Skip to main content

ಸಿದ್ಧಣ್ಣ

ಪಿಯಾನಿನ ಶಬ್ಧ ನಮ್ಮ‌ಮನೆ ಅಂಗಳದಲ್ಲಿ ಅದೂ ಮಟ ಮಟ ಮಧ್ಯಾನ್ಹ !!!! ಅರೆ ಎಂದು ನಿದ್ದೆಗಣ್ಣಲ್ಲಿ ಮೆಟ್ಟಿಲಿಳಿದೆ. ಕೊರಳತುಂಬ ರುದ್ರಾಕ್ಷಿ ಅದಕ್ಕೆ ಕೇಸರಿ ಗೊಂಡೆ ಬದಿಗೆ ಇಟ್ಟ ಒಂದು ಕರಿಯ ಕೋಲು ಒಂದು ಅಂಗಿ, ಲುಂಗಿ ತಲೆಗೆ ಕೇಸರಿಯ ಪೊಗಡಿಸುತ್ತಿದ್ದ, ಅತೀ ಕಪ್ಪನೆಯ ಬಣ್ಣದ ಮಣ್ಣು ಕಾಲು, ಬೆಂಡಾಗುತ್ತಿರುವ ಬೆರಳು ಕೆಟ್ಟು ಮುರುಟಿದ ಉಗುರು, ಬಗುಲಲ್ಲಿ ಅರಶಿನ ಬಣ್ಣದ ವಸ್ತ್ರದ ಚೀಲ ಹಳೇಯ ಹಳದಿ ಕೊಡೆ.
ಆ ನೀತಿ ಹಾಡುಗಳಲ್ಲಿ ಬೇರೆಯದೇ ಭಾವ, ಭಕ್ತಿ ಹಾಡುವವನಿಂದ ಕೇಳುಗನ ಕಿವಿಯಿಂದ ಮನಸಿನ ಆಳಕ್ಕೆ‌ ತೂರಿ ಬರುತ್ತದೆ. ಎಂತಹ ನಾಸ್ತಿಕನಿಗೂ ದೇವರ ಒಮ್ಮೆ ಕಣ್ಣೆದುರು ಬರುವಂತೆ ಮಾಡುವ ಶಕ್ತಿ ಆ ಸಿದ್ದಣ್ಣನ ಹಾಡಿಗಿದೆ.



ಹೊರಜಗುಲಿಯಲ್ಲಿ ಅದಾಗಲೇ ಸಿದ್ದಣ್ಣನ ಹಾಡು ಪ್ರಾರಂಭವಾಗಿತ್ತು. "ತೊಗಲ ನೆಚ್ಚಿ ಕೆಡಬೇಡಿರೋ..sss"  ಎಂದು. ನಾನೂ ಚಿಟ್ಟೆಯ ಒಂದು ತುದಿಯಲ್ಲಿ ಅಪ್ಪನ ಪಕ್ಕ ಕೂತು ಅವನನ್ನೇ ನೋಡುತ್ತ ಹಾಡನ್ನು ಆಲಿಸತೊಡಗಿದೆ. ಅಪ್ಪನಂತೂ ತೀರ ತಲ್ಲೀನನಾಗಿ ಕಣ್ಣು ಮುಚ್ಚಿ ಕೇಳುತ್ತಿದ್ದ. ಅಲ್ಲೆ ನನಗೆ ಸನ್ನೆ ಮಾಡಿದ ಮೊಬೈಲ್ ತಂದು ರೆಕಾರ್ಡ್ ಮಾಡು ಎಂದು. ನಾನು ಓಡಿಹೋಗಿ ನಾಲ್ಕನೇ ಸೆಕೆಂಡಿನೊಳಗೆ ರೆಕಾರ್ಡ್ಗೆ ಇಟ್ಟಿದ್ದೆ. ಆ ಹಾಡನ್ನು ನಿಮಗೂ ಕೇಳಿಸುವ ಆಸೆ ಇದೆ. ಹಾಡನ್ನು ಮುಗಿಸುವದರೊಳಗೆ ನಮ್ಮ ಮನೆಯ ನಾಯಿ ಬೆಕ್ಕು ಸಹ ಹೊರಜಗುಲಿಯಲ್ಲಿ ಮುದುರಿ ಕೂತಿದ್ದವು.

