Skip to main content

ಬೆಂಗಳೂರು ಬದುಕು

ಬೆಂಗಳೂರಿಗೆ ಬಂದು ಏಳು ತಿಂಗಳಾಯ್ತು ಆದರೆ ಬ್ಲಾಗ್ ಬರೆಯದೆಯೂ 7 ತಿಂಗಳಾಯ್ತು. ಆಗಾಗ ಬರಿಯಲು ಮನಸಾದರು ಸಮಯ ಸಿಗುತ್ತಿರಲಿಲ್ಲ. ಯಾರ್ಯಾರೋ ಬರೆಯಲು ಹೇಳಿದ ಕಥೆ, ಚುಟುಕು ಹಾಗೂ ಒಂದು ಪ್ರಬಂಧ ಇದ್ಯಾವುದಕ್ಕೂ ಕೈ ಹಾಕಲು ನನ್ನಿಂದ ಸಾಧ್ಯವಾಗಲಿಲ್ಲ.

ಸಮಾಧಾನ ಕೊಡುವ ಕೆಲವು ವಿಷಯಗಳಿವೆ ಅವನ್ನು ಆಗಾಗ ಮಾಡದಿದ್ದರೆ ತಲೆ ಕೆಟ್ಟು ಬಿಡುತ್ತೆ. ಚಿತ್ರಬಿಡಿಸೋದು,ಅನಿಸಿದ್ದನ್ನು ಬರೆಯೋದು, ಒಳ್ಳೆ ಭಾವಗೀತೆ ಕೇಳೋದು ಇವುಗಳಲ್ಲಿ ಯಾವುದಾದರೊಂದನ್ನು ಮಾಡಲೇ ಬೇಕು. ಕೆಲಸಕ್ಕೆ ಸೇರಿದಾಗಿನಿಂದ ಸುದ್ದಿಗಳನ್ನು ನಿತ್ಯವು ಬರೆದು ಬರೆದು ಬೇಸತ್ತು ಹೋದ ಮೇಲೆ ಮತ್ತೆ ಮನೆಗೆ ಬಂದು ಏನನ್ನಾದರು ಬರೆಯಬೇಕು ಅಂತ ಅನಿಸಿದರೂ ಒತ್ತಾಯವಾಗಿ ಬರೆಯಲು ಆಗುತ್ತಿರಲಿಲ್ಲ.



ಇಂದು ಅದ್ಯಾಕೋ ಬರೆಯುವ ಮನಸಾಯ್ತು. ಎಷ್ಟು ಜನ 7 ತಿಂಗಳಾದಮೇಲೂ ನನ್ನ ಬರಹವನ್ನು ಓದಬಹುದು ಎಂಬ ಕುತೂಹಲವೂ ಇತ್ತು ಅದಕ್ಕಾಗಿಯೇ ಬರೆಯುತ್ತಿದ್ದೇನೆ. ಹೀಗೆ ಸಾಯಂಕಾಲ BMTC ಬಸ್ ಹತ್ತಿ ಸೀಟು ಸಿಕ್ಕಿತು ಎನ್ನುವಷ್ಟರಲ್ಲಿ ಯಾರೋ ಒಬ್ಬರು ಬಂದು ಎಬ್ಬಿಸಿ ಭಾರದ ಲ್ಯಾಪ್ ಟಾಪ್, ಊಟದ ಡಬ್ಬಿಯನ್ನೆಲ್ಲಾ ಕಂಕುಳಲ್ಲಿ ಸಿಕ್ಕಿಸಿ ಭುಜ ನೋವಿಂದ ಬಳಲಿ ನಿಂತು ಮನೆ ಸೇರಲು ಮುಕ್ಕಾಲು ಗಂಟೆ ಬೇಕು. ಅದಾದ ನಂತರ ಸ್ನಾನ, ಅಡಿಗೆ, ನಾಳಿನ ಪಾಲಿಗೆ ಬುತ್ತಿ ಇಷ್ಟು ಮಾಡುವುದೇ ಪ್ರತಿನಿತ್ಯದ ಕಾಯಕ. ಹಗಲು ರಾತ್ರಿ, ಒಬ್ಬಂಟಿಯಾಗಿ ದಿನ ರಾತ್ರಿಯೂ ಕಿಟಕಿಯಿಂದ ಗೋಡೆ ಮೇಲೆ ಬೀಳುವ ತೆಂಗಿನ ಗರಿ ನೆರಳನ್ನು ಎಣಿಸುತ್ತಾ ನಿದ್ರೆ ಹೋಗುತ್ತೇನೆ.



