಗ ಹೆಚ್ಚಿಸಿದೆ. ರವಿವಾರ ಆದ್ದರಿಂದ ಬ್ಲಾಗ್ ಬರೆಯಬೇಕು ಇಂದೊಂದಿಷ್ಟು ಜನ ಓದಬಹುದು ಎಂದುಕೊಂಡೆ. ಆದರೆ ಕೆಲಸದ ಅವಧಿಯಲ್ಲಿ ಬರೆದ ಆರ್ಟಿಕಲ್‌ಗಳ ಮಧ್ಯೆ ಮತ್ತೊಂದಿಷ್ಟು ಬರೆಯುವುದೆಂದರೆ ಖಾಲಿ ಹೊಟ್ಟೆ ಇರುವಾಗ ತೇಗು ಬಂದಂತೆ ಎಂದು ತಿಳಿದಿದ್ದರೂ, ಬದುಕಲು ಊಟ ಮುಖ್ಯವೆಂದು ಒತ್ತಾಯ ಮಾಡಿಯಾದರೂ ಉಣ್ಣುತ್ತೇವಲ್ಲ ಹಾಗೆ ಬರೆಯುವ ಮನಸು ಮಾಡಿದೆ.

ಒಂದು ಹತ್ತು ನಿಮಿಷ ಬಸ್ಸಿಗಾಗಿ ಕಾಯುವುದರ ಒಳಗಾಗಿ ಬಸ್ ಬಂತು. ಹೇಗೋ ರವಿವಾರ, ಇಂದಾದರೂ ಸೀಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿದ್ದೆ. ಊಹೂ. ಇಂದು ಒಂದೇ ಒಂದು ಸೀಟು ಖಾಲಿ ಇರಲಿಲ್ಲ. ಕೆ ಆರ್ ಮಾರ್ಕೆಟ್ ದಾಟುವ ಸಂದರ್ಭದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮೊಳಗುತ್ತಿತ್ತು. ಜನ ನುಗ್ಗಿ ನುಗ್ಗಿ ಬಸ್ ಹತ್ತುತ್ತಿದ್ದರು. ಎಲ್ಲಿ ನನ್ ಮೊಬೈಲ್ ಅಥವಾ ಪರ್ಸ್ ಕಳುವಾಗುತ್ತೋ ಎಂಬ ಭಯದಲ್ಲಿ ಲ್ಯಾಪ್‍ಟಾಪ್ ಬ್ಯಾಗ್ ಒಂದೇ ತೋಳಿಗೆ ಸಿಕ್ಕಿಸಿ ಅದರ ಮೇಲೆ ಇನ್ನೊಂದು ಕೈ ಹಿಡಿದು ನಿಂತಿದ್ದೆ.


ಪೇಟೆಯ ಗದ್ದಲ, ತರಕಾರಿ, ಹೂವಿನ ಕವರ್, ದಪ್ಪನೆಯ ಬ್ಯಾಗ್, ಆಂಟಿಯರ ಕುಪ್ಪಸದ ಬೆವರು ವಾಸನೆ, ಕರಿ ಬಿಳಿ ಕೂದಲಿನ ತಲೆಗಳು, ಗದರುತ್ತಲೇ ತಿರುಗುವ ಕಂಡಕ್ಟರ್ ಇವುಗಳ ಮಧ್ಯ ಇಲಿ ಮರಿಯಂತೆ ನಾನು ನನ್ನ ಬ್ಯಾಗ್. ಪದೇ ಪದೇ ಬೀಳುವ ಸಿಗ್ನಲ್ ಐದು ಕಿಲೋಮೀಟರ್ ದಾರಿಯನ್ನು ಬರೋಬ್ಬರಿ 45  ನಿಮಿಷಗಳ ಕಾಲ ನಿಂತು ಸಾಗಿದರೆ ಬರೋದೆ ನನ್ನ ಮನೆ (ರೂಂ).



ಬರುವಷ್ಟರಲ್ಲಿ ದಾಹ ಹಸಿವು. ಮಾಡಿಕೊಂಡು ತಿನ್ನುವಷ್ಟೂ ತ್ರಾಣ ಇರುವುದಿಲ್ಲ. ತಿಂಡಿ ಮಾಡಿಡಲು ನನಗೆ ಹೆಂಡತಿ ಇಲ್ಲ. ಗಂಡನೂ ಸದ್ಯಕ್ಕಿಲ್ಲ. (ಈ ಸಾಲು ಬರೆಯುವಷ್ಟರಲ್ಲಿ ನಾನಿದ್ದೇನೆ ಎಂದು ನೆನಪಿಸುವಂತೆ ಅವನ ಗುಡ್‌ನೈಟ್ ಕಾಲ್ ಬಂದಿತ್ತು. ಇದೇ ಇರಬಹುದು ಟೆಲಿ-ಪತಿ)


ಅಂತೂ ಸುಸ್ತಾಗಿದ್ದವಳು ಅಪರೂಪಕ್ಕೆ ಬಂದವಳೇ ಬಟ್ಟೆ ಬದಲಿಸಿ ಕೈಕಾಲು ತೊಳೆದಿದ್ದೆ. ಇಲ್ಲವಾದರೆ ಮೊಬೈಲ್ ಗೀಚುತ್ತಿದ್ದೆ. ಹಸಿವಾದಂತೆ ಅನಿಸಿ ಒಂಚೂರು ಮಂಡಕ್ಕಿ ತಿಂದೆ. ಸ್ವಲ್ಪ ಗಟ್ಟಿಯಾಗು ಎಂದು ಬಲವಂತ ಮಾಡುವವರ ಸಲುವಾಗಿ ಚೂರು ಸೇಬು ಮೂಸಂಬಿ ತಿಂದಿದ್ದೆ.