ಅಪ್ಪ ಪ್ರತಿವರ್ಷವೂ ಅವರಿಗಾಗಿ ಕಾಯುತ್ತಾನೆ. ಅವರು ವರ್ಷಕ್ಕೊಮ್ಮೆ ಬಂದೇ ಬರುತ್ತಾರೆ‌. ಕೇವಲ ಬೇಡಿಕೊಂಡು ತಿನ್ನುವ ಸಲುವಾಗಿ ಅಲ್ಲ. ತಲಾತಲಾಂತರದಿಂದ ಬಂದ ಹಾಡುವ ಪದ್ಧತಿಯನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಎಂದು ಅವರೇ ಹೆಳುತ್ತಾರೆ . ಅವರಿಗೂ ಸ್ವಂತ ಜಮೀನಿದೆ. ನನ್ನ ಮಕ್ಕಳು ಇದನ್ನು ಮಾಡುವುದಿಲ್ಲ. ನನಗೂ ಊರೂರು ತಿರುಗುವುದು ಬೇಡ ಎನ್ನುತ್ತಾರೆ. "ಆದರೆ ನನಗೆ ಈ ಪದ್ದತಿ ಕೊನೆಗೊಳ್ಳುವದನ್ನು ಸಹಿಸಲು ಆಗದೆ ಬರುತ್ತೇನೆ". ನನ್ನಲ್ಲಿ ದೇವರು ಎಷ್ಟು ದಿನ ತಿರುಗುವ ಶಕ್ತಿ ಕೊಡುತ್ತಾನೋ ಅಲ್ಲಿಯ ತನಕ. ಎಂದು ಕೈ ಮುಗಿದು, ಚೂರು ನೀರು ಕೊಡಿ ಎಂದವರೆ ಪಟ ಪಟ ಎಂದು ಮಾತು ಶುರು ಮಾಡುತ್ತಾರೆ.

ನಮ್ಮ ಹಳೆಯ ಮನೆ ಈಗಿನ ಮನೆಗಿಂತ ಸ್ವಲ್ಪ ಕೆಳಗಿತ್ತು. ಆಗ ನನಗೆ ಮೂರು ವರ್ಷ ಅದಕ್ಕಿಂಲು ಮುಂಚಿನಿಂದ ಅಂದರೆ ನನ್ನ ಅಜ್ಜನ ಅಪ್ಪ ಬದುಕಿರುವಾಗಿನಿಂದ ಬರುತ್ತಿದ್ದವರು ಇವರೆ ಎಂದು ಹಳೆಯ ನೆನಪುಗಳನ್ನು ಮಾತಿಗೆಳೆಯುತ್ತಾರೆ. ನಮ್ಮ ಹಳೇ  ಮನೆಯಲ್ಲೂ ಒಂದು ಪಿಯಾನೋ ಪೆಟ್ಟಿಗೆ ಇತ್ತಂತೆ. ಆಗಿನಿಂದ ನಮ್ಮ ಮನೆಯವರಿಗೆ ಯಕ್ಷಗಾನದ ಹುಚ್ಚು ಬಹಳವಿತ್ತು ಇಂದಿಗೂ ಇದೆ. ಅದರ ಜೊತೆ ಒಂದು ಮದ್ದಳೆಯೂ ಇತ್ತು. ಅದು ನನ್ನ ನೆನಪಿಗೆ ಬರುತ್ತದೆ ನಾನು ಏಳನೇ ತರಗತಿಯಲ್ಲಿರುವಾಗ ಒಮ್ಮೆ ಅಟ್ಟದಿಂದ ಬಿದ್ದು ಒಡೆದು ಹೋಗಿ ನನ್ನ ಅಜ್ಜ ಮರುಗಿದ್ದನ್ನು ಕಂಡಿದ್ದೇನೆ.

ಹಳೆಯ ಪತ್ರವ್ಯವಹಾರದಿಂದ ಕತೆ ಆರಂಭಗೊಂಡು, ಟೆಲಿಗ್ರಾಂ ಸುದ್ದಿಯಿಂದ ಬತ್ತದ ಬಿತ್ತನೆಯ ಬಗ್ಗೆ ಹಾಗೆ ಆರೋಗ, ಕೊರೊನಾ, ಲಾಕ್ ಡೌವ್ನ ಮದುವೆ, ಮುಂಡಗೋಡಿ ಬೆಟ್ಟಗಳು ಮತ್ತು ನಮ್ಮ ಕಡೆಗಿನ ಗದ್ದೆಯ ಪಕ್ಕದ ಮನೆಗಳು, ಕರಡಿಯೊಬ್ಬನ ಮೂಗು ಹರಿದ ಕತೆ ಎಂದೆಲ್ಲಾ ಗಡಿಯಾರ ಒಂದು ತನ್ನ ಮುಳ್ಳುಗಳಿಂದ ಪ್ರತೀ ಸಮಯವನ್ನು ಸೂಚಿಸುತ್ತಾ ತಿರುಗುವಂತೆ ಎಲ್ಲ ವಿಷಯಗಳ ಸುದ್ದಿಯಿಂದ ಪ್ರಸ್ತುತ ವರ್ತಮಾನದ ಮೊಬೈಲ್ ಬಳಕೆಯವರೆಗೆ ಬಂದು ಇನ್ನು ನನ್ನ ಸಮಯವಾಯಿತ್ತು.
"ಮುಂದಿನ ವರ್ಷವೂ ದೇವರು ಬರುವ ಶಕ್ತಿ ಕರುಣಿಸಿದರೆ ಮಾತ್ರ ಬರುತ್ತೇನೆ". ಎಂದು ಹೇಳುವಾಗ ಅವರ ವಯಸ್ಸಿನ ಹಳೆತನ ದನಿಯಲ್ಲಿ ಕೇಳುತ್ತಿತ್ತು. ಇಷ್ಟು ಹೇಳಿ ಅವರು ವಿರಮಿಸುತ್ತಾರೆ.

ಸುಮಾ.ಕಂಚೀಪಾಲ್ 

Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...