ಅಷ್ಟಕ್ಕೂ ನಾವು ಮದುವೆ ಆಗಿದ್ದೇ ಬರೋಬ್ಬರಿ ಚುನಾವಣೆಯ ಕಾಲಗತಿಯಲ್ಲಿ. ನಾವು ಅಂದರೆ ಮತ್ಯಾರೂ ಅಲ್ಲ, ನಾನು ಮತ್ತು ಸುಮಾ. ಇಬ್ಬರೂ ಮಾಧ್ಯಮದಲ್ಲಿ, ಹೇಳಿಕೇಳಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದು ಮತದಾನ ಮುಗಿದರೂ ನಾಕು ದಿನ ರಜೆ ಹಾಕಲು ಅನುವು ಮಾಡಿರಲಿಲ್ಲ. ಚುನಾವಣೆ ಮುಗಿದು, ಸರ್ಕಾರ- ಮಂತ್ರಿ ಮಂಡಲ ರಚನೆಯೂ ಆಗಿಹೋದ ಮೇಲಾದರೂ ಒಂದು ಕೈ ನೋಡೇಬಿಡೋಣ ಎಂದು ಹೊರಟೆವು. ನಮಗೆ ಬೇಕಿದ್ದು, ಅದಾಗೇ ಕೂಡಿಬಂದದ್ದು ಎಲ್ಲವೂ ಸೇರಿ ಒಂದು ರಾತ್ರಿ ಕಳೆದು ಬೆಳಗು ಕೂಗುವದರಲ್ಲಿ ಒಂದು ಮುತ್ತಿನ ನಗರಿ! ನಮ್ಮ ಸಮಯಕ್ಕೆ ರೈಲು, ರೈಲಿನ ಸಮಯಕ್ಕೆ ನಾವು ಸೆಟ್ ಆಗುವುದಿಲ್ಲ ಎಂದು ಅಳೆದು ತೂಗಿ ಕೊನೆಕ್ಷಣದಲ್ಲಿ ಬಸ್ ಮೆಟ್ಟಿಲು ಹತ್ತುವ ನಿರ್ಧಾರ ಮಾಡಿದ್ದಾಯಿತು. ಮೊದಲು ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ಟಿಎಸ್ಆರ್‌ಟಿಸಿ ಬಸ್ ಪರಿಶೀಲಿಸಲಾಗಿ ಬಸ್‌ಗಳ ಚಿತ್ರಗಳೇ ನಮ್ಮನ್ನು ಭ್ರಮನಿರಸನ ಮಾಡಿದ್ದು ಸುಳ್ಳಲ್ಲ. ತೆಲಂಗಾಣದ ಲಹರಿ ಹೆಸರಿನ ಬಸ್‌ಗಳು ನಮ್ಮ ರಾಜಹಂಸ ಇದ್ದಹಾಗೆ, ಆದರೆ ನಮ್ಮ ಯಲ್ಲಾಪುರದಿಂದ ಕಾರವಾರಕ್ಕೋ, ಹುಬ್ಬಳ್ಳಿಗೋ ಬುರುಬುರುನೇ ತಿರುಗುವ, ಕೊನೆಗೆ ಕೊರೋನಾಕ್ಕಿಂತ ಮೊದಲು ಕಮ್ಮಾಣಿಯೋ ಕೆಳಾಸೆಗಳೆಂಬೋ ಮೂಲೆ ಮೂಲೆಯ ಊರುಗಳಿಗೆ ಓಡುವ ಬಸ್‌ಗಳೇ ಇವಕ್ಕಿಂತ ಚೆನ್ನ. ಆ ಲೆಕ್ಕದಲ್ಲಿ ನಮ್ಮ ಕೆಎಸ್ಆರ್‌ಟಿಸಿ ಎಷ್ಟೋ ಬೆಸ್ಟ್. ನಮ್ಮನ್ನು ಸುರಕ್ಷಿತವಾಗಿ ತಲುಪಿಸುವ ಹೊಣೆ ಕೆಎಸ್ಆರ್‌ಟಿಸಿ...