Skip to main content

ಎಲ್ಲರಲ್ಲೂ ಒಬ್ಬ ಕಳ್ಳ ಇದ್ದಾನೆ

ಎಲ್ಲರೊಳಗೂ ಒಬ್ಬ ಕಳ್ಳ ಇದ್ದಾನೆ
ಒಂದು ಸಿನೆಮಾ ನೋಡುತ್ತೇವೆ ಎಂದಾದರೆ ಅದರ ಬಗ್ಗೆ ಒಂದಿಷ್ಟಾದರೂ ತಿಳಿದುಕೊಂಡೇ ಹೋಗುತ್ತೇವೆ. ಅದು ಇದು ಮಾತಾಡಿಕೊಂಡು ನಾವೇ ಒಂದು ನಿರ್ಧಾರ ಮಾಡಿಕೊಂಡು ಹಾ, ಈ ಸಿನಿಮಾ ಹೀಗಿರಬಹುದು ಎಂದು ಊಹಿಸಿಕೊಳ್ಳುತ್ತೇವೆ. ಆ ಪೂರ್ವಾಗ್ರಹವನ್ನು ಬದಲಿಸಿಬಿಡುವಂತಹ ಒಂದು ಸಿನಿಮಾಕ್ಕೆ ಇನ್ನೊಂದು ಹೆಸರೇ 'ಕೋಟಿ'. ಕೆಲವರು ಡಾಲಿ ಧನಂಜಯ್, ಇನ್ನು ಕೆಲವರು ಪರಂ  ಹೆಸರು ಕೇಳಿಯೇ ಈ ಸಿನಿಮಾ ನೋಡಲು‌ ನಿಶ್ಚಯಿಸಲು ನಿರ್ಧರಿಸಿರಬಹುದು. ಹಾಗೆ ಹೋಗುವುದು ಕೂಡ ಒಂದು ಮಟ್ಟಿಗೆ ಸರಿಯೇ. ನಾನಂತೂ ಕೋಟಿ ಸಿನಿಮಾವನ್ನು ಥಿಯೇಟರ್‌‌ನಲ್ಲೇ ನೋಡಲು ನಮ್ಮೂರಿನವರೇ ಆದ ಪರಮೇಶ್ವರ್​ ಗುಂಡ್ಕಲ್ ನಿರ್ದೇಶನವೇ ಕಾರಣ ಅನ್ನೋದು ಮುಚ್ಚುಮರೆ ಇಲ್ಲದ ಸತ್ಯ.



ಈಗಂತೂ ಹಲವರು "ಬಿಡು, ಓಟಿಟಿಗೆ ಬಂದ ಮೇಲೆ ನೋಡಿದರಾಯ್ತು" ಎಂದು ಸುಮ್ಮನಾಗುತ್ತಾರೆ. ಕೆಲವು ಸಿನಿಮಾಗಳನ್ನು ನಾನು ಕೂಡ ಓಟಿಟಿಗೆ ಎಂದೇ ಮೀಸಲಿಡುತ್ತೇನೆ. ಆದರೆ ಈ ಚಿತ್ರ ನನಗೆ ಚೂರು ವಿಶೇಷವಾಗಿತ್ತು. ಚೂರು ಅಂದ್ರೇ ಚೂರೇ, ಹೆಚ್ಚೇನೂ ಇಲ್ಲ. ಹೌದು, ಆಮೇಲೆ ನಾನು ಇದನ್ನು ಅವರಿಗಾಗಿ ಅವರನ್ನು ಹೊಗಳುವುದಕ್ಕಾಗಿ ಬರೆಯುತ್ತಾ ಇದ್ದೇನೆ ಎಂದು ನೀವು ಅಂದುಕೊಳ್ಳಬಹುದು. ಆ ಅನಿವಾರ್ಯತೆಗಳೇನೂ ಸದ್ಯಕ್ಕಿಲ್ಲ.