ಬೆಳಗಾದಾಗ ಎಷ್ಟು ಅಸಹನೆ ಎಂದರೆ ಮತ್ತದೇ ಬಸ್ ಹಿಡಿದು ಓಡಬೇಕಲ್ಲಾ, ಪ್ರತಿನಿತ್ಯವೂ ಈ ಬ್ಯಾಚುಲರ್ ಪಲಾವ್ ತಿಂದು ಬಾಯಿಗೂ ಬೇಜಾರು ಬಂದು ಒಂದಿನ ಹೊರಗೆ ತಿಂದರೂ ಸಾಕು ಈ ಬೆಂಗಳೂರಿನ ಗುಣಕ್ಕೆ ಆರೋಗ್ಯ ಹದಗೆಡುವುದು ಪಕ್ಕಾ, ಆಮೇಲೆ ನನ್ನನ್ನು ನಾನೇ ನೋಡಿಕೊಳ್ಳಬೇಕು. ಇಲ್ಲ ಮನೆಗೆ ಪೋನು ಮಾಡಿ ಅಪಾ,,,, ಅಮಾ,,, ಎಂದು ಅವರೆದುರು ಅಳಬೇಕು.



ಇನ್ನು ನನ್ನ ಸ್ನೇಹಿತರನ್ನು ಮಾತಾಡಿಸಿದರೂ ಅಷ್ಟೆ ಕೆಲಸ ಪರ್ವಾಗಿಲ್ಲ ಬೆಂಗಳೂರು ಸಾಕಾಯ್ತು ಅನ್ತಾರೆ. ನಾವೆ ಇಷ್ಟ ಪಟ್ಟು ಇಲ್ಲಿಗೆ ಬಂದದ್ದು ಅಂದ ಮೇಲೆ ಬೆಂಗಳೂರನ್ನು ದೂರಿ ಪ್ರಯೋಜನವಿಲ್ಲ. ಆಗಾಗ ಒಂದಿಷ್ಟು ಅಪ್ಪೆಹುಳಿ ಮಾಡಿಕೊಂಡು ಉಂಡರೆ ಅದೇ ಸ್ವರ್ಗ ಸುಖ.

ಹವ್ಯಾಸಕ್ಕೆ ನಾವೇ ಸಮಯ ಮಾಡಿಕೊಂಡರೆ ಮಾತ್ರ ಇಲ್ಲಿ ಜಾಗ. ಮೊದಲಿನಂತೆ ಮನಸು ಬಂದಾಗ ಏನನ್ನೂ ಬರೆಯೋಕೆ ಇಲ್ಲಿ ಸಾಧ್ಯವಿಲ್ಲ ಎಂಬುದಂತು ನಿಕ್ಕಿಯಾಗಿದೆ. ಇವಿಷ್ಟು ಗೋಳಾದರೆ ಇನ್ನೂ ಕೆಲವು ಖುಷಿ ಸಂಗತಿಯೂ ಇದೆ. ಮೊದಲು ಕಹಿ ಆಮೇಲೆ ಸಿಹಿ ಎಂಬಂತೆ



ನನ್ನಿಷ್ಟಕ್ಕೆ ಬೇಕೆನಿಸಿದ್ದು ಖರೀದಿಸುವಷ್ಟು ಸ್ವಂತ ಎಂಬ ಭಾವನೆ. ನನ್ನದೇ ತಿಂಗಳ ತುದಿಯ ಸಂಬಳ. ಒಂದು ಪುಟ್ಟ ಗೂಡು ಮನೆಯಿಂದ ತಂದು ನೆಟ್ಟ ಗಿಡ, ಗೆಳತಿ ಉಡುಗೊರೆ ನೀಡಿದ ನೀರಲ್ಲಿ ಬೆಳೆಯುವ ಗಿಡ, ಇಷ್ಟದ ಟೆರೆಸ್, ಆಫೀಸ್ನಲ್ಲಿ ಖಾಸಾ ಎನಿಸುವ ಜನ, ಶಾಂತವಾದ ರಸ್ತೆ,ರಾತ್ರಿ ವಾಕಿಂಗ್, ಇಷ್ಟದ ಅಂಗಿ, ಪ್ಯಾಂಟೂ, ಮೆಟ್ರೊ, ಮಾಲು, ಜೊಮೆಟೊ, ಆಗಾಗ ಸಿನಿಮಾ, ಗೆಳತಿಯರೊಟ್ಟಿಗೆ ಶಾಪಿಂಗ್, ಇದು ಇಲ್ಲಿನ ಮಜಾ,



ಹಾ, ಮತ್ತೂ ಒಂದು ದೊಡ್ಡ ಖುಷಿ - ಮುಂದಿನ‌ ತಿಂಗಳು ತಿಳಿಸ್ತೀನಿ


ನಾನು -ಸುಮಾ.ಕಂಚೀಪಾಲ್ (ಸುಕಂ ಬ್ಲಾಗ್ ಓದುತ್ತಿರಿ) 

Comments

  1. ಬಹಳ ದಿನಗಳ ನಂತರ ಬರಹ ಓದಿ ಖುಷಿ ಆಯ್ತು. ಆವಾಗ್ ಆವಾಗ ಈ ಖುಷಿನಾ ಕೊಡ್ತಾ ಇರಿ.

    ReplyDelete
  2. ಖಂಡಿತವಾಗಿ,, ಧನ್ಯವಾದ

    ReplyDelete
  3. ಓದಿ ತುಂಬಾ ಖುಷಿಯಾಯ್ತು

    ReplyDelete

Post a Comment

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...