Skip to main content

ನಾನು ಓದಿದ್ದು ಹೀಗೆ

ಹಾಸ್ಟೆಲ್ನಲ್ಲಿ ಸುಮ್ಮನೆ ಕೂತಿದ್ದಾಗ ಗೆಳತಿ ಮಧುರಾ ಮಂಜುನಾಥ ಕಾಮತ್ ಅವರು ಬರೆದ 'ಚಂದದ ಹಲ್ಲಿನ ಹುಡುಗಿ ಮತ್ತು 18 ಅವಳುಗಳ ಕತೆ' ಎನ್ನುವ ಪುಸ್ತಕ  ಕೈಗಿಟ್ಟು "ಸುಮಾ ಈ ಪುಸ್ತಕ ನಿನಗಾಗಿ, ಓದು ಎಂದಳು". ಪುಸ್ತಕದ ಮುಖಪುಟ ನೋಡುತ್ತಿದ್ದಂತೆ ತಲೆಕೆಳಗಾದೆ. ಆಕರ್ಷಕವಾಗಿತ್ತು. ಹೆಸರು ಓದಿದಾಗ ಇದೆಂತ ವಿಚಿತ್ರ ಹೆಸರಿನ ಪುಸ್ತಕ ಅನಿಸಿತು‌‌. ಪರಿವಿಡಿಗೆ ಹೋದಾಗ ಕೆಲವು ಸಣ್ಣಕತೆಗಳ ಗುಚ್ಛ ಇದು ಎನ್ನುವುದು ತಿಳಿದುಬಂತು.


ನಾನು ಸನ್ಯಾಸಿಯಾಗಲು ಹೊರಟಾಗ ಎಂಬ ಪುಸ್ತಕದ ಪ್ರಸ್ತಾಪದೊಂದಿಗೆ ದಿಗಂತನ  ಸಿನಿಮಾದ ಹಾಗಿರುವ ಈ ಕತೆಗಳು ನನ್ನನ್ನು ಸೆಳೆಯುತ್ತಾ ಸಾಗಿತು. ನಾನು ಪತ್ರಿಕೋದ್ಯಮ ಓದುತ್ತಿದ್ದೇನೆ ಕತೆ, ಕವಿತೆ, ಲೇಖನ ಮತ್ತು ನುಡಿಚಿತ್ರ ಬರೆಯಬೇಕು, ಅವು ಪತ್ರಿಕೆಯಲ್ಲಿ ಪ್ರಕಟವಾಗಬೇಕು ಎಂಬ ಆಸೆ ಹೊಂದಿದ್ದವನು ಎಂದು ಬರೆದಿತ್ತು. ಈ ಸಾಲುಗಳನ್ನು ಓದಿದ ಮೇಲಂತು ನಾನೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನನ್ನ ಆಸೆಗಳಿಗೆ ಸರಿಹೊಂದುವ ಮನೋಭಾವನೆಯನ್ನೇ ಈ ಪುಸ್ತಕವೂ ಹೊಂದಿದೆ ಎಂಬ ಹುಮ್ಮಸ್ಸಿನಲ್ಲಿ ಓದಲು ಶುರುವಿಟ್ಟೆ. ಮುನ್ನುಡಿಯೂ ಅವರದೇ ಇತ್ತು.