ಸಿನಿಮಾ ನೋಡುವ ಮುನ್ನ ಕೆಲವರ ಬಾಯಲ್ಲಿ ಒಂದು ವಿಷಯವನ್ನು ಕೇಳಿ ಹೌದಾಗಿರಬಹುದು ಎಂದುಕೊಂಡಿದ್ದೆ. 'ಸಿನಿಮಾ ಸುಮಾರಾಗೇ ಇದೆ. ಆದರೆ ಪರಂ ಇರುವ ಕಾರಣ ಹಾಗೇ ಡಾಲಿ ಇರುವ ಕಾರಣ, ಎಲ್ಲರೂ ಹೊಗಳುತ್ತಿದ್ದಾರೆ' ಈ ಮಾತನ್ನು ನಮ್ಮಾಫೀಸಲ್ಲಿ ಸಹ ಕೇಳಿದ್ದಂತೂ ನಿಜ. ಬೇಡ ಬೇಡ ಎಂದರೂ ಬೇರೆಯವರ ಅಭಿಪ್ರಾಯ ಕೆಲವೊಮ್ಮೆ ನಮ್ಮ ಮೇಲೆ ಪ್ರಭಾವ ಬೀರುವುದು ಸಹಜ. ಆದರೂ ನನಗೆ ಥಿಯೇಟರ್​ಗೆ ಹೋಗಿ ನೋಡಲೇಬೇಕು ಎಂಬ ಹಂಬಲ. ಮತ್ತೊಂದಷ್ಟು ಕಾರಣ ಇದೆ ಅದನ್ನು ಕೊನೆಯಲ್ಲಿ ಹೇಳುತ್ತೇನೆ ಬಿಡಿ. 


ನಾನೇ ಸಿನಿಮಾದ ಹತ್ತಿರ ಹೋದೆ..

ಮನೆಗೆ ಹತ್ತಿರವೇ ಇರುವ 'ನವರಂಗ'ಕ್ಕೆ ಸಿನಿಮಾ ಶುರುವಾಗಲು ಇನ್ನೇನು ಎರಡೇ ಎರಡು ನಿಮಿಷ ಇರುವಾಗ ಹೋಗಿ ಕುಳಿತೆವು. ಸಿನಿಮಾ ಆರಂಭವಾಯ್ತು. ಯಾವ ಸೀಟಲ್ಲಾದ್ರೂ ಕೂರುವ ಸ್ವಾತಂತ್ರ್ಯ ಬಳಸಿಕೊಂಡೇ ಜನತಾ ಕಾಲನಿಗೆ ನಾವು ಲಗ್ಗೆಯಿಟ್ಟೆವು. ಹೀರೊನ ಪ್ರಾಮಾಣಿಕತೆ ಪದೇ ಪದೇ ಸಾಬೀತಾಗುತ್ತಲೇ ನಟ ರಾಕ್ಷಸ ಡಾಲಿಯ ಸೌಮ್ಯತೆ ಬರಸೆಳೆಯಿತು. ಅದರಲ್ಲೂ ನಮ್ಮೂರಿನ ಆಯಿಯೇ ಆದ ತಾರಾರಿಂದ ನಾನೇ ಸಿನಿಮಾದ ಹತ್ತಿರ ಹೋದೆ. 

ನಂತರ ಅಣ್ಣ, ತಮ್ಮ, ತಂಗಿ ಅಂತೆಲ್ಲಾ ಒಂದೊಂದು ಕಡೆ ಒಂಚೂರು ಎಳೆದ ಹಾಗೆ ಅನಿಸಿತು. ನನ್ನ ಅಕ್ಕಪಕ್ಕ ಕೂತವರೂ ಈ ಮಾತಿಗೆ ಹೂಗುಟ್ಟಿದರು. 


