Skip to main content

ಬಾಲ್ಯದ ಘಮಲು ಭಾಗ ೨

ಚಿಕ್ಕವರಿರುವಾಗ ಮೂಗಲ್ಲಿ ಸುಂಬಳ ಸುರಿಸಿ ಸೊರ ಸೊರ ಸ್ವರ ಹೊರಡಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಹೀಗೆ,... ಬರೆಯೋದಿಕ್ಕೆ ಅದು ಇದು ವಿಷಯ ಹೊಳೆಯುತ್ತಿರುವಾಗ ಬಾಲ್ಯದ ಕುರಿತೇ ಬರೆಯಬೇಕು ಎಂಬ ಮಾತು ಬಂತು ಅದಲ್ಲದೇ ವಿಷಯವನ್ನೂ ಅವರೇ ಸೂಚಿಸಿದ್ದರಿಂದ ಬಾಲ್ಯದ ಬುತ್ತಿಗಂಟಿಗೆ ಇನ್ನೊಂದಿಷ್ಟು ನೆನಪುಗಳನ್ನು ತುಂಬೋಣ ಎನಿಸಿತು, ನಿಮ್ಮ ಬಾಲ್ಯದ ನೆನಪುಗಳೇನಾದರು ಇದ್ದರೆ ನನಗೂ ತಿಳಿಸಿ.

ಒಂದೊಮ್ಮೆ ಜ್ವರ ಬಂದರೂ ಶಾಲೆಗೆ ರಜಾ ಹಾಕದ ದಿನಗಳು ಅವು, ಅದೆಷ್ಟು ಮುಖ್ಯವಾದ ತರಗತಿಗಳು ಇರುತ್ತಿದ್ದವೋ? ಏನೋ!? ಎಂಬಂತೆ ಹಠಮಾಡಿ ಶಾಲೆಗೆ ಹೋಗೋದು, ಅರ್ಧ ತರಗತಿಯಲ್ಲಿ ಸುಸ್ತಾಗಿ ಬಿದ್ದು ಶಾಲೆಯವರೆಗೆ ಮನೆಗೆ ಕಳುಹಿಸಿ ಕೊಡುತ್ತಿದ್ದ ದಿನಗಳು ನಮ್ಮ ಕನ್ನಡ ಶಾಲೆ ದಿನಗಳು.

ಆಟ ಆಡುವಾಗ ಬಿದ್ದು ಮೊಣಕಾಲಿಗೆ ಆದ ಗಾಯ ಇನ್ನೇನು ಮಾಸುತ್ತದೆ ಎನ್ನುವಷ್ಟರಲ್ಲಿ ಮತ್ತೆ ಬೀಳದೆ ಇದ್ದರೆ ನಮ್ಮ ಜಾಯಮಾನಕ್ಕೆ‌ ಅವಮಾನ ಎನ್ನುವ ಗಂಡು ಹುಡುಗರು. ಕೈ ಕಾಲಿಗೆ ಆದ ಗಾಯಕ್ಕೆಲ್ಲಾ ಬೇರೆ ಮದ್ದೇನು ಇಲ್ಲ. ತಕ್ಷಣ ಹಾದಿ ಬದಿಯ ಕಾಂಗ್ರೇಸ್ ಗಿಡ ಸಿಕ್ಕರೆ ಸಾಕು ಅದನ್ನೇ ಅರೆದು ಹಚ್ಚುವುದು. ಅದರ ಹಸಿರು ರಸ ರಕ್ತಕ್ಕೆ ಬಿದ್ದಾಗ ಗಾಯದಿಂದ ರಕ್ತ ಸೋರುವುದು ನಿಲ್ಲುತ್ತಿತ್ತು. 

ಸರಿಯಾಗಿ ಟೈ ಕಟ್ಟಿಕೊಳ್ಳಲೂ ಬರದ ಕಾಲ.

ಇನ್ನು ವರ್ಷಕ್ಕೊಂದು 
ಪ್ರತಿಭಾ ಕಾರಂಜಿ, ಕ್ರೀಡಾಕೂಟ,
ಪರೀಕ್ಷೆ, ಶಾರದಾ ಪೂಜೆ, 
ವಾರ್ಷಿಕೋತ್ಸವ ಬೇಸಿಗೆ ರಜ,
 ಜನವರಿ ಇಪ್ಪತ್ತಾರರ ಭಾಷಣ, 
ಇಷ್ಟಾದರೆ ಆಯಿತಲ್ಲ ಪೂರ್ತಿ
ಒಂದು ನತ್ತೆ ಕಳೆದು ಇನ್ನೊಂದು ನೆತ್ತೆ.

