Skip to main content

ಸರಳತೆಯ ಅಕ್ಷರ ಸಂತ

ಉಜಿರೆ: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಹಲವು ಸಂಘಸಂಸ್ಥೆಗಳು ಅಭಿನಂದಿಸುತ್ತಿವೆ. ಸನ್ಮಾನಿಸುತ್ತಿವೆ. ಇವುಗಳ ನಡುವೆ ಉಜಿರೆಯಲ್ಲಿ ಹರೇಕಳ ಹಾಜಬ್ಬ ಅವರನ್ನು ಅಭಿನಂದಿಸಿದ ರೀತಿ ವಿಭಿನ್ನವಾಗಿತ್ತು. ಕಾರ್ಯಕ್ರಮ ಕೇವಲ ಶಾಲು, ಹಾರಗಳಿಂದ ವಿಜೃಂಭಿಸದೆ ಸರಳ ಮತ್ತು ಸಹಜವಾಗಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಗೆ ದೀಪ ಪ್ರಜ್ವಲನೆ ಇರಲಿಲ್ಲ. ಬದಲಿಗೆ ವಿದ್ಯಾರ್ಥಿ ಪ್ರತಿನಿಧಿಗಳಿಂದ ಹರೇಕಳ ಹಾಜಬ್ಬ ಅವರ ಕನಸಿನ‌ ಶಾಲೆಗೆ ಪುಸ್ತಕ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಲಾಯಿತು. 

ಬೆಳ್ತಂಗಡಿಯ ಹರೇಕಳ ಹಾಜಬ್ಬ ಅಭಿನಂದನಾ ಸಮಿತಿಯ ನೇತೃತ್ವದಲ್ಲಿ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಬೆಳ್ತಂಗಡಿ ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.  

ಮಾನವ ರೂಪವೆತ್ತಿದ ಸರಳತೆ

ಸರಳತೆಯೇ ಮಾನವ ರೂಪವೆತ್ತಂತಿದ್ದರು ಹರೇಕಳ ಹಾಜಬ್ಬ. ಬಿಳಿಯ ಪಂಚೆ, ಬಿಳಿ ಅಂಗಿ, ಕೈಯಲ್ಲೊಂದು ಪುಟ್ಟ ಕರವಸ್ತ್ರ ಹಿಡಿದು ವೇಗದ ನಡಿಗೆಯ ಮೂಲಕ ವೇದಿಕೆಯ ಮುಂಭಾಗದಲ್ಲಿ ನಡೆದು ಬರುವಾಗ ಎಲ್ಲರ ಕಾತರದ ಕಣ್ಣುಗಳು ಅವರನ್ನೇ ದಿಟ್ಟಿಸುತ್ತಿದ್ದವು.‌ 

ವೇದಿಕೆಯಲ್ಲಿ ಆಸೀನರಾಗಿದ್ದ ಹಾಜಬ್ಬ ಅವರು ಪ್ರತಿಯೊಬ್ಬ ಗಣ್ಯರ ಮಾತುಗಳನ್ನು ಆಲಿಸುತ್ತಾ ಅವರನ್ನು ಅಭಿನಂದಿಸಿ ಪ್ರತಿ ಬಾರಿಯೂ ಎದ್ದು ನಿಂತು ಎರಡೂ ಕೈ ಜೋಡಿಸಿ ಸಭೆಗೆ ನಮಸ್ಕರಿಸುತ್ತಿದ್ದರು. ಮುಖ್ಯವಾಗಿ ಸಭಿಕರನ್ನಾಗಿ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿತ್ತು. ಶಿಕ್ಷಣ ದೊರಕದಿದ್ದರೂ ನಿರಂತರ ಪ್ರಯತ್ನದ ಮೂಲಕ ಶಾಲೆ ನಿರ್ಮಿಸಿದ ಅಕ್ಷರ ಸಂತ ಅಕ್ಷರ ಕಲಿತ ಮಕ್ಕಳಿಗೆ  ಪ್ರೇರಣೆಯಾಗಬೇಕು‌ ಎಂಬುದೇ ವಿದ್ಯಾರ್ಥಿಗಳನ್ನು ಸಭಿಕರನ್ನಾಗಿಸಿದ ಉದ್ದೇಶವಾಗಿತ್ತು.  ವಿದ್ಯಾರ್ಥಿಗಳು ಹಾಜಬ್ಬರ ಸರಳತೆ, ನಡವಳಿಕೆ ಮತ್ತು ಅಕ್ಷರ ಪ್ರೇಮವನ್ನು ಪ್ರತ್ಯಕ್ಷವಾಗಿ ಗಮನಿಸಬೇಕು ಎಂಬ ಸದುದ್ದೇಶ ಆಯೋಜಕರದ್ದಾಗಿತ್ತು.

"ಸಾಮಾನ್ಯನಾಗಿದ್ದ ನನ್ನನ್ನು ಗುರುತಿಸಿ ಗೌರವಿಸಿದ ಎಲ್ಲರನ್ನೂ ಸ್ಮರಿಸುತ್ತೇನೆ" ಎನ್ನುತ್ತ ಭೂಮಿ ಸ್ಪರ್ಶಿಸಿ ನಮಸ್ಕರಿಸಿದರು . ಅವರ ಕನಸಿನ ಶಿಕ್ಷಣ ಸಂಸ್ಥೆಗೆ ಅಗತ್ಯವಿರುವ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು.  ಈವೇಳೆ ನೆಲಕ್ಕೆ ಬಿದ್ದ ಆಟದ ವಸ್ತುವೊಂದನ್ನು ಅವರು ಸ್ವತಃ ಪ್ರೀತಿಯಿಂದ ಎತ್ತಿ ಕೈಯಲ್ಲಿ ಹಿಡಿದುಕೊಂಡದ್ದು ಹಾಜಬ್ಬರ ಮುಗ್ಧತೆಗೆ ಸಾಕ್ಷಿಯಾಯಿತು. 

ಹರೇಕಳ ಹಾಜಬ್ಬರನ್ನು ನೇರವಾಗಿ ನೋಡಿ, ಅವರ ಮಾತುಗಳನ್ನು ಕೇಳಿದ ಸಭಿಕರ ಮನಸಲ್ಲಿ ಧನ್ಯತಾ ಭಾವ, ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗುವ ಪ್ರೇರಣೆ ಹುಟ್ಟಿದ್ದಂತೂ ಸತ್ಯ.

ಸುಮಾ.ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...