ಆಹಾ ವಿಲನ್​​! 
ದಿನೂ ಸಾವ್ಕಾರ್ ಎಂಟ್ರಿ ಆದಾಗಿನಿಂದ ಕೊನೆವರೆಗೆ ಅವರನ್ನೇ ನೋಡ್ತಾ ಇದ್ರೂ ಆದೀತು ಅನ್ನೊವಷ್ಟು ಮಸ್ತ್​​​ ಆಗಿತ್ತು ವಿಲನ್​ ಪಾತ್ರ. ನಿಜ ಹೇಳಬೇಕು ಅಂದ್ರೆ ಬೇರೆ ಸಿನಿಮಾಗಳಲ್ಲಿ ಹೀರೋ ಇಷ್ಟವಾದ್ರೆ ಕೋಟಿಯಲ್ಲಿ ನನಗೆ ವಿಲನ್ ಇಷ್ಟವಾದ್ರು. ಖಡಕ್ ಆಗಿ ಕ್ಯೂಟ್​ ಆಗಿಯೂ ಇದ್ರು. ಈ ಹುಡುಗಿಯರು ಎಲ್ಲದಕ್ಕೂ ಕ್ಯೂಟ್ ಅನ್ನೋ ಪದ ಬಳಕೆ ಮಾಡ್ತಾರೆ ಅಂತ ಮಾತ್ರ ಅಂದ್ಕೊಬೇಡಿ. 

ಒಂದು ಮುಖ ಇರುವವರು ಯಾವಾಗಲೂ ಒಂದೇ ಥರ ಇರ್ತಾರೆ. ಆದ್ರೆ ಈ ಎರಡು ಮುಖ ಇರುವ ಜನರ ಸಹವಾಸ ಒಳ್ಳೆಯದಲ್ಲ. 


ಫ್ಯಾಮಿಲಿ ನೋಡೋ ಸಿನಿಮಾ ಅಂದ್ರಲ್ವಾ? ಹಾಗಾದ್ರೆ ಏನಿತ್ತು? 
ಡಾಲಿಯನ್ನು ನೋಡಿದಾಗ ಒಮ್ಮೊಮ್ಮೆ ಅವರ ಅಸಹಾಯಕತೆ ತುಂಬಾ ನಮ್ಮನ್ನೂ ಕಾಡುತ್ತಿತ್ತು. ಇನ್ನು ಪಕ್ಕದಲ್ಲಿ ಕುಳಿತ ಒಬ್ಬ ಅಂಕಲ್, ಮನೆ ಪತ್ರ ಅಡ ಇಡುವ ಸಂದರ್ಭದಲ್ಲಿ ತಾಯಿ ಅರ್ಧ ರಾತ್ರಿಯಲ್ಲಿ ಎದ್ದು ಬೇಕಾದರೂ ಮಗನಿಗಾಗಿ ಹೆಬ್ಬೆಟ್ಟು ಒತ್ತುತಾಳಲ್ಲ ಎಂದು ಅತ್ತೇ ಬಿಟ್ರು. ಈ ತಾಯಿ ಸೆಂಟಿಮೆಂಟ್​ ತುಂಬಾ ಟಚ್​​ ಆಯ್ತು. ಇನ್ನು ಡಾಲಿಯನ್ನ ಹೇಗಾದರೂ ಮಾಡಿ ಸಿಕ್ಕಿ ಹಾಕಿಸಬೇಕು ಎಂದು ಮನೆಗೆ ಬಂದಾಗ ತಂಗಿಯ ತುಟಿಗೆ ಮುತ್ತಿಟ್ಟು ಅಲ್ಲಿಂದ ಓಡಿ ಹೋಗ್ತಾರಲ್ಲ, ಅದಂತೂ ಎಲ್ಲಾ ನಮ್ಮ ನಮ್ಮ ಮನೆಗಳನ್ನು ನೆನಪು ಮಾಡುವುದು ಖಂಡಿತ.