ದೀಪ ಬೆಳಗುವ ಖುಷಿ.

ಮನೆಗೆ ಬಂದರೆ ರಜೆಯಲ್ಲಿ ನೆಂಟರ ಮನೆ ತಿರುಗಾಟ ಆಟತ್ತಿ ಮನೆ ಆಟ ಮಣ್ಣಿನ‌ ಗೊಂಬೆ , ಕರಟದ ಪಾತ್ರೆ, ಎಲೆಗಳೆ ದುಡ್ಡು ಕಾಸು ಎಂದೆಲ್ಲಾ ಇದ್ದ ಬದ್ದ ಒಂದೇ ಜಾತಿಯ ಎಲೆಗಳೆಲ್ಲ ಕೊಯ್ದು ಬ್ಯಾಂಕಿನಲ್ಲಿಡುವುದು, ಸಲ್ಪ ದೊಡ್ಡದಾಗಿರುವ ಎಲೆಗೆ ಮೌಲ್ಯ ಹೆಚ್ಚು ಅದನ್ನು ಕೊಟ್ಟು ಸುಳ್ಳು ಸುಳ್ಳು ಸಾಮಾನು ಖರೀದಿ ಮಾಡುವುದು, ಈ ಆಟಗಳೇ ಮುಂದೆ ನಿಜವಾಗುತ್ತಾ ಜೀವನ ರೂಪಿಸುತ್ತವೆ ಎನ್ನುವ ಅಂಶ ಆಗ ಗೊತ್ತಿರುವುದಿಲ್ಲ.

  ಯಾವ ಕಟ್ಟಡದ ಉದ್ಘಾಟನೆಗೂ ಈ ನಳಕ್ಕೆ ಸಿಕ್ಕಷ್ಟು ಪ್ರಾಮುಖ್ಯತೆ ಇಲ್ಲ !

ಹುಡುಗರಿಗೆ ಒಂದು ಟೈಯರ್ ಸಿಕ್ಕರೆ ಸಾಕು ಅದೇ ಅವರ ಗಾಡಿ, ಹುಡುಗಿಯರದು ಗಿರಿಗಿಟ್ಟಲೆ ಮತ್ತು ಕಲ್ಲಾಟ ಬಲು ಜೋರು, ಐದು ಕಲ್ಲಿನ ಆಟ, ನಾಯಿ ಮೂಳೆ, ಜೋಡಿಬಲೆ ಆಹಾ! ನೆನಯುತ್ತಿದ್ದರೆ ಮತ್ತೆ ಈ ಜಂಜಾಟಗಳನ್ನು ಬಿಟ್ಟು ಮತ್ತೆ ಆಡೋಣ ಎನಿಸುವುದಿಲ್ಲವೇ? 

ದಿನ ಬೆಳಗಾದರೆ ಕಸ ಹೆಕ್ಕಬೇಕು

ಬಾಲಮಂಗಳ, ಚಂಪಕ, ಮಂಡೂರಾಯನ‌ ಕತೆ, 
ಪ್ರಜಾವಾಣಿ ಪೇಪರ್ ಕೊನೆಯ ಭಾನುಪುರವಣಿ ,
ಚುಕ್ಕಿ ಸೇರಿಸಿ ಚಿತ್ರಬರೆದು ಅದಕ್ಕೆ ಬಣ್ಣ ಹಾಕುವುದು, ಎಲೆಗಳನ್ನು ಪಟ್ಟಿಗಂಟಿಸುವುದು, 
ಬೇರೆಲೆ ಎಂಬ ಒಂದು ಜಾತಿ ಎಲೆ ಇರುತ್ತದೆ ಅದನ್ನು ಪಟ್ಟಿಯೊಳಗಿಟ್ಟು ಎಲೆಯ ತುದಿಗಳಿಗೆಲ್ಲಾ ಬೇರು ಬರಿಸುವುದು, ಬಣ್ಣ ಬಣ್ಣದ ಚಾಕ್ ಪೀಸ್ ಸಂಗ್ರಹಿಸುವುದು,
ದಾರಿ ಉದ್ದಕ್ಕು ಕಲ್ಲುಗಳಿಗೆ ಹೊಸ ವರ್ಷದ ಶುಭಾಶಯ ಬರೆಯೋದು
ಸಂಕ್ರಾಂತಿ ಬಂತೆಂದರೆ ಕಾಳಿನಲ್ಲಿ ಹೊಡೆದಾಡುವುದು.

