ದೀಪ ಎನ್ನುವುದು ಕೇವಲ ಬತ್ತಿ ಹೊತ್ತಿಸಿ ಉರಿವ ಬೆಂಕಿಯ ಬೆಳಕಲ್ಲ . ಇದು ಹಲವು ಧನಾತ್ಮಕ ಅಂಶಗಳ ಸಂಕೇತ , ಅಗ್ನಿ ಮತ್ತು ಸೂರ್ಯನ ಸಂಕೇತ , ಜ್ಞಾನದ ಸಂಕೇತ , ಜೀವದ ಸಂಕೇತ ಮತ್ತು ಭಕ್ತಿಯ ಸಂಕೇತ . ಪ್ರಾಚೀನ ಕಾಲದಲ್ಲಿ ಮಾನವನ ಅದ್ಭುತ ಸಂಶೋಧನೆಯಲ್ಲಿ ಅಗ್ನಿಯೂ ಒಂದು . ಅಲ್ಲಿ ಬೆಂಕಿಯ ಸೂಡಿ ರಾತ್ರಿ ಹೊತ್ತಿನ ದಾರಿ ತೋರುವ ಮತ್ತು ಪ್ರಾಣಿಗಳ ಕಾಟದಿಂದ ತಪ್ಪಿಸಿಕೊಳ್ಳುವ ದೀಪವಾಗಿತ್ತು .
ಬಳಿಕ ಕಲ್ಲಿನ ಹಣತೆಗಳು , ದೀಪಸ್ತಂಭ ನಿರ್ಮಾಣವಾಗಿ ಅಲ್ಲಲ್ಲಿ ಬೆಳಕಿನ ಗೋಚರಕ್ಕೆ ಕಾರಣವಾಯಿತು . ಮುಂದೆ ಇದು ಅಲಂಕೃತ ಮಣ್ಣಿನ ಹಣತೆ , ಪ್ಲಾಸ್ಟಿಕ್ ದೀಪ , ಎಲೆಕ್ಟ್ರಾನಿಕ್ ದೀಪ , ಕಲ್ಲಿನ ದೀಪ ಹೀಗೆ ನಾನಾ ಬಗೆಯ ದೀಪಗಳ ಉಗಮಕ್ಕೆ ನಾಂದಿಯಾಯಿತು . ಅಗ್ನಿ ಮತ್ತು ಸೂರ್ಯ ಎಂದಾಗ ಉರಿಯುವ ಚಿತ್ರವೊಂದು ಮನದಲ್ಲಿ ಮೂಡುತ್ತದೆ . ಅದರಂತೆ ದೀಪವೂ ಸಹ ಒಂದು ಬೆಳಕಿನ ಸಂಕೇತ .
ಅರಿವಿನ ದೀವಿಗೆ ಎಂಬ ಮಾತನ್ನು ಕೇಳಿರುತ್ತೀರಿ ಅಥವಾ ಜ್ಞಾನ ಜ್ಯೋತಿ ಎಂಬ ಪದ ನಿಮ್ಮ ಕಿವಿಗೆ ಬಿದ್ದಿರುತ್ತದೆ . ಒಟ್ಟಿನಲ್ಲಿ ದೀಪವನ್ನು ನಮ್ಮೊಳಗಿನ ಓದು , ಜ್ಞಾನ ಮತ್ತು ಅರಿವಿನ ಸಾಂಕೇತಿಕ ರೂಪವಾಗಿಯೂ ಹೇಳಲಾಗುತ್ತದೆ .
ಭಕ್ತಿಯ ಸಂಕೇತವಾಗಿ ದೀಪವನ್ನು ಹೆಚ್ಚಾಗಿ ಬಳಸಲಾಗುತ್ತದೆ ಯಾವುದೇ ದೈವಿಕ ಕಾರ್ಯಗಳಿದ್ದರೂ ಪ್ರಥಮವಾಗಿ ದೀಪ ಹೊತ್ತಿಸಿ ನಮಸ್ಕರಿಸಿ ಮುಂದಿನ ಕಾರ್ಯ ಆರಂಭವಾ ಗುತ್ತದೆ . ಸ್ನಾನ ಮಾಡಿ ಮಡಿ ಮಾಡಿಕೊಂಡು ದೇವರಿಗೆ ದೀಪ ಹೊತ್ತಿಸುವುದು ಒಂದು ಸಾಂಪ್ರದಾಯಿಕ ಪರಂಪರೆಯ ಸಂಕೇತ , ಈ ದೀಪಗಳಿಂದಲೇ ವಿಶೇಷವಾಗಿ ಆಚರಿಸುವವ ಹಬ್ಬವೇ ದೀಪಾವಳಿ .
ಸುಮಾ ಕಂಚೀಪಾಲ್
Comments
Post a Comment