ಕ್ಲೂ ಸಿಕ್ತು!
ನೀವು ಈ ಸಿನಿಮಾ ಮುಂದೆ ಹೀಗೆ ಆಗುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ನಾವು ಅಂದುಕೊಳ್ಳುವುದು ಒಂದಾದ್ರೆ ಕಥೆ ಅಗುವ ದಾರಿಯೇ ಬೇರೆ. ನಾನು ಒಮ್ಮೆ ಸೀರಿಯಲ್ ಬರೆದಾಗ ಒಬ್ಬರು ಹೇಳಿದ್ದು ನೆನಪಾಯ್ತು. ನೋಡುಗರು ಹೀಗಾಗುತ್ತದೆ ಎಂದು ಊಹೆ ಮಾಡದ ಹಾಗೆ ನಾವು ಕಥೆ ಬರೆಯಬೇಕು. ಒಂದು ಸಮಸ್ಯೆ ಬಗೆಹರಿಯಿತು ಎಂಬಷ್ಟರಲ್ಲಿ ಊಹಿಸಲೂ ಸಾಧ್ಯವಾಗದ ಸಮಸ್ಯೆ ತಂದಿಡಬೇಕು. ಆಗಲೇ ಹುಟ್ಟುವುದು ಕೌತುಕ. 

ಒಮ್ಮೆ ಕಾರ್ ಕಳುವು, ಒಮ್ಮೆ ಅಮ್ಮನಿಗೆ ತೊಂದರೆ, ಇನ್ನೊಮ್ಮೆ ಕಳ್ಳತನದ ಆರೋಪ, ಮತ್ತೊಮ್ಮೆ ಕೌಟುಂಬಿಕ ಸಮಸ್ಯೆ, ಲೈಟಾಗಿ ಲವ್ ಫೇಲ್ಯುರ್.​. ಒಂದಾದ ಮೇಲೆ ಒಂದು ಒಟ್ಟಿನಲ್ಲಿ ಹೀರೋಗೆ ಕೊನೆವರೆಗೂ ಒಳ್ಳೆದೇನೂ ಆಗೋದೇ ಇಲ್ಲ ಎಂದು ಪ್ರೇಕ್ಷಕರು ಒಂದು ನಿರ್ಧಾರಕ್ಕೆ ಬಂದಾಗಲೇ ಸಿಗುವುದು ರೋಚಕ ತಿರುವು. ಆದರೆ ಸಿನಿಮಾದಲ್ಲಿ, ಅದರಲ್ಲೂ ಸೆಕೆಂಡ್​ ಹಾಫ್​​ನಲ್ಲಿ ನೀವು ಕಣ್ಣು ಮಿಟುಕಿಸದೇ ಸಿನಿಮಾ ನೋಡಬಹುದು. 