ಇಷ್ಟಾಗುವ ಹೊತ್ತಿಗೆ ಕಾಲು ತೊಳೆಯಲು ಹೋದಾಗ ಹಾಕಿದ ಗೀಸೃ ನೀರು ಬಿಸಿಮಾಡಿತ್ತು. ಸ್ನಾನ ಮಾಡಿ ಬಂದು ಅಡುಗೆ ಮಾಡಿ ಚೂರು ಮೊಬೈಲ್ ಗೀಚಿ ಒಂದಷ್ಟು ರೀಲ್ಸ್ ನೋಡಿದೆ. ಅವರಿವರ ಮೆಸೆಜೊಂದಷ್ಟಕ್ಕೆ ರಿಪ್ಲೈ ಒತ್ತಿ ಮನೆಗೆ ವಿಡಿಯೋ ಕಾಲ್ ಮಾಡಿ ಅಜ್ಜನನ್ನೊಮ್ಮೆ ನೋಡಿಕೊಂಡೆ.



ಸಂಜೆ ಆರು ಗಂಟೆಗೆ ಮಾತು ನಿಲ್ಲಿಸಿದ ಮೇಲೆ ಮರುದಿನ 9:30 ಕ್ಕೆ ಆಫೀಸಿಗೆ ಹೋಗಿಯೇ ಮಾತನಾಡುವುದು. ಒಂಟಿ ಜೀವನದಲ್ಲಿ ಸಿಗುವಷ್ಟು ಖುಷಿ, ಇಷ್ಟು ಮೌನ, ಧ್ಯಾನ, ಏಕಾಂತ, ಏಕತಾನತೆ, ಒಂಟಿತನ, ಸ್ವಯಂ ಪ್ರೀತಿ, ಆತ್ಮವಿಶ್ವಾಸ, ಬೇಸರ ನಮ್ಮೊಂದಿಗೆ ನಾವೇ ಇರುವ ಸಮಯ, ತೋಡಿ ಬರುವ ದುಃಖ ಇವೆಲ್ಲವೂ ಇನ್ನೊಬ್ಬರೊಂದಿಗಿರುವಾಗ ಕಡಿಮೆ. ಮಲಗುವಾಗ ಗೋಡೆಯ ಮೇಲೆ ಬೀಳುವ ತೆಂಗಿನಗರಿಯ ನೆರಳು ಅಕ್ಕ ಪಕ್ಕ ನೆಟ್ಟುಕೊಂಡ ೨ ಗಿಡ ಬಿಟ್ಟರೆ ನನ್ನ ಆಲೋಚನೆಗಳೇ ನನ್ನ ಸಂಗಾತಿ.

ತಮ್ಮನ ಪರೀಕ್ಷೆ, ಅಮ್ಮನ ಹಳ್ಳಿ ಔಷಧಿ, ಅಪ್ಪ ಮಾಡುತ್ತಿರುವ ಮಣ್ಣಿನ ಗಣಪತಿ ಮತ್ತು ಇಂದು ವೀಲ್ ಚೇರ್ ನಾನೇ ತಳ್ಳಿಕೊಂಡು ಹೋದೆ ಎಂಬ ಅಜ್ಜನ ಖುಷಿ ಇವೆಲ್ಲ ಆದ ನಂತರ ರೀಲ್ಸ್ ನೋಡುತ್ತಿದ್ದೆ. ಅದರಲ್ಲಿ ಕೆಲವೊಂದಿಷ್ಟು ಛೇ ನಾನೂ ಹೀಗೆಲ್ಲಾ ಮಾಡಬೇಕಿತ್ತು ಬರಿ ಕೆಲಸವೇ ಆಯ್ತು ಎನ್ನುವುದನ್ನು ನೆನಪಿಸಿದರೆ ಇನ್ನೊಂದಿಷ್ಟು ಹೊಸ ಕನಸುಗಳನ್ನು ಹುಟ್ಟಿ ಹಾಕುತ್ತಿತ್ತು. ನಿನ್ನೆ ನಿಮಗೆ ಕೊಟ್ಟ ಭರವಸೆ ನೆನಪಾಗಿ ಏನಾದರು ಬರೆಯೋಣ ಎಂದರೆ ವಿಷಯ ಮಾತ್ರ ತೋಚಲಿಲ್ಲ. ಹಾಗಾಗಿ ಇಷ್ಟನ್ನು ಬರೆದಿದ್ದೇನೆ.

ಇಷ್ಟು ಬರೆಯುವುದಕ್ಕೂ ಬರದಷ್ಟು ಯಾಂತ್ರಿಕ ಬದುಕು ಬೇಕಿತ್ತಾ ಎಂಬ ಪ್ರಶ್ನೆ? ಅಷ್ಟೇ ಇಂದಿಗೆ ಪ್ರಶ್ನಾರ್ಥಕವಾಗಿಯೇ ಮುಗಿಸುತ್ತೇನೆ. ಮತ್ತೆ ಸಿಗೋಣ. 

ಸುಮಾ.ಕಂಚೀಪಾಲ್

Comments

  1. ಚೆನ್ನಾಗಿದೆ. ನನ್ನದೇ ಭಾವನೆಗಳು ಪದಗಳಲ್ಲಿ ಪೋಣಿಸಿಟ್ಟ ಅನುಭವವಾಯ್ತು.

    ReplyDelete
  2. ಬರಹಗಾರರಿಗೆ ಹೊಟ್ಟೆ ಉರಿಸುವಂಥ ಸಹಜವಾದ ಮನಮುಟ್ಟುವ, ಹೃದಯತಟ್ಟುವ ಬರಹ!

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...