ಪರಿವಿಡಿ ತೆರೆದರೆ ಹದಿನೆಂಟು ಮೆಟ್ಟಿಲುಗಳು ಎಂದು ಹದಿನೆಂಟು ಹೆಸರು ಕಂಡಿತು. ಹಿಮಚಂದ್ರಿಕೆ, ಕಾಳಿಂಗ ಮರ್ದನ ಮತ್ತು ಹಲ್ನುಡಿ ವಿಶೇಷ ಎನಿಸಿತು. ಬಸ್ಸಿನ‌ ಕಂಡಕ್ಟರ್ ಮತ್ತು ಪಾಠಮಾಡುವ ಟೀಚರ್ ಹಾಗೂ ರೈಟರ್ ಗಳಿಗೆ ಅಷ್ಟು ಬೇಗ ಕಲ್ಯಾಣ ಭಾಗ್ಯವಿಲ್ಲ ಎಂಬ ಮಾತೊಂದು ಉಲ್ಲೇಖ ಮಾಡಿದ್ದನ್ನು ಕಂಡು ನನ್ನ ಸ್ಥಿತಿ ಏನಿರಬಹುದು ಎಂದು ಮನದಲ್ಲೇ ನಕ್ಕೆ. ಒಳ ನುಗ್ಗುತ್ತಿದ್ದಂತೆ ಸಾಲು ಸಾಲು ಪ್ರೇಮ ಪುರಾಣ. ಅದೆಷ್ಟು ಹುಡುಗಿಯರು ಜೀವನದಲ್ಲಿ ಇಣುಕಿ ಹೋದರೋ, ಅಂಗನವಾಡಿ ಟೀಚರ್ ಕತೆಯನ್ನು ಇದೆ ಸಾಲಿನಲ್ಲಿ ಸೇರಿಸಿದ್ದು ಚೂರು ಗೊಂದಲ ಎನಿಸಿತು‌.


ಬಸ್ಸಿನಲ್ಲಿ ತೋಳಮೇಲೆ ಒರಗಿದ ಕುವರಿ, ರಾತ್ರಿ ಹನ್ನೆರಡು ದಾಟಿದರೂ ಮುಗಿಯದ ಮಾತು. ಗೋವಾಕ್ಕೆ ಹೊರಟು ಕೇದಾರನಾಥ ತಲುಪಿದ ಕತೆ. ಹನಿಮೂನಿಗೆ ಬಂದಿದ್ದ ಶಿಮ್ಲಾ ಜೋಡಿಗಳ ಕತೆ, ತುಟಿಗುರುತು ಮೂಡಿದ ಪೇಪರ್ ಕಪ್ ಟೀ ಕತೆ, ಸಿಗಂದೂರಿನ ಅಪ್ಪೆಮಿಡಿಯ ಉಪ್ಪಿನಕಾಯಂತೆ ರುಚಿಯಾದ ಕತೆ,  ಮೂರು ಮಚ್ಚೆಯ ಹುಡುಗಿ ಹುಚ್ಚು ಹಿಡಿಸಿದ್ದು, ಕಡಲ ತೀರದ ಚಿಪ್ಪು, ನವಿಲು ಗರಿ ಕೊನೆಗೆ ಕೋಳಿ ಪುಕ್ಕವನ್ನು ಬಿಡದೆ ಒಪ್ಪಿಸಿದ್ದು, ಕಾಳಿಂಗ ಎಂಬ ಕರಿ ಬೈಕಿನ ಕತೆ, ಒಂದಕ್ಕಿಂತ ಒಂದು ಚಂದವಿತ್ತು. ಆದರೂ ಮೊದಲ ಮುತ್ತು ಎಂಬ ಕತೆಯ ಕುರಿತು ಆಲೋಚಿಸುವಂತಾಯಿತು. ಹತ್ತನೆ ಕ್ಲಾಸಿನ ಕ್ರಶ್ ಒಬ್ಬಳ ಕುರಿತು ಬರೆದು ಅವರಲ್ಲೇ ಈ ಪುಸ್ತಕದ ಮುನ್ನುಡಿ ಬರೆಯುವಂತೆ ಕೇಳಿದೆ ಎಂದಾಕ್ಷಣ. ಒಮ್ಮೆಲೆ ಕೊನೆ ಪುಟದಿಂದ ಮೊದಲ ಪುಟಕ್ಕೆ ಅವಳ ಹೆಸರು ತಿಳಿಯಲು ಪುಟ ತಿರುವಿಹಾಕದೆ ಇರಲು ಸಾಧ್ಯವಿಲ್ಲ. ಎಲ್ಲಾ ಓದುಗರು ಒಮ್ಮೆ ಪುಟತಿರುವುತ್ತಾರೆ. ಆದರೆ ಮುನ್ನುಡಿಯ ಬದಲು ಹಲ್ನುಡಿ ದೊರೆಯುವ ಮೋಜಿದೆ ನೀವು ಈ ಪುಸ್ತಕವನ್ನು ಒಂದೇ ದಿನದಲ್ಲಿ ಓದಬಲ್ಲಿರಿ.