ವಿಜ್ಯೂವಲ್ ಟ್ರೀಟ್​ - ಕ್ಯಾಮರಾ - ರಿಚ್​ನೆಸ್ ಹೀಗೆಲ್ಲಾ ಅಂತಾರಲ್ಲ
ಇದರ ಬಗ್ಗೆ ನನಗೆ ಹುಡುಗರಷ್ಟು ಹೇಳೋಕೆ ಬರೋದಿಲ್ಲ. ಆದ್ರೂ ಹೇಳ್ತಿನಿ, ಈ ಸಿನಿಮಾದ ಕೆಲವೊಂದಷ್ಟು ಫ್ರೇಮ್​​ ತುಂಬಾ ಚೆನ್ನಾಗಿದೆ. ಅದರಲ್ಲೂ ಮುಖ್ಯವಾಗಿ ಹೀರೋ ಹಾಗೂ ವಿಲನ್ ಮುಖಾಮುಖಿ ಆಗುವ ಸಂದರ್ಭಗಳಲ್ಲಿ, ಹಾಗೂ ಹೀರೋ - ಹಿರೋಯಿನ್ ಮುಖಾಮುಖಿ ಆದಾಗ. ಇನ್ನೊಂದು ಜಾತ್ರೆಯ ಸೀನ್ ಇವುಗಳಲ್ಲಿ ತುಂಬಾ ಚೆನ್ನಾಗಿದೆ. ಹಲವು ಕಟ್ ಶಾಟ್​ಗಳಿದೆ. ಅಂದರೆ ನನ್ನ ಪ್ರಕಾರ ಒಂದು 5 ಸೆಕೆಂಡುಗಳ ಒಳಗಾಗಿ ಮೂರು ಬೇರೆ ಬೇರೆ ಫ್ರೇಮ್ ಬರುತ್ತದೆ. ಉದಾಹರಣೆಗೆ - ಜಾತ್ರೆಯಲ್ಲಿ ಮುದ್ದು ಮಗುವಿನ ಮುಖ, ತಕ್ಷಣ ಬೆಂಕಿ ಉಗುಳುವ ಹುಲಿವೇಷ, ಇನ್ನೊಮ್ಮೆ ನೃತ್ಯ - ನವಿಲುಗರಿ ಹೀಗೆ.. ತಕ್ಷಣಕ್ಕೆ ನೆನಪಾಗುತ್ತಾ ಇದೆ. ಇವುಗಳನ್ನು ಬಿಟ್ಟು ಇನ್ನೂ ಹಲವು ಅಲ್ಲಲ್ಲಿ ಹರಡಿಕೊಂಡಿವೆ. ಸಿನಿಮಾ ತಯಾರಿಯಲ್ಲಿ ತುಂಬಾ ಎಫರ್ಟ್​ ಕೆಲಸ ಮಾಡಿದೆ. ಎಡಿಟಿಂಗ್ ಹಾಗೂ ಆ ಡಿಟೇಲಿಂಗ್​​ ಅಷ್ಟು ಅಂದವಾಗಿ ಮೂಡಿಬಂದಿದೆ. 

ಕಥೆಯ ಕೊನೆ ತಿರುವು ರೋಚಕ
ನನಗೆ ಖುಷಿ ಆದಾಗ, ಬೇಜಾರಾದಾಗ, ತುಂಬಾ ಭಯ ಆದಾಗ ನನ್ನ ಕಾಲುಗಳು ಕುಣಿಯುತ್ತವೆ. ಈ ಸಿನಿಮಾ ಹೀರೋಯಿನ್​ಗೆ ಒಂದು ಖಾಯಿಲೆ ಇದೆ. ಬಿಕ್ಕಳಿಕೆ ಬರೋದು, ಬಂದಾಗ ಕದಿಯೋದು. ಅದೇ ರೀತಿ ನನಗೆ ಕಾಲನ್ನು ಸೆಕೆಂಡಿಗೆರಡು ಬಾರಿ ಕಟಕಟ ಅಂತ ಅಲ್ಲಾಡಿಸುತ್ತಾ ಕುಳಿತುಕೊಳ್ಳುವ ಒಂದು ಖಾಯಿಲೆಯೋ ಅಭ್ಯಾಸವೋ ಏನೋ ಒಂದು ಇದೆ. ಅದು ನನಗೆ ಗೊತ್ತಾಗದೇ ಆಗುವುದು. ಆ ಅನುಭವ ನನಗೆ ಈ ಚಿತ್ರದ ಕೊನೆಯಲ್ಲಿ ಆಗಿದ್ದಂತೂ ನಿಜ.

