ಬೆಂಗಳೂರಿನಲ್ಲಿರುವ ನಮಗೆ ಊರಿನ ಸುದ್ದಿ ತಿಳಿಯಲು ಹೆಚ್ಚೇನು ಸಮಯ ಬೇಡ. ಆದರೂ ನನಗೆ ಈ ವಿಷಯ ತುಸು ತಡವಾಗೇ ಗೊತ್ತಾಗಿದ್ದು. ಅಮ್ಮ ಫೋನ್ ಮಾಡಿ ವಿಷಯ ಹೌದಾ? ಅಂತ ಅಂದ ತಕ್ಷಣ ಯಾವ ವಿಷಯ ಅಂತ ಗೊತ್ತಾಗಲಿಲ್ಲ. ನಂತರ ನಿಧಾನಕ್ಕೆ ಅರ್ಥವಾಯ್ತು. ಹೇಗಂದ್ರು ಮರುದಿನ ಶನಿವಾರ ಊರಿಗೆ ಹೊರಟೇ ಬಿಡೋಣ ಅಂದುಕೊಂಡರೆ ಅನಿವಾರ್ಯವಾಗಿ ಮತ್ತೆ ಮೂರು ದಿನಗಳ ನಂತರ ಬಸ್ ಬುಕ್ ಆಗಿತ್ತು. ಇದೆಲ್ಲ ಒಂದು ಕಡೆಯ ಯೋಚನೆ ಆದರೆ. ಸುಬ್ಬಜ್ಜ, ರಾಮಜ್ಜರ ವಿಡಿಯೋ ತುಣುಕೊಂದು ಮನಸಿಗೆ ನಾಟಿತು. ಹಾಗೇ ಮೇಗಣ್ಮನೆ ಅಜ್ಜ (ಸುಬ್ಬಜ್ಜ) ನನ್ನ ಅಜ್ಜ ತೀರಿಕೊಂಡಾಗ ರಾಮಾ, ಏ ರಾಮಾ, ಎನ್ನುತ್ತಾ ಮೈಮುಟ್ಟಿ ಕಣ್ಣೀರು ಸುರಿಸಿದ್ದು ನೆನಪಾಗಿ ಹೋಯ್ತು. ಎಲ್ಲ ತಮ್ಮಂದಿರನ್ನು ಕಳೆದುಕೊಂಡು ಅಷ್ಟೊಂದು ಅಪಾರ ದುಃಖವನ್ನು ವರ್ಷದಿಂದ ವರ್ಷಕ್ಕೆ ನೋಡುತ್ತಲೇ ತನ್ನ ತಮ್ಮಂದಿರ ಅಳಿವನ್ನು ಕಣ್ಣಾರೆ ಕಂಡು ಮರುಗುತ್ತಲೇ ಬಂದವ ಮೇಗಣ್ಮನೆ ಅಜ್ಜ. ತಮ್ಮಂದಿರು ಹೋದಾಗಲೆಲ್ಲ ಮಂಕಾಗುತ್ತಾ ಬಂದಿದ್ದ. ನಮ್ಮ ಮನೆ ಕಂಚೀಪಾಲಿನ ಹಿರಿಕೊಂಡಿಗಳೆಲ್ಲವೂ ಈಗ ಸುಬ್ಬಜ್ಜನ ಅಂತ್ಯದಿಂದ ಕಳಚಿಕೊಂಡಂತಾಯಿತು. ನನಗೆ ಒಟ್ಟು 4 ಜನ ಮನೆ ಅಜ್ಜಂದಿರು. ಒಂಭತ್ತು ಜನ ಅಜ್ಜನ ಮನೆ ಅಜ್ಜಂದಿರು. ಈಗ ಮನೆಯ ನಾಲ್ಕೂ ಅಜ್ಜಂದಿರೂ ಇಹದ ಋಣ ಮುಗಿಸಿಕೊಂಡು ಹೊರಟಿದ್ದಾರೆ. ಎಲ್ಲರಿಗೂ ಹಿರಿಯಣ್ಣನಾಗಿದ್ದ ಸುಬ್ಬಜ್ಜನೂ ನಿನ್ನೆ ಹೋಗಿಬಿಟ್ಟ. ಯಾವಾಗಲೂ ನನ್ನ ಅಜ್ಜ ರಾಮಜ್ಜ ಹಾಗ...