ಸುಮಾ.ಕಂಚೀಪಾಲ್

Comments

Popular posts from this blog

ಅನು ಮದುವೆ ಶುರು

ಬೆಳ್ಳಂಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ ಸಿರಸಿಗೆ ಬಂದು ಇಳಿದಾಯ್ತು, "ನನ್ನ ಗೆಳತಿಯಾ ಮದುವೆ ಬಲು ಜೋರು ಜೋರು ಜೋರು" ಎನ್ನುತ್ತಾ ಮಡಗಾಂ ಬಸ್ ಹತ್ತಿ ಸೀದಾ ಹೆಗಡೆಕಟ್ಟೆಗೆ ಬಂದು ಇಳಿದೆ. ನಂತರ ಅಲ್ಲಿಂದ ಬಾಡಿಗೆ ಬೈಕು. ಗಂಟೆ ಏಳಾಗುವ ಮುನ್ನವೇ ನಾನು ಅವಳ ಮನೆ ತಲುಪಿದೆ. ಅಷ್ಟಕ್ಕೂ ಇಂದು ಅವಳ ಮದುವೆ ಅಲ್ಲ ನಾಂದಿ. ಅಪ್ಪಟ ಹಳ್ಳಿ ಶೈಲಿಯ ಮನೆ. ಮರದ ಮೆತ್ತು. ಮೀಯಲು ಬಿಸಿ ಬಿಸಿ ಹಂಡೆ ನೀರು.  ನಾನು ಜಾಕೀಟು, ಜರ್ಕೀನು, ಜೀನ್ಸು ಎನ್ನುತ್ತಾ ಬೆಂಗಳೂರು ವೇಷ ಕಳಚಿ ಸ್ನಾನ ಮಾಡಿ ಕೂಸಿನಿಂದ ಹೆಂಗಸಾಗತೊಡಗಿದೆ. ಹೊರಗಡೆ ಸಾಲು ಸಾಲು ಹಾಡು ಕೇಳುತ್ತಿತ್ತು. ಅಕ್ಷತೆ ಕಲಸುವುದು, ಆರತಿ ಮಾಡುವುದು, ಒನಕೆಯಲ್ಲಿ ಕುಟ್ಟುವುದು ಹೀಗೆ ಏನೇನೋ.. ನನಗೂ ಇಲ್ಲಿಯ ಶಾಸ್ತ್ರಕ್ಕೂ ಸಂಬಂಧವಿಲ್ಲ ಎಂದು ನಾನು ನನ್ನ ಪಾಡಿಗಿದ್ದೆ. ಯಾಕೆಂದರೆ ನನ್ನದು ಯಲ್ಲಾಪುರ. ಇವಳದು ಶಿರಸಿ.  ಇಷ್ಟೆಲ್ಲ ಆದಮೇಲೆ ಹಸಿರು ಶಿಗತೆ ಬಾಳೆಲೆಯಲ್ಲಿ ಅವಲಕ್ಕಿ ಉಪ್ಪಿಟ್ಟು ತಿಂದಾಯ್ತು. ಗೌಜಿ ಹೆಚ್ಚಾಯ್ತು, ತಯಾರಿ ಜೋರಾಯ್ತು.  ಸೀರೆ ಉಡುವ ಕೋಣೆಯೊಂದಾದೆ ಹದಾ ಬೆಳಕು ಬರುವಲ್ಲಿ ಮೇಕಪ್ಪು... ಎಲ್ಲರ ಕೈಯ್ಯಲ್ಲರಿಳದ ಮದರಂಗಿ, ಮದುಮಗಳು ನಿಧಾನಕ್ಕೆ ಮೌನ ತಾಳುತ್ತಿದ್ದಳು. ಈ ಸಂದರ್ಭದಲ್ಲಿ ನಾನು ನನ್ನ ಮದುವೆಯ ಹಿಂದಿನ ದಿನ ಏನೆಲ್ಲ ಆಗಿತ್ತು ಎಂಬುದನ್ನು ನೆನೆಯುತ್ತಾ ಬ್ಲಾಗ್ ಬರೆಯತೊಡಗಿದೆ.  ಅಬ್ಬರವ...