ಬಾಲ್ಯದ ಹಕ್ಕಿಗೆ ಅದೆಷ್ಟು ಗರಿಗಳಿವೆ ಅಲ್ಲವಾ? 





Comments

Popular posts from this blog

ದೀಪಾವಳಿ - ತವರಲ್ಲಿ ದೊಡ್ಡಬ್ಬ

ಹಾಯ್! ನಿಮ್ಮನ್ನೆಲ್ಲ ಮಾತಾಡಿಸದೆ ಹಲವು ದಿನಗಳೇ ಕಳೆದಿವೆ. ಪರಿಸ್ಥಿತಿ ಕೈಗೂಡಿಬರದ ಕಾರಣ ಹಲವರಲ್ಲಿ ಕ್ಷಮೆ ಕೋರುತ್ತಾ ಮತ್ತೆ ಬರೆಯುತ್ತಿರುವೆ. ಮುಖ್ಯವಾಗಿ ಇದು ಸುಜಾತಕ್ಕನಿಗಾಗಿಯೇ ಪೋಸ್ಟ್ ಮಾಡುತ್ತಿರುವ ಬರಹ. ದೂರದ ಅಮೇರಿಕಾದಲ್ಲಿದ್ದುಕೊಂಡು ತವರಿನ ನೆನಪಲ್ಲೇ ದಿನ ಕಳೆಯುವ ಅವಳು, ನನ್ನನ್ನು ಹಬ್ಬಕ್ಕೆ ಕರೆಯಲು ಬಂದ ತವರ ಬಳಗದ ಫೋಟೋ ನೋಡಿಯೇ ಭಾವುಕಳಾಗಿ ಬ್ಲಾಗ್ ಬರಿ ಎಂದಿದ್ದಳು. ಆಗಾಗ ಮೆಸೇಜ್ ಮಾಡಿಯೂ ಕೇಳುತ್ತಿದ್ದಳು. ಆದರೆ, ನಾನು ಅಸಹಾಯಕಳಾಗಿದ್ದೆ. ಬರೆಯುವ ಮನಸಿದ್ದರೂ, ಬರೆಯಲು ಸಾಧ್ಯವಾಗಿರಲಿಲ್ಲ. ಇದಿಗ ಈ ಹಿಂದೆ ಬರೆದಿಟ್ಟಿದ್ದ  ಬ್ಲಾಗ್‌ನ ಅರ್ಧವನ್ನು ಮತ್ತೆ ಮುಂದುವರಿಸಿ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದೇನೆ. ಓದಿ... ದೀಪಾವಳಿ ಎಂದರೆ ಉತ್ತರ ಕನ್ನಡ ಭಾಗದಲ್ಲಿ ಯಾವಾಗಲೂ ಒಂದು ದೊಡ್ಡ ಹಬ್ಬ. ನವರಾತ್ರಿ, ಚೌತಿ, ನಾಗರಪಂಚಮಿ, ಯುಗಾದಿ ಹೀಗೆ ಹತ್ತಾರು ಹಬ್ಬಗಳಿದ್ದರೂ ದೊಡ್ಡ ಹಬ್ಬ ಎಂದು ಕರೆಯುವುದು ಮಾತ್ರ ದೀಪಾವಳಿಯನ್ನು. ಅದರಲ್ಲೂ ಹೊಸದಾಗಿ ಮನೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದರೆ ಆ ವರ್ಷ ಇನ್ನೂ ದೊಡ್ಡ ಹಬ್ಬ. ಅಳಿಯ ಹಾಗೂ ಮಗಳನ್ನು ಕರೆದು ಅಭ್ಯಂಜನ ಸ್ನಾನ ಮಾಡಿಸಿ, ಅವರಿಗೆ ಹೊಸ ಬಟ್ಟೆ ಹಾಗೂ ಶಕ್ತ್ಯಾನುಸಾರ ಉಡುಗೊರೆ ಕೊಟ್ಟು ಹಬ್ಬ ಮಾಡುತ್ತಾರೆ. ಈ ವರ್ಷ ನನಗೆ ಇದು ಹೊಸ ಹಬ್ಬವಾಗಿತ್ತು. ಹಾಗಾಗಿ ನಮ್ಮ ಮನೆಯಲ್ಲಿ ಹಬ್ಬ ಜೋರಾಗಿಯೇ ಇತ್ತು. ಇದು ಎಷ್ಟು ಹೊಸ ಹಬ್ಬ ಎಂದರೆ... ಎಲ್ಲಾದರೂ ಹೋದಾಗ ಯ...

ಒಂದು ಬಸ್ಸಿನ‌ ಪುರಾಣ ಕಥನ

ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ.  9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...