ಹುಲಿ ಕುಣಿತ
ನನಗೆ ಮೊದಲೇ ಒಂದು ಅಂದಾಜಾಗಿತ್ತು. ಇವಳು ಬಿಕ್ಕಳಿಗೆ ಬಂದಾಗ ಕದಿತಾಳೆ. ಹೀರೋ ತಮ್ಮ ಚಕ್ಕುಲಿಯನ್ನು ಅರ್ಧ ಸುತ್ತು ಮುರಿದಿಟ್ಟು ಲೆಕ್ಕ ತಪ್ಪದ ಹಾಗೆ ನೋಡಿಕೊಂಡು ತಿನ್ನುತ್ತಾನೆ ಎಂದಾಗ ಇವನು ಕಳ್ಳತನ ಮಾಡಲು ಇವರಿಬ್ಬರನ್ನೇ ತನ್ನ ಜೊತೆಗೂಡಿಸಿಕೊಳ್ಳುತ್ತಾನೆ ಎಂದು. ಕೊನೆಗೂ ಅದು ಹಾಗೇ ಆಯ್ತು. ಹುಲಿ ವೇಷ ಹಾಕಿಕೊಂಡು ಹೋಗುವಾಗ ಒಂದು ಮರ ಕತ್ತರಿಸುವ ಯಂತ್ರ ಕಾಣಿಸುತ್ತಾರೆ. ಆಗ ನಾವೆಲ್ಲ ಅಂದುಕೊಂಡೆವು, ಸಾಹುಕಾರನ ಕೊಲೆ ಮಾಡಿಯೇ ಇವರು ಬರೋದು ಎಂದು. 

ಆಗ ಮಾತಾಡಿದ್ದೂ ಇದೆ. ಇವರು ಕಥೆನಾ ಹೀಗೆ ಯಾಕೆ ಮಾಡಿದ್ರು, ಕೊಲ್ತಾರೆ ಅಂತ. ನಮಗೆ ಮೊದಲೇ ಗೊತ್ತಾಗೋತರ ಆಯ್ತು ಅಂತ. ಆದರೆ ಹಾಗೆ ಆಗಲೇ ಇಲ್ಲ. ಇದನ್ನೇ ನಾನು ನಿಜಕ್ಕೂ ಹೆಚ್ಚು ಇಷ್ಟಪಟ್ಟಿದ್ದು. ಕೆಲವನ್ನು ಊಹಿಸಿದ್ದೆ ಆದರೆ ಊಹಿಸದ ತಿರುವುಗಳು ಇದರಲ್ಲಿ ಹೆಚ್ಚಾಗೇ ಕಂಡವು. ನಂತರ ಅವರು ಕನ್ನ ಹಾಕಿ ಹಣ ತಂದು ಅದೇ ಹಣವನ್ನು ಮತ್ತೆ ಸಾಹುಕಾರನಿಗೆ ಕೊಡುವ ಮತ್ತು ಕೆನ್ನೆಗೆ ಹೊಡೆಯುವ ಮೂಲಕ ಸಿನಿಮಾ ಕೊನೆ ಆಗುತ್ತದೆ. 


