ಶೃಂಗೇರಿ ಬಸ್ ನಿಲ್ದಾಣ, ಸಮಯ ರಾತ್ರಿ 12:07. ಬ್ಲಾಗ್ ಬರಯಬೇಕು ಎಂದೆನಿಸಿ ಬರೆಯುತ್ತಿದ್ದೇನೆ. ಯಾವುದೋ ಒಂದು ಇದುವರೆಗೆ ಹೆಸರೂ ಕೇಳಿರದ ಬಸ್ ಬುಕ್ ಮಾಡಿ ಶೃಂಗೇರಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಇದಕ್ಕೆ ಮುಖ್ಯ ಕಾರಣ ಏನೆಂದರೆ ನಾವು ಪೂರ್ವ ನಿರ್ಧಾರಿತವಾಗಿ ಅಮ್ಮನವರ ದೇವಸ್ಥಾನಕ್ಕೆ ಬಂದವರಲ್ಲ. ಏನೋ ಪ್ರೇರಣೆಯಾಯಿತು, ಹಿಂದೆ ಮುಂದೆ ಯೋಚಿಸದೆ ಹೊರಟಿದ್ದೆವು. ಎಲ್ಲವೂ ಸೌಖ್ಯವಾಗಿ, ಶಾರದೆಯ ದರ್ಶನ ಮಾಡಿ, ಗುರುಗಳ ಪಾದಪೂಜೆ ಮಾಡುವ ಭಾಗ್ಯ ಸಿಕ್ಕಿ, ಕಿಗ್ಗಾ ದೇವಸ್ಥಾನ ಹಾಗೂ ಸಿರಿಮನೆ ಜಲಪಾತವನ್ನೂ ನೋಡಿ ಈ ದಿನ ಸಾಂಗವಾಯ್ತು ಎಂದು ಕಥೆ ಹೇಳುತ್ತಿರುವ ಹೊತ್ತಿಗೆ ಬಸ್ ಕೈಕೊಟ್ಟುಬಿಟ್ಟಿದೆ. 9:40ಕ್ಕೆ ಬರಬೇಕಿದ್ದ ಬಸ್ ಈಗ ಹನ್ನೆರಡು ಚಿಲ್ಲರೆ ಗಂಟೆಯಾದರೂ ಪತ್ತೆ ಇಲ್ಲ. ನಮ್ಮಂತೆಯೇ ಇದೇ ಬಸ್ಸಿಗೆ ಕಾದ ಹತ್ತಾರು ಜನರು ಇಲ್ಲೇ ಕುಳಿತಿದ್ದಾರೆ. ನಾಯಿಗಳು ಹಾಯಾಗಿ ನಿದ್ರೆ ಮಾಡುತ್ತಿದ್ದವು, ಒಂದಷ್ಟು ಹಸುಗಳೂ ಮೆಲುಕು ಹಾಕುತ್ತ ಮಲಗಿದ್ದವು. ಆದರೆ ನಮ್ಮೆಲ್ಲರ ಮನಸಿನಲ್ಲಿ ಊರು ಸೇರುವುದು ಹೇಗೆ ಎಂಬ ಪ್ರಶ್ನೆ ಅಲೆದಾಡುತ್ತಿತ್ತು. 10:30ರವರೆಗೆ ಎಲ್ಲರೂ ಶಾಂತ ರೀತಿಯಲ್ಲಿ ಕಾದರು. ಆ ನಂತರ ಎಲ್ಲರಿಗೂ ಮಾರನೆ ದಿನದ ಕೆಲಸಗಳು ನೆನಪಾಗತೊಡಗಿದವು. ನನ್ನೊಬ್ಬಳನ್ನು ಬಿಟ್ಟು ಉಳಿದವರೆಲ್ಲರಿಗೂ ನಾಳೆ ರಜೆ. ಕಾರಣ, ಭಾನುವಾರ. ನನಗೆ ವೀಕಾಪ್ ಭಾನುವಾರಕ್ಕಿರಲಿಲ್ಲ. ನನಗೆ ಇವರೆಲ್ಲರಿಗಿಂತ ...