ಅನು ಮದುವೆ

ರಾತ್ರಿ ಪೂರ್ತಿ ಮಾತಾಡುತ್ತಲೇ ಕಳೆಯಿತು. ಕಣ್ಣು ಮುಚ್ಚುವುದರೊಳಗೆ ಬೆಳಗಾಯಿತು. ನಾವೊಂದು ಕಡೆ, ಅನು ಇನ್ನೊಂದು ಕಡೆ ಸೀರೆಯುಟ್ಟು, ನೆರಿಗೆ ಹಿಡಿದು ರೆಡಿಯಾಗುವ ಕೆಲಸ ನಡೆಯಿತು. ನಡುವೆ ನಡುಪಟ್ಟಿ, ಜಡೆಗೆ ಜಡೆಪಟ್ಟಿ, ಹಣೆಗೆ ಹಣೆಪಟ್ಟಿ ಎನ್ನುತ್ತಾ ಏನೊ ಹತ್ತಾರು ರೀತಿಯ ಅಲಂಕಾರ. ಕನ್ನಡಿಯ ಮುಂದೆ ನಿಂತು ಐ ಲೈನರ್ ಹಚ್ಚುವಾಗ ನನಗೆ ಹೆಣ್ಣಿಗೇಕೆ ಇಷ್ಟು ಅಲಂಕಾರ ಎಂಬ ಪ್ರಶ್ನೆ ಮೂಡಿತು.  ಜಡೆತುಂಬ ಮುಡಿದ ಮಲ್ಲಿಗೆ, ಹೆಂಗಸರೇ ಬೇಗ ಎದ್ದು ಬಣ್ಣ ಬಣ್ಣದ ಸೀರೆಗಳನ್ನುಟ್ಟು ಮೈತುಂಬಾ ಬಂಗಾರತೊಟ್ಟು ರೆಡಿ ಆಗಿದ್ದೇ, ಆಗಿದ್ದು ಅಷ್ಟೊತ್ತಿಗೆ ಜೀಪ್ ಬಂತು ಎಲ್ಲರೂ ಅದರೊಳಗಡೆ ಗಡಬಡೆಯಿಂದ ನುಸುಳಿದ್ದು, ನುಸುಳುವ ಮುನ್ನ ಒಂದಷ್ಟು ಪೋಟೋ. ಅದಾದಮೇಲೆ ನಾವು ಗೆಳತಿಯರದ್ದು ಹತ್ತಾರು ಪೋಸು. "ಬಿತ್ತಕ್ಕಿ ಬಟ್ಟಲೆಲ್ಲೇ ಅಕ್ಷತಾ...ಅಕ್ಷತಾ... ಅಕ್ಷತೆ ಎಲ್ಲಿ" ಎಂಬ ಕೂಗಾಟ ಜೀಪು ಹತ್ತಿದೆವೋ "ಅಯ್ಯೋ! ಜಡೆ ಜಾರ್ತು" ಎಂಬ ಅನುಷಾಳ ಅಳಲು.  ಆಮೇಲೆನೋ ಒಂದು ಮಾಡಿ ಆಯಿತು.‌ ಪಂಚಲಿಂಗ ದೇವಸ್ಥಾನ ಬಂತು. ನಾವೆಲ್ಲಾ ಬರೊಬ್ಬರಿ ಫೋಟೋ ತೆಗೆದುಕೊಂಡದ್ದಾಯ್ತು. ಜೊತೆಗೆ ನನಗೆ ಆಗಾಗ ನನ್ನವನ ನೆನಪು ಅದನ್ನೆಲ್ಲ ಮೆಲ್ಲುತ್ತಾ ಬ್ರೈಡ್ಸ್ ಮೇಡ್ ಅಂತಾರಲ್ಲಾ ಹಾಗೆ ಅವಳು ಹೋದಲೆಲ್ಲಾ ಹೋಗಿ ಕೇಳಿದ್ದೆಲ್ಲ ಕೈಗಿಡು ಕಾರ್ಯ ಸಾಗುತ್ತಿತ್ತು.  ನಾವೇ ಆ ಮೂವರು "ಅನು, ನಿಧಿ...