ನೀವೂ ಒಮ್ಮೆ ಸಿನಿಮಾ ನೋಡಿ,
ನೋಡಿದ್ದರೆ ಹೇಗಿತ್ತು ಎಂದು ಕಮೆಂಟ್ ಮಾಡಿ

ಸುಮಾ. ಕಂಚೀಪಾಲ್​

Comments

Popular posts from this blog

ನಮ್ಮ ಕೇರಿ

ಊರು ಕೇರಿಯವರು ಅಡಿಕೆ ಕೊಯ್ಲು ಬಂದರೆ ತುಂಬಾ ಬ್ಯೂಸಿ ಆಗಿ ಬಿಡುತ್ತಾರೆ. ಹೀಗೇ ಉಳಿದ ದಿನಗಳಲ್ಲಿ ಬಿಡುವಿದೆ ಎಂಬ ಅರ್ಥ ಈ ಮಾತಿನದ್ದಲ್ಲ. ಅವರು ಯಾವಾಗಲೂ ಪುರುಸೊತ್ತಿಲ್ಲದ ಜೇನಿನಂತೆ ಕೆಲಸ ಮಾಡುವ ಜನ. ಚಳಿ ಆರಂಭ ಆಗ್ತಾ ಇದ್ಹಾಗೆ ಅಡಿಕೆ ಕೊಯ್ಲು ಶುರುವಾಗಿ ಬಿಡುತ್ತೆ. ಆಗ ಹೆಂಗಸರಿಗೂ, ಗಂಡಸರಿಗೂ ಬಿಡುವಿಲ್ಲದ ಕೆಲಸ.  ನಮ್ಮಲ್ಲಿ ಗಂಡು ಮೇಲೋ ಹೆಣ್ಣು ಮೇಲೋ ಎಂಬ ಮಾತೇ ಬರೋದಿಲ್ಲ. ಎಲ್ಲ ಕೆಲಸಗಳನ್ನು ಎಲ್ಲರೂ ಸಮನಾಗಿ ಮಾಡುತ್ತಾರೆ. ಅಡಿಕೆ ಕುಯ್ಯುವ ಆ ದಿನವನ್ನು ಗಂಡಸರು ನಿಭಾಯಿಸಿದರೆ, ಆಳುಗಳಿಗೆ ಮಜ್ಜಿಗೆ ಬೆಲ್ಲವನ್ನೋ, ಚಹಾವನ್ನು ಮಾಡಿ, ತೆರಿ ಅಡಿಕೆ ಹೆಕ್ಕಿ ಅದೂ ಇದೂ ಅಂತ ಲೆಕ್ಕಕ್ಕೇ ಸಿಗದ ನೂರು ಕೆಲಸವನ್ನು ಹೆಂಗಸರೇ ಮಾಡುತ್ತಾರೆ. ಅಷ್ಟೇ ಯಾಕೆ ಅಡಿಕೆ ಹೋರಲು ಜನ ಸಿಗಲಿಲ್ಲ ಎಂದರೆ ಇವರು ಅದಕ್ಕೂ ಸೈ.  ಇನ್ನು ಸಂಜೆಯಾಗುತ್ತಿದ್ದಂತೆ ಊಟಕ್ಕೆ ತಯಾರಿ ಆಗೇ ಬಿಡಬೇಕು. ಯಾಕೆಂದರೆ ಮುರಿಯಾಳಿನ ಪ್ರಕಾರ ಒಬ್ಬರ ಮನೆ ಅಡಿಕೆಯನ್ನು ಇನ್ನೊಬ್ಬರು ಸುಲಿಯಬೇಕಲ್ಲ. ಅದೇ ಹಿಂದಿನಿಂದಲೂ ಬಂದ ಪದ್ದತಿ. ಹಾಗೆನ್ನುವುದಕ್ಕಿಂತ ನಮ್ಮ ಕೇರಿಯ ಒಗ್ಗಟ್ಟು ಎನ್ನಬಹುದು. ಏನೇ ಕಾರ್ಯಕ್ರಮ ಇರಲಿ ಅಥವಾ ಹತ್ತು ಜನ ಕೂಡುವ ಶುಭಕಾರ್ಯ ಇರಲಿ ಚಪ್ಪರ ಹಾಕುವುದರಿಂದ ಬಾಳೆಲೆಕೊಯ್ದು, ಬಂದವರಿಗೆ ಬಡಿಸುವವರೆಗೂ ಕೇರಿಯವರೇ ನೋಡಿಕೊಳ್ಳುತ್ತಾರೆ.  ಕೇರಿಯ ಪ್ರೀತಿಯ ಚಿಕ್ಕಪ್ಪ, ಚಿಕ್ಕಮ್ಮಂದಿರು ಎಲ್ಲಾ ಮಕ್ಕಳಿ

