kannadanadi
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜರುಗುವ ಲಕ್ಷದೀಪೋತ್ಸವಕ್ಕೆ ಸೋಮವಾರ (ನವೆಂಬರ್ 29)ರಂದು ಪಾದಯಾತ್ರೆಯ ಮೂಲಕ ಚಾಲನೆ ದೊರೆಯಿತು. ಸುಮಾರು ಹತ್ತು ಸಾವಿರ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಾಡಿನ ವಿವಿಧ ಭಾಗದಿಂದ ಆಗಮಿಸಿದ ಭಕ್ತರು ಕಾಲ್ನಡಿಗೆಯ ಮೂಲಕ ಧರ್ಮಸ್ಥಳದೆಡೆಗೆ ಸಾಗಿದರು.
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ಮುಂಬಾಗದಿಂದ ಪಾದಯಾತ್ರೆ ಆರಂಭಗೊಂಡಿತು. ಸಾಗರೋಪಾದಿಯಲ್ಲಿ ಜನರು ಸಾಲುಗಟ್ಟಿ ಕಾಲ್ನಡಿಗೆಯ ಮೂಲಕ ಸಾಗುತ್ತಿದ್ದಾಗ ಭಕ್ತಿ ಮತ್ತು ಶಕ್ತಿ ಪಾದಯಾತ್ರಿಗಳಲ್ಲಿ ಎದ್ದು ತೋರುತ್ತಿತ್ತು. ಹಲವಾರು ತಂಡಗಳು ವಿವಿಧ ರೂಪಕ ಮತ್ತು ಮೆರವಣಿಗೆಯೊಟ್ಟಿಗೆ ಗೋವಿಂದ, ಮಂಜುನಾಥ ಹೀಗೆ ದೇವರ ಸ್ಮರಣೆ ಮಾಡುತ್ತಾ 10 ಕಿಮೀ ದೂರ ಸಾಗಿದರು.
ಪಾದಯಾತ್ರೆಯಲ್ಲಿ ವಯಸ್ಸಿನ ಮಿತಿ ಇಲ್ಲದೇ ವಯಸ್ಕರು, ಹಿರಿಯರು, ಪುಟ್ಟ ಮಕ್ಕಳು ಮತ್ತು ಮಹಿಳೆಯರು ಹೀಗೆ ಎಲ್ಲ ವಯೋಮಾನದವರು ಪಾಲ್ಗೊಂಡು ಹೆಜ್ಜೆಹಾಕಿದರು. ಅಲ್ಲಲ್ಲಿ ಪಾದಯಾತ್ರಿಗಳ ದಾಹ ತಣಿಸುವದಕ್ಕೆಂದೇ ಪಾನೀಯ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು. ನಾರದ ವೇಷ ಧರಿಸಿ ಸೈಕಲ್ ಮೇಲೆ ಸವಾರಿ ನಡೆಸಿದ ಬೈಂದೂರಿನ ಯುವಕರೊಬ್ಬರ ವೈಖರಿ ಪಾದಯಾತ್ರೆಯಲ್ಲಿ ವಿಶೇಷ ಎನಿಸಿತು.
ವಿಪತ್ತು ನಿರ್ವಹಣಾ ತಂಡ ಹಾಗೂ ಬದುಕು ಕಟ್ಟೋಣಬನ್ನಿ ಹೀಗೆ ಹಲವು ತಂಡದ ಸದಸ್ಯರು ಸಮವಸ್ತ್ರ ಧರಿಸಿ ಶಿಸ್ತಿನ ನಡಿಗೆಯಲ್ಲಿ ಕಾಣಿಸಿಕೊಂಡರು. ಪಾದಯಾತ್ರೆ ಮುಂಭಾಗದಲ್ಲಿ ದೇವರ ಭಜನೆ, ಯಂತ್ರಶ್ರೀ, ಶಿಕ್ಷಣ , ಜಾನಪದ ವಾದ್ಯ ಮೇಳ, ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ಕೈಗಾರಿಕೆಗಳಿಗೆ ಸಂಬಧಿಸಿದ ಸ್ತಬ್ಧ ಚಿತ್ರ ಮೆರವಣಿಗೆ ಜನರ ಗಮನ ಸೆಳೆದವು.
ಸುಮಾ.ಕಂಚೀಪಾಲ್
Comments
Post a Comment