ಹೊಸ ಪಯಣ

ನಿಧಿಗೆ ಒಂದು ಒತ್ತಾಸೆ. ಅದೇನಂದ್ರೆ ಅವಳ ಎಂಗೇಜ್ಮೆಂಟ್‌ ಮತ್ತೆ ಮದುವೆಯ ಬಗ್ಗೆ ನಾನು ಬ್ಲಾಗ್‌ ಬರಿಬೇಕು ಅಂತ. ಬ್ಲಾಗೇನೋ ಬರಿತಿದ್ದೆ ಆದ್ರೆ ಅಪ್ಪನ ಅನಾರೋಗ್ಯದ ಕಾರಣ ಊರಲ್ಲೇ ಇದ್ರೂ ಅವಳ ಎಂಗೇಜ್ಮೆಂಟ್‌ಗೆ ನಾನು ಹೋಗೋಕೆ ಆಗ್ಲೇ ಇಲ್ಲ. ಹೀಗೆ ಮಧ್ಯಾಹ್ನ ಹೊತ್ತು ಖಾಲಿ ಕೂತಿದ್ದಾಗ ಒಂದು ಬ್ಲಾಗ್‌ ಬರೆಯೋಣ ಅನಿಸಿತು. ಅಲ್ಲಿಗೆ ಹೋಗದೇ ಇದ್ದರೂ ನಾನು ಅವಳನ್ನು ಕಂಡದ್ದು ಹೇಗೆ ಎಂದು ಬರಿತೀನಿ ನೋಡಿ.  ಯಾರೋ ತೀರಿಕೊಂಡ ಕಾರಣ ರವಿವಾರ ನಡೆಯಬೇಕಿದ್ದ ಎಂಗೇಜ್ಮೆಂಟ್‌ ಸೋಮವಾರ ನಡೆಯಿತು. ಒಂದು ಸಲ ಅಯ್ಯೋ ಎಂದೆನಿಸದರೂ ಸಹ ಅದರ ಮರುದಿನ ಅಂದರೆ ಸೋಮವಾರ ನಿಶ್ಚಿತಾರ್ಥ ಆಯ್ತು. ತಯಾರಿ ಆಗಿರಲಿಲ್ಲ ಎಂಬ ಮಾತಿಲ್ಲ ಯಾಕೆಂದರೆ ಒಂದು ದಿನ ಹೆಚ್ಚೇ ಸಮಯ ಸಿಕ್ಕಂತಾಗಿತ್ತು. ಕೊನೆ ಘಳಿಗೆಯಲ್ಲಾಗುವ ಗಡಿಬಿಡಿಯಂತು ಇದ್ದದ್ದೇ ಬಿಡಿ. ಅಣ್ಣ, ಅತ್ತಿಗೆ ಮುದ್ದಾದ ಸೊಸೆ  ಹೀಗೆ ಹತ್ತಿರದವರೆಲ್ಲ ಆಗಲೇ ಬಂದು ಸೇರಿದ್ದರು. ಗೆಳತಿಯರೇ ಸ್ವಲ್ಪ ಗೈರು ಹಾಜಾರಾದದ್ದು. ಆದರೆ ಬಾಲ್ಯದ ಗೆಳತಿ ಅನುಷಾ ಜೊತೆಯಲ್ಲೇ ಇದ್ದಳು. ಉಂಗುರ ಇಡಲು ಅಂದದೊಂದು ಸಿಂಗಾರ ಬಟ್ಟಲು ರೆಡಿ ಇತ್ತು. ಹುಡುಗನ ಪ್ರೆಂಡ್ಸ್‌ ತಮ್ಮ ಶಕ್ತಿ ಪ್ರದರ್ಶನ ತೋರಿದ್ದೂ ಹೌದು. ಅವರ ಮನೆ ಏನು ಇಲ್ಲಿಂದ ದೂರವೇನಲ್ಲ.  ಇನ್ನು ಆ ಕಡೆಯಿಂದಲೂ ಸುಮಾರು ಜನ ಬಂದಿದ್ದರು. ಮುದ್ದು ಸೊಸೆಯಂತು ಕೆಂಪಂಗಿಯಲ್ಲಿ ಗೊಂಬೆಯಂತೆ ಕಂಗೊಳಿಸುತ್ತಿದ...