ಮೆಜೆಸ್ಟಿಕ್

ನಾನು ಇವನು ಹೈದರಾಬಾದ್‌ಗೆ ಹೋಗೋದು ಅಂತ ನಿರ್ಧಾರ ಮಾಡಿ ಮನೆಯಲ್ಲೇ ಊಟ ಮುಗಿಸಿ ಹೊರಟೆವು. ಕುವೆಂಪು ಮೆಟ್ರೋ ಸ್ಟೇಷನ್‌ನಿಂದ ಸೀದಾ ಬಂದು ಇಳಿದದ್ದು ಮೆಜೆಸ್ಟಿಕ್‌ಗೆ. ನಾನು ಸ್ವಲ್ಪ ಕತ್ತಲಾಗಿ ಬೀದಿ ದೀಪಗಳು ಉರಿಯಲು ಶುರುವಾದರೆ ಸಾಕು ಹೆದರಿ ಸಾಯುತ್ತೇನೆ. ನನ್ನನ್ನು ಸಮಾಧಾನ ಮಾಡಿ ಬ್ಯಾಗಿನ ಜೊತೆ ಕೈ ಹಿಡಿದು ಬೇರೆ ಊರು ತಲುಪುವುದು ಎಂದರೆ ಇವನಿಗೆಷ್ಟು ಕಷ್ಟ ಇರಬಹುದು ಎಂದು ನಾನು ಆಗಾಗ ಯೋಚಿಸುತ್ತೇನೆ. ಆದರೂ ನಮಗೇನಾದ್ರೂ ಆದ್ರೆ? ಕಳ್ಳ ಬಂದ್ರೆ? ನಾನು ಕಳೆದೇ ಹೋದ್ರೆ ಎಂದು ಏನೇನೋ ಮಳ್ಳು ಹಲುಬುತ್ತ ಸಾಗುತ್ತೇನೆ. ಇವನಿಗೆ ಇರುವಷ್ಟು ಸಹನೆ ಯಾರಿಗೂ ಇಲ್ಲ, ಅದಂತೂ ನಿಜ ಎಂದು ನನಗೆ ನಾನೇ ಹಲುಬಿಕೊಂಡು ಅವನ ಹಿಂದೆ ಸಾಗುತ್ತೇನೆ.  ಚಿತ್ರ: ಮೆಜೆಸ್ಟಿಕ್ ಪ್ಲಾಟ್‌ಫಾ ರ್ಮ್ ನಂಬರ್ 16 ಕೆಂಪು, ಬಿಳಿ, ನೀಲಿ ಬಸ್ಸುಗಳ ಸಾಲು. ಏ ಇಲ್ ನೋಡೇ, ಹಿಂದಿನ ಸಲ ನಾವು ಬಸ್ ಹತ್ತಿದ್ದು ಇಲ್ಲೆಯ ನೆನಪಿದ್ದಾ ನಿನಗೆ? ಎಂದು ಉಮೇದಿಯಿಂದ ಇವ ಒಂಚೂರು ನನ್ನ ಕೈ ಬಿಟ್ಟು ಮುಂದೆ ಸಾಗಿದರೆ ನಾನು ನಿಂತಲ್ಲೇ ಬಾಕಿ. ಯಾಕೆಂದು ನನಗೂ ಗೊತ್ತಿಲ್ಲ. ಆಮೇಲೆ ನನ್ನಿಂದ ಉತ್ತರ ಬರದೇ ಇದ್ದಾಗ ಅವ ಮತ್ತೆ ತಲೆಮೇಲೆ ಕೈ ಹೊತ್ತು ನಾನಿದ್ದಲ್ಲಿ ಬರುತ್ತಾನೆ.  ಅವನಿಗೆ ಎಲ್ಲ ಜನರನ್ನು, ಎಲ್ಲ ಊರುಗಳ ಹೆಸರನ್ನು ಹಾಗೇ ಕೆ. ಆರ್ ಮಾರ್ಕೇಟಿಗೆ ಹೋಗಲು ಬಂದಿಳಿದ ಫ್ರೆಷ್ ಪುದಿನಾ ಎಲೆಗಳ ಗಂಟನ್ನೂ; ಎಲ್ಲವನ್ನೂ ಮಾತಾಡಿಸಬೇಕು. ನನಗೆ ಜನರನ್ನು ಕಂಡೇ ಭಯ