ಕೊಡೆ ಕೊಂಡು ಹೋದರೆ ಬಾರದ ಮಳೆ

ಹಾಯ್ ಎಲ್ಲ ಅರಾಮಾ? ಮಳೆ ಬಂದ್ರೆ ಸಾಕು, ಒಂದರ ಹಿಂದೆ ಒಂದು ಕಥೆ ಸಹಸ್ರಪದಿಯಂತೆ ಹರಿದುಬರುತ್ತೆ. ಮಳೆಗಾಲದಲ್ಲಿ ನಾನು ಬರೆಯುವ ಬ್ಲಾಗ್ ಸಂಖ್ಯೆ ಹೆಚ್ಚಾಗಬಹುದು. ಗುಡುಗು, ಮಿಂಚು ಮತ್ತು ಮಳೆ ಸದ್ದಿಗೆ ಏನಾದರೂ ಬರೀಬೇಕು ಅನ್ನೋ ಹಂಬಲ ಹೆಚ್ಚು. ಇವತ್ತು ನಾನು ಬೆಂಗಳೂರ್ ಮಳೆ ಮತ್ತೆ, ನಮ್ಮೂರ್ ಮಳೆ ಬಗ್ಗೆ ಬರೀತಾ ಇದ್ದೀನಿ. ಈ ಟಾಪಿಕ್ ಓಕೆನಾ?  ಓಕೆನೆ ಬಿಡಿ, ಸುಮಾ ಬ್ಲಾಗ್ ಬರ್ಯೋದೆ ಅಪರೂಪ ಆಗಿರೋವಾಗ ನೀವ್ ಓದದೆ ಇರಲ್ಲ ಅನ್ನೋ ಭರವಸೆಲೇ ಬರೀತೀನಿ. ಬೆಂಗಳೂರಲ್ಲಿ ಮಳೆ ಬಂದ್ರೆ ನೀರು ಇಂಗೋಕೆ ಜಾಗ ಇಲ್ದೆ ಕೆಲವು ಕಡೆ ಅವಾಂತರ ಆಗೋದು ನಿಜ. ಆದ್ರೆ, ಊರಲ್ಲಿ ಹಾಗಲ್ಲ ನೋಡಿ. ಅಲ್ಲಿ ಸಿಮೆಂಟ್ ರೋಡಿಗಿಂತ ಮಣ್ಣು ರಸ್ತೆಯೇ ಜಾಸ್ತಿ. ನೀರು ಇಂಗುತ್ತೆ. ಸಾಧಾರಣ ಮಳೆ ಬಂದ್ರೆ ಇಬ್ಬನಿ ಬಿದ್ದ ಹಾಗಿರುತ್ತೆ. ಆದ್ರೆ ಬೆಂಗಳೂರಲ್ಲಿ ಸಾಧಾರಣ ಮಳೆ ಬಂದ್ರೂ ಪ್ರವಾಹವೇ ಉಕ್ಕಿ ಬರೋದು. ನಿನ್ನೆ ಆಫೀಸಿಗೆ ಬರೋಕ್ ಆಗ್ದೆ ಇದ್ರೆ ಮನೆಯಿಂದಲೇ ಕೆಲಸ ಮಾಡಿ ಅಂತ 'Work From Home' ಕೊಟ್ಟಿದ್ರು. ಯಾಕಂದ್ರೆ, ಮಳೆ ಬಂದು ಅಲ್ಲಲ್ಲಿ ಮರ ಬಿದ್ದು, ನೀರ್ ತುಂಬಿ ಟ್ರಾಫಿಕ್ ಹೆಚ್ಚಾಗಿತ್ತು. ಆದ್ರೆ ಆಫೀಸಿಗೆ ನಾನ್ ಹೋಗಿದ್ದೆ. ಬೆಂಗಳೂರಿಗೆ ಕೆಲಸಕ್ಕೆ ಅಂತಲೇ ಬಂದಿರೋ ನನ್ ತರದೋರೆಲ್ಲ ಅವತ್ತು ನಗ್ತಾ ಇದ್ರು. "ಇದೂ ಒಂದ್ ಮಳೆನಾ? ಮಳೆ ಅಂದ್ರೆ ನಮ್ಮೂರಲ್ ಬರತ್ತಲ್ಲ, ಅದು" ಅಷ್ಟಂದಿದ್ದೇ ತಡ ಹಳ್ಳಿಯಿಂದ ಬಂದಿದ್ದ ಜನ ಎಲ್ಲ ಸೇರಿ ಒ...