ಪ್ರತಿದಿನ ಬೆಳಗ್ಗೆ ರೆಡಿಯಾಗಿ ಆಫೀಸಿಗೆ ಹೊರಡುವಾಗ ತಡವಾಯ್ತು ಎಂಬ ಗಾಬರಿಯೊಟ್ಟಿಗೆ ಹೊರಡುವುದು. ಆದರೆ ಮನೆ ಬಿಟ್ಟು ರಸ್ತೆಗೆ ಕಾಲಿಟ್ಟ ತಕ್ಷಣ ಹಳದಿ ಹೂಗಳ ಹಾಸಿಗೆ ಕಂಡು ಮನ ಕುಣಿಯುತ್ತದೆ. ಸಿಕ್ಕ ಸಿಕ್ಕದ್ದನ್ನೆಲ್ಲಾ ಫೋಟೋ ತೆಗೆಯುತ್ತಾ ಇನ್ನಷ್ಟು ತಡವಾಗಿಬಿಡುತ್ತದೆ. ನನ್ನ ಪಾಲಿಗೆ ಆ ರಸ್ತೆ ಬರಿ ಡಾಂಬರು ರಸ್ತೆಯಲ್ಲ, ಅದು ಹೂವುಗಳ ಹಳದಿ ಹೊದಿಕೆ ಹೊದ್ದ ರಾಜಮಾರ್ಗ. ಆ ಹಳದಿ ಹೂಗಳನ್ನು ಕಂಡ ತಕ್ಷಣ ನನ್ನ ಕೈ ತಾನಾಗಿಯೇ ಬ್ಯಾಗ್ ಒಳಗೆ ಹೋಗಿ ಮೊಬೈಲ್ ಹುಡುಕುತ್ತದೆ. ಮೊಬೈಲ್‌ನಲ್ಲಿ ಚಾರ್ಜ್ ಎಷ್ಟಿದೆ? ಸ್ಟೋರೇಜ್ ಫುಲ್ ಆಗಿದೆಯೇ? ಆಫೀಸಿಗೆ ತಡವಾಗುತ್ತಿದೆಯೇ? ಯಾವುದರ ಚಿಂತೆಯೂ ಇಲ್ಲ. ನನ್ನ ಗಡಿಬಿಡಿಯೇನಿದ್ದರೂ ಆ ಹೂವುಗಳನ್ನು ನನ್ನ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯುವುದರಲ್ಲೇ ಇರುತ್ತದೆ. ಹಾಗೆ ನಾಲ್ಕು ಹೆಜ್ಜೆ ಮುಂದೆ ನಡೆದರೆ ಸಾಕು, ಅಲ್ಲಿ ಮತ್ತೊಂದು ವಿಸ್ಮಯ. ಹಳದಿ ಹೂಗಳ ನಡುವೆ ಅಲ್ಲಲ್ಲಿ ನೀಲಿ ಮಿಶ್ರಿತ ಬಿಳಿ ಮೊಗ್ಗಿನ ರೀತಿಯ ಹೂಗಳು ಕಣ್ಣು ಮಿಟುಕಿಸುತ್ತಾ ನನ್ನನ್ನು ಕರೆಯುತ್ತಿರುತ್ತವೆ. ಅವುಗಳ ಆ ಮುಗ್ಧ ನೋಟಕ್ಕೆ ಮನಸೋತು ಮತ್ತೆ ಅಲ್ಲಿ ಎರಡು ನಿಮಿಷ ನಿಲ್ಲಲೇಬೇಕು. ನಡೆಯುವುದು, ಹೂವು ನೋಡಿ ನಿಲ್ಲುವುದು, ಫೋಟೋ ತೆಗೆಯುವುದು—ಇದೇ ಆಯಿತು ನನ್ನ ನಿತ್ಯದ ಕಾಯಕ. ಆಫೀಸಿಗೆ ಮುಟ್ಟುವುದು ತಡವಾದರೂ ನನ್ನ ಮನಸ್ಸು ಮಾತ್ರ ಆ ಹೂವುಗಳ ಬಣ್ಣದಲ್ಲೇ ಮಿಂದೆದ್ದು ಫ್ರೆಶ...